ಗುರುವಾರ , ಆಗಸ್ಟ್ 11, 2022
26 °C
ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್: ಆನ್ಸ್‌ ಜಬೇರ್‌ಗೆ ಗೆಲುವು

ನೊವಾಕ್‌ ಜೊಕೊವಿಚ್ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ರಾಯಿಟರ್ಸ್): ಅಗ್ರಶ್ರೇಯಾಂಕದ ಆಟಗಾರ ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರು ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6-4 3-6 6-3 6-4 ರಲ್ಲಿ ಕೊರಿಯದ ವೊನ್ ಸೂನ್‌–ವೂ ವಿರುದ್ಧ ಗೆದ್ದರು.

ಹಾಲಿ ಚಾಂಪಿಯನ್‌ ಜೊಕೊವಿಚ್‌ಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 81ನೇ ಸ್ಥಾನದಲ್ಲಿರುವ ಸೂನ್–ವೂ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.

ಮೊದಲ ಸೆಟ್ ಸೋತ ಕೊರಿಯದ ಆಟಗಾರ ಎರಡನೇ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಜೊಕೊವಿಚ್‌ ಸರ್ವ್‌ ಬ್ರೇಕ್‌ ಮಾಡಿದರು. ಆ ಬಳಿಕ ತಮ್ಮ ಸರ್ವ್‌ನಲ್ಲಿ ಪಾಯಿಂಟ್‌ ಗಿಟ್ಟಿಸಿಕೊಂಡು ಸೆಟ್‌ ಗೆದ್ದು 1–1 ರಲ್ಲಿ ಸಮಬಲ ಸಾಧಿಸಿದರು.

ಈ ಹಂತದಲ್ಲಿ ಎಂದಿನ ಲಯ ಕಂಡುಕೊಂಡ ಜೊಕೊವಿಚ್ ಶಿಸ್ತಿನ ಆಟವಾಡಿದರು. ಮುಂದಿನ ಎರಡೂ ಸೆಟ್‌ಗಳನ್ನು ಗೆದ್ದು ಎರಡನೇ ಸುತ್ತಿಗೆ ಮುನ್ನಡೆದರು. 35 ವರ್ಷದ ಜೊಕೊವಿಚ್‌ ಇಲ್ಲಿ ಸತತ ನಾಲ್ಕನೇ ಪ್ರಶಸ್ತಿ ಹಾಗೂ ವೃತ್ತಿಜೀವನದ 21ನೇ ಗ್ರ್ಯಾನ್‌ಸ್ಲಾಮ್‌ ಕಿರೀಟದ ಮೇಲೆ ಕಣ್ಣಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಕ್ವಿಂಟಿನ್ ಹ್ಯಾಲಿಸ್‌ 4-6, 6-1, 6-2, 6-4 ರಲ್ಲಿ ತಮ್ಮದೇ ದೇಶದ ಬೆನೊಟ್ ಪೇರ್‌ ವಿರುದ್ಧ; ಅಮೆರಿಕದ ಫ್ರಾನ್ಸೆಸ್‌ ಟಿಯಾಫೊ 6–4, 6–4, 6–4 ರಲ್ಲಿ ಇಟಲಿಯ ಅಂಡ್ರಿಯಾ ವವಾಸೊರಿ ವಿರುದ್ಧ; ಸ್ಪೇನ್‌ನ ಜುವಾಮ್ ಮುನರ್ 6–2, 6–4, 7–5 ರಲ್ಲಿ ಬ್ರೆಜಿಲ್‌ನ ತಿಯಾಗೊ ಮಾಂಟೆರೊ ವಿರುದ್ಧ; ಅಮೆರಿಕದ ಟಾಮಿ ಪೌಲ್ 6-1, 6-2, 7-6 ರಲ್ಲಿ ಸ್ಪೇನ್‌ನ ಫೆರ್ನಾಂಡೊ ವೆರ್ಡಸ್ಕೊ ವಿರುದ್ಧ ಜಯ ಸಾಧಿಸಿದರು.

ಆನ್ಸ್ ಜಬೇರ್‌ಗೆ ಗೆಲುವು: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ್ತಿ ಟುನೀಷ್ಯದ ಆನ್ಸ್‌ ಜಬೇರ್ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಅವರು 6–1, 6–3 ರಲ್ಲಿ ಸ್ವೀಡನ್‌ನ ಮಿರ್ಜಮ್ ಬಾರ್ಕ್‌ಲಂಡ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಪೋಲೆಂಡ್‌ನ ಮಜ ಚ್ವಾಲಿನ್‌ಸ್ಕಾ 6–0, 7–5 ರಲ್ಲಿ ಜೆಕ್‌ರಿಪಬ್ಲಿಕ್‌ನ ಕ್ಯಾಥರಿನಾ ಸಿನಿಯಕೊವಾ ವಿರುದ್ಧ; ಅಮೆರಿಕದ ಆ್ಯಲಿಸನ್‌ ರಿಸ್ಕೆ 6–2, 6–4 ರಲ್ಲಿ ಸ್ವಿಟ್ಜರ್‌ಲೆಂಡ್‌ನ ಲೆನಾ ಇನ್–ಅಲ್ಬನ್‌ ವಿರುದ್ಧ; ಉಕ್ರೇನ್‌ನ ಅನೆಲಿನ ಕಲಿನಿನ 4–6, 6–2, 6–4 ರಲ್ಲಿ ಹಂಗರಿಯ ಅನ್ನಾ ಬಾಂಡರ್‌ ವಿರುದ್ಧ ಗೆದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.