ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಸೋಲು: ತಲೈವಾಸ್ ಕೋಚ್ ತಲೆದಂಡ

ಉದಯ ಕುಮಾರ್‌ಗೆ ತರಬೇತಿ ಹೊಣೆ
Last Updated 8 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಎರಡನೇ ವರ್ಷವೂ ತಮಿಳ್ ತಲೈವಾಸ್ ತಂಡವನ್ನು ಜಯದ ಹಾದಿಯಲ್ಲಿ ನಡೆಸಲು ವಿಫಲರಾದ ಕೋಚ್ ಎಡಚ್ಚೇರಿ ಭಾಸ್ಕರನ್ ರಾಜೀನಾಮೆ ನೀಡಿದ್ದಾರೆ.

ಅವರ ಬದಲಿಗೆ ಭಾರತ ತಂಡದ ಮಾಜಿ ಕೋಚ್ ಜೆ.ಉದಯಕುಮಾರ್ ಅವರನ್ನು ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ.

ಕಳೆದ ಬಾರಿ ಭಾಸ್ಕರನ್ ಅವರು ತಲೈವಾಸ್ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ ತಂಡ 22 ಪಂದ್ಯಗಳಲ್ಲಿ ಐದನ್ನು ಮಾತ್ರ ಗೆದ್ದಿತ್ತು. 13 ಸೋಲು ಮತ್ತು ನಾಲ್ಕು ಟೈಗಳೊಂದಿಗೆ ‘ಬಿ’ ವಲಯದಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು.

ಈ ಬಾರಿಯೂ ಅಜಯ್ ಠಾಕೂರ್ ನೇತೃತ್ವದ ತಂಡಕ್ಕೆ ಸೋಲಿನ ಸುಳಿಯಿಂದ ಮೇಲೇಳಲು ಆಗಲಿಲ್ಲ. ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ಎದುರು ಗೆದ್ದ ನಂತರ ಸತತ ಎರಡು ಸೋಲು ಕಂಡಿತ್ತು. ನಂತರ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಒಂದನ್ನು ಟೈ ಮಾಡಿಕೊಂಡಿತ್ತು.

ಅದರ ನಂತರ ಏಳು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಆಗಲಿಲ್ಲ. ಆರರಲ್ಲಿ ಸೋತ ತಂಡ ಒಂದನ್ನು ಟೈ ಮಾಡಿಕೊಂಡಿತ್ತು.

ಅಜಯ್ ಠಾಕೂರ್, ರಾಹುಲ್ ಚೌಧರಿ ಮತ್ತು ಮಂಜೀತ್ ಚಿಲ್ಲಾರ್ ಅವರಂಥ ಪ್ರಮುಖ ಆಟಗಾರರು ಇದ್ದರೂ ತಂತ್ರಗಳನ್ನು ಹೆಣೆಯುವಲ್ಲಿ ವೈಫಲ್ಯ ಕಂಡಿತ್ತು. ಸದ್ಯ ಮೂರರಲ್ಲಿ ಮಾತ್ರ ಜಯ ಗಳಿಸಿದ ತಂಡ 11ನೇ ಸ್ಥಾನದಲ್ಲಿದೆ.

‘ಕೆಲವೊಮ್ಮೆ ಯಾವುದೂ ನಾವಂದುಕೊಂಡಂತೆ ಆಗುವುದಿಲ್ಲ. ಈ ಬಾರಿ ಕೆಲವು ಪಂದ್ಯಗಳನ್ನು ಗೆದ್ದರೂ ಜಯದ ಲಯವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದೆ’ ಎಂದು ಭಾಸ್ಕರನ್ ಟ್ವೀಟ್ ಮಾಡಿದ್ದಾರೆ.

‘ಕೆಲವು ದಿನಗಳ ಮೊದಲೇ ರಾಜೀನಾಮೆ ನೀಡುವ ವಿಷಯವನ್ನು ತಂಡದ ಆಡಳಿತದ ಗಮನಕ್ಕೆ ತಂದಿದ್ದೆ. ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸಮಯ ಬೇಕು ಎಂದು ಹೇಳಿದ್ದರಿಂದ ಸ್ವಲ್ಪ ಸಮಯ ಕಾದಿದ್ದೆ. ಕಳೆದ ಗುರುವಾರ ತಂಡದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ರಾಜೀನಾಮೆ ನೀಡಲು ನಿರ್ಧರಿಸಿದೆ’ ಎಂದು ಅವರು ತಿಳಿಸಿದ್ದಾರೆ.

ಹೊಸ ಕೋಚ್‌ಗೂ ನಿರಾಸೆ: ಹೊಸ ಕೋಚ್ ಉದಯಕುಮಾರ್ ಕೂಡ ಮೊದಲ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ. ಭಾಸ್ಕರನ್ ರಾಜೀನಾಮೆ ನಂತರ ಭಾನುವಾರ ತಂಡ ಮೊದಲ ಬಾರಿ ಕಣಕ್ಕೆ ಇಳಿದಿತ್ತು. ದಬಂಗ್ ಡೆಲ್ಲಿ ವಿರುದ್ಧ ಸೋತಿತ್ತು. ಇದು ತಂಡದ 14ನೇ ಪಂದ್ಯ ಆಗಿತ್ತು. ಭಾಸ್ಕರನ್ ಕಾಸರಗೋಡಿನವರು. ಉದಯಕುಮಾರ್ ತಿರುವನಂತಪುರದವರಾಗಿದ್ದು ಏಷ್ಯಾಕಪ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡಕ್ಕೆ ಕೋಚ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT