ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ವ್ಯಕ್ತಿ ಹೆಸರಿನಲ್ಲಿ ವಂಚನೆ: ‍ಪ್ರಕರಣ ದಾಖಲು

Last Updated 30 ಮಾರ್ಚ್ 2018, 9:44 IST
ಅಕ್ಷರ ಗಾತ್ರ

ಮಂಗಳೂರು: ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ₹ 3.25 ಕೋಟಿ ಮೊತ್ತದ ಮ್ಯೂಚುವಲ್ ಫಂಡ್ ಹಣವನ್ನು ಮ್ಯೂಚುವಲ್‌ ಫಂಡ್‌ ಕಂಪನಿ ಮತ್ತು ಬ್ಯಾಂಕ್‌ ಅಧಿಕಾರಿಗಳ ನೆರವಿನಲ್ಲಿ ನಕಲಿ ಸಹಿ ಬಳಸಿ ಪಡೆದುಕೊಂಡು ವಂಚಿಸಿರುವ ಆರೋಪದ ಮೇಲೆ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯಲ್ಲಿ ಹಲವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ.

ಎವರೆಸ್ಟ್‌ ಪಿರೇರಾ ಎಂಬುವವರು ಮಾಡಿದ್ದ ಹೂಡಿಕೆಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಬಳಸಿ ಅವರ ಎರಡನೇ ಪತ್ನಿ ಗ್ಲೇಡಿಯಸ್‌ ಅಲ್ಮೇಡಾ ಹಣ ಪಡೆದುಕೊಂಡಿದ್ದಾರೆ ಎಂದು ಪಿರೇರಾ ಅವರ ಮೊದಲ ಪತ್ನಿ ಕಾರ್ಮೆಲಿನ್‌ ಪಿರೇರಾ ದೂರು ನೀಡಿದ್ದಾರೆ. ಎವರೆಸ್ಟ್‌ ಪಿರೇರಾ 2005ರಲ್ಲಿ ಮೃತಪಟ್ಟಿದ್ದರು.

ಮೃತ ಎವರೆಸ್ಟ್ ಅವರ ಎರಡನೇ ಪತ್ನಿ ಹೆಸರಿಗೆ ಮ್ಯೂಚುವಲ್‌ ಫಂಡ್‌ ಹೂಡಿಕೆಯ ನಾಮನಿರ್ದೇಶನ ಮಾಡಲಾಗಿತ್ತು ಎಂಬಂತೆ ನಕಲಿ ದಾಖಲೆ ಸೃಷ್ಟಿಸಿ, ಅದರ ಮೂಲಕ ಮ್ಯೂಚುವಲ್ ಹಣವನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಗ್ಲೇಡಿಯಸ್, ಎ.ಟಿ.ರಾಡ್ರಿಗಸ್, ಒಲಿವಿಯಾ ಪಿಂಟೊ, ಮೈಕೆಲ್ ಲಾರೆನ್ಸ್, ಮ್ಯೂಚುವಲ್ ಫಂಡ್ ಸಿಬ್ಬಂದಿಗಳಾದ ಪಲ್ಲವಿ ಸಾವಂತ್, ಕೃಷ್ಣ ಹಾಗೂ ವಿವಿಧ ಬ್ಯಾಂಕ್ ಶಾಖೆ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ.

ಹಿಂದೊಮ್ಮೆ ಪ್ರಕರಣ: ಎವರೆಸ್ಟ್ ಪಿರೇರಾ ಅವರ ಆಸ್ತಿಯ ವಾರೀಸುದಾರಿಕೆಗೆ ಸಂಬಂಧಿಸಿ ಈ ಹಿಂದೆಯೂ ಬಂದರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. 2004ರಲ್ಲಿ ಪತ್ನಿ ಕಾರ್ಮೆಲಿನ್ ಅವರಿಂದ ವಿಚ್ಛೇದನ ಬಯಸಿ ಎವರೆಸ್ಟ್ ಅವರ ಪರ ವಕೀಲರು ಮಂಗಳೂರಿನ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಆದರೆ ಈ ಪ್ರಕರಣ ನಡೆಯುತ್ತಿದ್ದಾಗಲೇ ಎವರೆಸ್ಟ್ ಮೃತಪಟ್ಟ ಕಾರಣ ಪ್ರಕರಣ ಅರ್ಧದಲ್ಲೇ ಮೊಟಕುಗೊಂಡಿತ್ತು. ಆದರೆ ಆ ಬಳಿಕ ನ್ಯಾಯಾಲಯಕ್ಕೆ ನಕಲಿ ವಿಚ್ಛೇದನ ಆದೇಶ ಸಲ್ಲಿಸಿ, ಆಸ್ತಿ ಲಪಟಾಯಿಸಲು ಯತ್ನಿಸಿದ್ದ ಆರೋಪದ ಮೇಲೆ ದೂರು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT