ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಾಗ್‌–ಸಾತ್ವಿಕ್‌ ಜೋಡಿ ಮೋಡಿ

Last Updated 4 ಆಗಸ್ಟ್ 2019, 20:07 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ/ಎಎಫ್‌ಪಿ): ಯುವ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಇವರು ಬಿಡಬ್ಲ್ಯುಎಫ್‌ ಸೂಪರ್ ಸೀರಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ಮೊದಲ ಜೋಡಿ ಎಂದೆನಿಸಿಕೊಂಡರು.

ಭಾನುವಾರ ಮಧ್ಯಾಹ್ನ ನಡೆದ ಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರರು ಚೀನಾದ ಲೀ ಜುನ್ ಹೂಯ್‌ ಮತ್ತು ಲ್ಯೂ ಯೂ ಚೆನ್‌ ಅವರನ್ನು 21–19, 18–21, 21–18ರಲ್ಲಿ ಮಣಿಸಿದರು. ಕಳೆದ ವರ್ಷ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರೆಡ್ಡಿ–ಶೆಟ್ಟಿ ಅವರಿಗೆ ಈ ವರ್ಷದ ಮೊದಲ ಫೈನಲ್‌ ಆಗಿತ್ತು ಇದು.ಒಂದು ತಾಸು ಎರಡು ನಿಮಿಷಗಳ ಹಣಾಹಣಿಯಲ್ಲಿ ಆರಂಭದಿಂದಲೇ ಭರವಸೆಯಿಂದ ಆಡಿದ ಇವರು ಎರಡನೇ ಗೇಮ್‌ನಲ್ಲಿ ಸೋತರೂ ಎದೆಗುಂದಲಿಲ್ಲ.

ಮೊದಲ ಗೇಮ್‌ನ ಆರಂಭದಲ್ಲಿ ಸುಲಭವಾಗಿ ಎರಡು ಪಾಯಿಂಟ್ ಗಳಿಸಿದ ಭಾರತದ ಜೋಡಿ ನಂತರ 10–6ರಲ್ಲಿ ಮುನ್ನಡೆಯಿತು. ಆದರೆ ವಿರಾಮದ ನಂತರ ತಿರುಗೇಟು ನೀಡಿದ ಚೀನಾ ಜೋಡಿ 14–14ರ ಸಮಬಲ ಸಾಧಿಸಿತು. ಛಲ ಬಿಡದ ಭಾರತದ ಆಟಗಾರರು 20–18ರಲ್ಲಿ ಮುನ್ನಡೆದರು. ಆದರೆ ಚೀನಾ ಆಟಗಾರರು ಹಿನ್ನಡೆಯನ್ನು 19–20ಕ್ಕೆ ತಗ್ಗಿಸಿ ನಿಟ್ಟುಸಿರು ಬಿಟ್ಟರು. ಈ ಸಂದರ್ಭದಲ್ಲಿ ನಿರ್ಣಾಯಕ ಪಾಯಿಂಟ್ ಗಳಿಸಿದ ರಣಕಿರೆಡ್ಡಿ ಮತ್ತು ಚಿರಾಗ್ ಗೇಮ್‌ ಗೆದ್ದು ಸಂಭ್ರಮಿಸಿದರು.

ಆರಂಭದಲ್ಲಿ ಮೇಲುಗೈ; ನಂತರ ಹಿನ್ನಡೆ: ಎರಡನೇ ಗೇಮ್‌ನ ಆರಂಭದಲ್ಲಿ ಭಾರತದ ಜೋಡಿ 6–2ರ ಮುನ್ನಡೆ ಸಾಧಿಸಿತ್ತು. ಆದರೆ ಎದುರಾಳಿ ಜೋಡಿ ಹಿನ್ನಡೆಯನ್ನು 5–6ಕ್ಕೆ ಇಳಿಸಿ ನಂತರ 11–11ರ ಸಮಬಲ ಸಾಧಿಸಿತು. ಕೊನೆಗೆ ಗೇಮ್‌ ಗೆದ್ದು ಪಂದ್ಯದಲ್ಲೂ ಸಮಬಲ ಸಾಧಿಸಿತು.

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಚಿರಾಗ್ ಮತ್ತು ರಣಕಿರೆಡ್ಡಿ ನಾಜೂಕಿನ ಆಟವಾಡಿದರು. ಎರಡನೇ ಗೇಮ್‌ನಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗಿದರು. ಆದರೂ ಗೇಮ್ ಒಂದು ಹಂತದಲ್ಲಿ 6–6ರಲ್ಲಿ ಸಮವಾಯಿತು. ರೆಡ್ಡಿ–ಶೆಟ್ಟಿ ಜೋಡಿ ಛಲದಿಂದ ಆಡಿ ಚೀನಾ ಜೋಡಿಗೆ ತಕ್ಕ ಉತ್ತರ ನೀಡಿತು. 18–19ರ ಹಿನ್ನಡೆ ಕಂಡಿದ್ದರೂ ಚೇತರಿಸಿಕೊಂಡು ಪಂದ್ಯ ಮತ್ತು ಪದಕ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT