ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಫಿಂಗ್‌ ಮಿಂಚು ಈ ಕಡಲ ಕುವರಿ ತನ್ವಿ

Last Updated 7 ಮಾರ್ಚ್ 2019, 7:14 IST
ಅಕ್ಷರ ಗಾತ್ರ

ಸಮುದ್ರದ ಅಬ್ಬರದಲೆಗಳೆಂದರೆ ತನ್ವಿ ಜಗದೀಶ್‌ ಅವರಿಗೆ ಭಯವೇ ಇಲ್ಲ. ಆದರೆ ಅಪಾರ ಪ್ರೀತಿ. ಆ ದೈತ್ಯಗಾತ್ರದ ಅಲೆಗಳೊಂದಿಗೆ ಸರಸವಾಡುವ ದಿಟ್ಟ ಹೃದಯಿ. ಅಂತರರಾಷ್ಟ್ರೀಯ ಮಟ್ಟದ ಸರ್ಫಿಂಗ್ ಪಟುವಾಗಿ ತನ್ವಿ ಈಗ ಮಿಂಚುತ್ತಿದ್ದಾರೆ.

ಆದರೆ ಬಾಲ್ಯದಲ್ಲಿ ಅವರು ಹೀಗಿರಲಿಲ್ಲ. ಕಡಲ ಸಾಮಿಪ್ಯದಲ್ಲಿ ಬೆಳೆದವರು. ಆದರೆ ಸಮುದ್ರಲೆಗಳನ್ನು ಕಂಡರೆ ಸಾಕು ಭಯದಿಂದ ದೂರ ಓಡುವ ಸ್ವಭಾವ ಇತ್ತು. ಅಸ್ತಮಾ ಕಾಯಿಲೆಯೂ ಬಾಧಿಸುತ್ತಿತ್ತು. ಇದರಿಂದಾಗಿ ಪೋಷಕರು ಆತಂಕ್ಕೆ ಒಳಗಾಗಿದ್ದರು. ಕಡಲಾಳದಲ್ಲಿಯೇ ನಡೆಯುವ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ನಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವ ಕುಡ್ಲದ ಮಹಿಳಾ ಸರ್ಫರ್‌ ಅವರಾಗಿದ್ದಾರೆ.

ವಿಶ್ವದಲ್ಲಿಯೇ ಸರ್ಫಿಂಗ್‌ ಹಾಗೂ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ನಲ್ಲಿ ಅಗ್ರ ಐವರಲ್ಲಿ ಸ್ಥಾನ ಪಡೆಯುವ ಉದ್ದೇಶ ಇಟ್ಟುಕೊಂಡು ದಿನವೂ ಜಿಮ್‌, ಯೋಗ, ಪ್ರಾಣಾಯಾಮ ಸೇರಿದಂತೆ ವಿವಿಧ ಕಸರತ್ತು ಮಾಡುತ್ತಿದ್ದಾರೆ. ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಕ್ರೀಡಾಪಟು ತನ್ವಿ. ಚಿಕ್ಕ ವಯಸ್ಸಿನಲ್ಲಿ ಇರುವಾಗ ಈಜು, ನೀರು ಎಂದರೆ ಹೆದರುತ್ತಿದ್ದರು.

ಮಂಗಳೂರಿನ ಶಾರದಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದು, ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ನಲ್ಲಿ ಸಾಧನೆ ಮಾಡುವ ಉದ್ದೇಶ ಇಟ್ಟುಕೊಂಡು ಓದಿಗೆ ಅಲ್ಪವಿರಾಮ ನೀಡಿದ್ದಾರೆ. ಓದಿನ ಜತೆಗೆ ಕ್ರೀಡೆಯಲ್ಲಿಯೂ ಉತ್ತಮ ಪ್ರದರ್ಶನ ತೋರುವ ಅದಮ್ಯ ಆಸೆ ತನ್ವಿ ಅವರದು. 2017 ರಲ್ಲಿ ಅಮೆರಿಕದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ನಲ್ಲಿ ಭಾರತ ಪ್ರತಿನಿಧಿಸುವ ಅವಕಾಶ ತನ್ವಿ ಗೆ ಲಭಿಸಿತು. ಅದರಲ್ಲಿ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ.

10 ವರ್ಷದ ಬಾಲಕಿಯಾಗಿದ್ದಾಗ ಮೂಲ್ಕಿಯಲ್ಲಿ ತಾತನ ಮನೆಗೆ ಬರುತ್ತಿದ್ದ ತನ್ವಿ ಅವರನ್ನು ಆಕರ್ಷಿಸಿದ್ದು, ಸರ್ಫಿಂಗ್‌ ಹಲಗೆಯ ಆಟ. ತಾತನ ಜತೆಗೆ ಆಗಾಗ್ಗೆ ಮೂಲ್ಕಿಯಲ್ಲಿರುವ ಮಂತ್ರ ಸರ್ಫಿಂಗ್‌ ಕ್ಲಬ್‌ ಆಶ್ರಮಕ್ಕೆ ಹೋಗಿ ಬರುತ್ತಿದ್ದರು. ಅಲ್ಲಿಗೆ ತನ್ವಿ ಅವರ ತಾತ ಭಜನೆಗೆ ಹೋಗುತ್ತಿದ್ದರು. ಅವರ ಜತೆಗೆ ತನ್ವಿ ಕೂಡಾ ಹೋಗುತ್ತಿದ್ದರು. ಅವರ ಗಮನ ಸೆಳೆದಿದ್ದು ಗೋಡೆ ಮೇಲಿನ ಸರ್ಫ್‌ ಚಿತ್ರ. ಅವರ ದೂರದ ಸಂಬಂಧಿ ಸಹೋದರ ಕೂಡಾ ಸರ್ಫಿಂಗ್‌ನಲ್ಲಿ ಆ ವೇಳೆಯಲ್ಲಿಯೇ ಉತ್ತಮ ಫಾರ್ಮ್‌ನಲ್ಲಿದ್ದರು. ಸಹೋದರ ಕೂಡ ತನ್ವಿಗೆ ಪ್ರೇರೇಪಣೆ ಆಗಿದ್ದರು. ಕಾಲಿಗೊಂದು ಹಲಗೆ ಕಟ್ಟಕೊಂಡು ಸರ್ಫಿಂಗ್‌ ಮಾಡುವ ಹುಡುಗರನ್ನು ನೋಡಿ ನಾನು ಕೂಡಾ ಒಮ್ಮೆ ಇದೇ ರೀತಿ ಆಡಬೇಕು ಎಂಬ ಆಸೆ ತನ್ವಿ ಅವರನ್ನು ಕಾಡಿತ್ತು.

ಆರಂಭದಲ್ಲಿ ಸ್ಥಳೀಯ ಮಟ್ಟದಲ್ಲಿ ಸರ್ಫಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ತನ್ವಿ ಆಸೆಗೆ ಅಪ್ಪ ಜಗದೀಶ ಒಪ್ಪಿಗೆ ನೀಡಿರಲಿಲ್ಲ. ಮಗಳು ಇಂತಹ ಸಾಹಸಮಯ ಕ್ರೀಡೆ ಕಲಿಯುವುದು ಅಪ್ಪನಿಗೆ ಇಷ್ಟ ಕೂಡಾ ಇರಲಿಲ್ಲ. ಅಪಾಯಕಾರಿ ಕ್ರೀಡೆಯತ್ತ ಒಲವು ತೋರಿಸುವುದು ಯಾವ ತಂದೆ– ತಾಯಿಗೂ ಇಷ್ಟ ಪಡಲ್ಲ. ಅದನ್ನೇ ತನ್ವಿ ಅವರ ತಂದೆ ಕೂಡಾ ಮಾಡಿದ್ದರು. ಆದರೆ, ಈಗ ತಂದೆ ಜಗದೀಶ ಮಗಳ ಕ್ರೀಡಾ ಸಾಧನೆಗೆ ಬೆನ್ನು ತಟ್ಟುತ್ತಿದ್ದಾರೆ. ತಾಯಿ ಕವಿತಾ ಕೂಡ ಮಗಳ ಕ್ರೀಡೋತ್ಸಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ತನ್ವಿ ಅವರ ಪೋಷಕರು ಸುರತ್ಕಲ್‌ನಲ್ಲಿ ವಾಸವಾಗಿದ್ದಾರೆ.

2014ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ನಲ್ಲಿ ಪಾಲ್ಗೊಂಡು ಪ್ರಥಮ ರೇಸರ್‌ ಎಂಬ ಕೀರ್ತಿಗೆ ಪಾತ್ರರಾದರು. ನಂತರ 2015ರಲ್ಲಿ ತಮಿಳುನಾಡಿನ ಮನಪಾಡನಲ್ಲಿ ನಡೆದ ಪೆಡ್ಲಿಂಗ್‌ ಸ್ಟ್ಯಾಂಡ್‌ ಅಪ್‌ ಸರ್ಫಿಂಗ್‌ನಲ್ಲಿಯೂ ಮಿಂಚಿ ಚಿನ್ನದ ಪದಕ ಪಡೆದುಕೊಂಡರು. 2016ರಲ್ಲಿ ಮತ್ತೆ ತಮಿಳುನಾಡಿನಲ್ಲಿ ನಡೆದ ಸರ್ಫಿಂಗ್‌ ಸ್ಪರ್ಧೆಯಲ್ಲಿ ಮಿಂಚಿ ಚಿನ್ನವನ್ನು ಬೇಟೆಯಾಡುವ ಮೂಲಕ ಸರ್ಫಿಂಗ್‌ ಆಟಗಾರರಿಗೆ ಸಿಂಹಸ್ವಪ್ನವಾದರು.
ಈಚೆಗೆ ಫಿಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 26 ದೇಶಗಳ 276 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅದರಲ್ಲಿ ತನ್ವಿ 16ನೇ ಸ್ಥಾನ ಪಡೆದರು.

‘ಸಮುದ್ರದಲ್ಲಿ 18 ಕಿಲೋ ಮೀಟರ್‌ ಪೆಡ್ಲಿಂಗ್‌ ಮಾಡುವುದು ಸುಲಭದ ಮಾತಲ್ಲ. ಸರ್ಫಿಂಗ್‌ ‘ಸಾಹಸಮಯ’ ಕ್ರೀಡೆ. ನಿಸರ್ಗದ ಮಡಿಲಲ್ಲಿ, ಸಂತಸದಿಂದ ಅನುಭವಿಸುವ ಕ್ರೀಡೆಯೂ ಹೌದು. ಬೋರ್ಡ್‌ ಮೇಲೆ ನಿಂತು, ನಿಯಂತ್ರಣ ಸಾಧಿಸುವ ಮೂಲಕ ಅಬ್ಬರದ ಅಲೆ ಎದುರಿಸುವ ಸಾಹಸಿ ಕ್ರೀಡೆಯೇ ಸರ್ಫಿಂಗ್‌. ಅಲೆಗಳ ಆರ್ಭಟ ಹಿಮ್ಮೆಟ್ಟಿಸಿ, ಅವುಗಳ ಮೇಲೆ ಸವಾರಿ ಮಾಡುವ ಪರಿಣಿತಿ ಸರ್ಫರ್‌ಗೆ ಇರಬೇಕು. ಆದರೆ, ಈ ಕ್ರೀಡೆಯಲ್ಲಿ ಬುದ್ಧಿಶಕ್ತಿಯ ಜತೆಗೆ ನಿಯಂತ್ರಣ ಸಾಧಿಸುವ ಕೌಶಲ ಹಾಗೂ ಧೈರ್ಯಗಳಿಗೂ ಅಷ್ಟೇ ಮಹತ್ವವಿದೆ’ ಎನ್ನುತ್ತಾರೆ ಸರ್ಫರ್‌ ತನ್ವಿ ಜಗದೀಶ.

ತನ್ವಿ ಜಗದೀಶ ಪೆಡ್ಲಿಂಗ್‌ನಲ್ಲಿ ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿ ಇದ್ದಾರೆ. ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಹೆಮ್ಮೆಯ ವಿಷಯ. ಸರ್ಫಿಂಗ್‌ ಹಾಗೂ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ನಲ್ಲಿಯೂ ಹಿಡಿತ ಸಾಧಿಸಿದ್ದು, ಇಂಡಿಯಾ– ಶ್ರೀಲಂಕಾಕ್ಕೆ ಪೆಡ್ಲಿಂಗ್‌ ಮೂಲಕವೇ ಸಾಗುವ ಯೋಜನೆ ಇದೆ. ಇದಕ್ಕೆ ತಯಾರಿ ಕೂಡಾ ನಡೆಸುತ್ತಿದ್ದಾರೆ.ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಕಷ್ಟಕರ, ಇಂತಹ ವಿಭಾಗದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಮಂತ್ರ ಸರ್ಫಿಂಗ್‌ ಕ್ಲಬ್‌ ಮೂಲಕ ತರಬೇತಿ ನೀಡಲಾಗುತ್ತದೆ. ವಿಶ್ವ ಚಾಂಪಿಯನ್‌ ಆಗುವ ಎಲ್ಲ ಲಕ್ಷಣ ಇವೆ ಎಂದು ತರಬೇತುದಾರ ಸಮಂತ್‌ ಹೇಳಿದರು.

ಸಾಧನೆಯ ಹೆಜ್ಜೆ ಗುರುತು...

ಅಂತರರಾಷ್ಟ್ರ ಮಟ್ಟ: 2017 ರಲ್ಲಿ ಅಮೆರಿಕದಲ್ಲಿ ನಡೆದ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಸರ್ಫ್‌ಪ್ರೊನಲ್ಲಿ ಮೂರನೇ ಸ್ಥಾನ

ವೇಸ್ಟ್‌ ಮರೆಯನ್‌ ಕರೋಲಿನಾ ಸಿಯುಪಿ, ನಾರ್ಥ ಕರೋಲಿನಾ ಮೂರನೇ ಸ್ಥಾನ

2017 ರಲ್ಲಿ ಅಂತರರಾಷ್ಟ್ರ ಮಟ್ಟದ ಗ್ರೋಮ್‌ ಅವಾರ್ಡ್‌

ಸಿಂಗಪೂರದಲ್ಲಿ 2018 ರಲ್ಲಿ ನಡೆದ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ರೇಸ್‌ನಲ್ಲಿ ಕಂಚು.

ರಾಷ್ಟ್ರ ಮಟ್ಟದ ಸಾಧನೆ: ರಾಷ್ಟ್ರ ಮಟ್ಟದ ಮಹಿಳಾ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಚಾಂಪಿಯನ್‌ ಷಿಪ್‌ ಕೋವ್ಲಾಂಗ್ ಸರ್ಫ್‌ ಫೆಸ್ಟಿವಲ್‌ 2015– ಮೊದಲ ಸ್ಥಾನ,

ರಾಷ್ಟ್ರ ಮಟ್ಟದ ಮಹಿಳಾ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಚಾಂಪಿಯನ್‌ ಷಿಪ್‌ ಮನ್ಪಾಡ್‌ ಸರ್ಫ್‌ ಫೆಸ್ಟಿವಲ್‌ – 2016– ಪ್ರಥಮ,

ರಾಷ್ಟ್ರ ಮಟ್ಟದ ಮಹಿಳಾ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಮುಕ್ತ ಇಂಡಿಯನ್‌ ಚಾಂಪಿಯನ್‌ ಷಿಪ್‌–2016– ಪ್ರಥಮ,

ರಾಷ್ಟ್ರ ಮಟ್ಟದ ಮಹಿಳಾ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಚಾಂಪಿಯನ್‌ ಷಿಪ್‌ ಕೋವ್ಲಾಂಗ್ ಸರ್ಫ್‌ ಫೆಸ್ಟಿವಲ್‌ 2016– ಮೊದಲ ಸ್ಥಾನ,

ರಾಷ್ಟ್ರ ಮಟ್ಟದ ಮಹಿಳಾ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಮುಕ್ತ ಇಂಡಿಯನ್‌ ಚಾಂಪಿಯನ್‌ ಷಿಪ್‌–2017– ಪ್ರಥಮ,

ರಾಷ್ಟ್ರ ಮಟ್ಟದ ಮಹಿಳಾ ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಚಾಂಪಿಯನ್‌ ಷಿಪ್‌ ಕೋವ್ಲಾಂಗ್ ಸರ್ಫ್‌ ಫೆಸ್ಟಿವಲ್‌ 2018– ಪ್ರಥಮ

ಕೌಶಲ ಬೇಕು

ಸರ್ಫಿಂಗ್‌ ಬೋರ್ಡ್‌ಗಳೂ ವಿಭಿನ್ನವಾಗಿರುತ್ತವೆ. ಉದ್ದ, ಅಗಲ, ದಪ್ಪ ಹೀಗೆ... ಸರ್ಫರ್‌ಗಳು ತಮ್ಮ ಅಗತ್ಯಕ್ಕೆ ತಕ್ಕಂತಹ ಬೋರ್ಡ್‌ಗಳ ಬಳಕೆ ಮಾಡುತ್ತಾರೆ. ಕಿರಿದಾದ ಬೋರ್ಡ್‌ನ ಮೇಲೆ ಅಲೆಗಳ ತೇಲಾಟವನ್ನು ಎದುರಿಸಿ, ದೇಹದ ನಿಯಂತ್ರಣ ಮಾಡುವ ಕೌಶಲ ಮಾತ್ರ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೋಜು, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸರ್ಫಿಂಗ್‌ನಂತಹ ಕ್ರೀಡೆಯ ತರಬೇತಿಗೆ ನುರಿತ ಸರ್ಫರ್‌ ಬೇಕು. ಸರ್ಫಿಂಗ್‌ ಎಂದರೆ ಸಮುದ್ರ ಅಲೆಗಳನ್ನು ಭೇದಿಸುವ ಸಾಹಸಮಯ ಕ್ರೀಡೆ. ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌ ಸರ್ಫಿಂಗ್‌ ಇದಕ್ಕಿಂತ ಭಿನ್ನ. ಹಲಗೆ ಮೇಲೆ ನಿಂತು ಪೆಡಲ್‌ ತುಳಿಯಬೇಕು. ಕಷ್ಟದ ಕ್ರೀಡೆ ಆದರೂ ಇಷ್ಟ ಎನ್ನುತ್ತಾರೆ ತನ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT