ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಅರ್ಹತಾ ಕೂಟ | ಕೊರೊನಾ ಕಾಲದ ಮಂದಹಾಸ ನಂದಾ

Last Updated 24 ಜುಲೈ 2020, 3:17 IST
ಅಕ್ಷರ ಗಾತ್ರ

ಕೊರೊನಾ ವೈರಾಣು ಹಾವಳಿಯಿಂದಾಗಿ ವಿಶ್ವದಾದ್ಯಂತ ಟ್ರ್ಯಾಕ್ ಮತ್ತು ಫೀಲ್ಡ್ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಒಲಿಂಪಿಕ್ಸ್‌ ಅರ್ಹತಾ ಕೂಟಗಳನ್ನು ನವೆಂಬರ್ ನಂತರವಷ್ಟೇ ಆರಂಭಿಸಲಾಗುವುದು ಎಂದು ವರ್ಲ್ಡ್‌ ಅಥ್ಲೆಟಿಕ್ಸ್ (ಐಎಎಎಫ್‌) ಈಗಾಗಲೇ ಘೋಷಿಸಿದೆ. ಭಾರತದಲ್ಲಿ ಇಂಡಿಯನ್ ಗ್ರ್ಯಾನ್ ಪ್ರಿ, ಫೆಡ್ ಕಪ್ ಮುಂತಾದ ಕೂಟಗಳ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಟ್ರ್ಯಾಕ್‌ನಲ್ಲಿ ಹೊಸ ಚಿಗುರು ಮೂಡಿಸಿದವರು ಒಡಿಶಾದ ಶ್ರಬಣಿ ನಂದಾ.

ದ್ಯುತಿ ಚಾಂದ್, ಹಿಮಾ ದಾಸ್, ಜಿಶ್ನಾ ಮ್ಯಾಥ್ಯೂ, ಎಂ.ಆರ್. ಪೂವಮ್ಮ, ವಿ.ಕೆ. ವಿಸ್ಮಯಾ ಮುಂತಾದ ಭಾರತದ ಮಹಿಳಾ ಸ್ಪ್ರಿಂಟರ್‌ಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಹೆಸರು ಶ್ರಬಣಿ. ಆದರೆ, ಜಮೈಕಾದಲ್ಲಿ ನಡೆದ ವೆಲೋಸಿಟಿ ಫೆಸ್ಟ್ ಅಥ್ಲೆಟಿಕ್‌ ಕೂಟದಲ್ಲಿ ಪಾಲ್ಗೊಂಡ ಅವರು, ಭಾರತದ ಕ್ರೀಡಾ ಕ್ಷೇತ್ರದಲ್ಲಿ ಭರವಸೆಯ ಹೊನಲು ಮೂಡಿಸಿದ್ದಾರೆ.

ಎಲೈನ್ ಥಾಂಪ್ಸನ್ ಹೆರಾ ಮತ್ತು ಶೆಲ್ಲಿ ಆ್ಯನ್ ಫ್ರೇಜರ್ ಪ್ರೈಸ್ ಮುಂತಾದ ವಿಶ್ವಪ್ರಸಿದ್ಧ ಅಥ್ಲೀಟ್‌ಗಳು ಪಾಲ್ಗೊಂಡಿದ್ದ ಕೂಟವಾಗಿತ್ತು ಅದು. ಇಲ್ಲಿ ಸ್ಪರ್ಧಿಸುವ ಮೂಲಕ ಶ್ರಬಣಿ, ಕೊರೊನಾ ಕಾಲದಲ್ಲಿ ಟ್ರ್ಯಾಕ್‌ಗೆ ಇಳಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು. ಮಾರ್ಚ್ ನಂತರ ಜಮೈಕಾದಲ್ಲಿ ನಡೆದ ಮೊದಲ ಟ್ರ್ಯಾಕ್‌–ಫೀಲ್ಡ್ ಸ್ಪರ್ಧೆಯಾಗಿತ್ತು ಅಶೆನೆಮ್ ಕ್ರೀಡಾಂಗಣದಲ್ಲಿ ನಡೆದ ವೆಲೋಸಿಟಿ ಫೆಸ್ಟ್ ಕೂಟ.

ಜಮೈಕಾದ ಮ್ಯಾಕ್ಸಿಮೈಸಿಂಗ್ ವೆಲೋಸಿಟಿ ಆ್ಯಂಡ್ ಪವರ್ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ ಕ್ಲಬ್‌ (ಎಂವಿಪಿ) ಸದಸ್ಯೆಯಾಗಿರುವ ಶ್ರಬಣಿ, ಭಾರತದಲ್ಲಿ ಬೆಳಕಿಗೆ ಬಂದದ್ದು 2008ರಲ್ಲಿ ಪುಣೆಯಲ್ಲಿ ನಡೆದ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ. 4x100 ಮೀಟರ್ಸ್ ರಿಲೆಯಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ ಅವರು, ಎಂಟು ವರ್ಷಗಳ ನಂತರ ರಿಯೊ ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದರು.

ಅಲ್ಮಾಟಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಕೂಟದ 200 ಮೀಟರ್ಸ್ ಓಟದಲ್ಲಿ 23.07 ಸೆಕೆಂಡಿನಲ್ಲಿ (ಅರ್ಹತೆಗೆ ಬೇಕಾಗಿದ್ದದ್ದು 23.30 ಸೆಕೆಂಡು) ಗುರಿ ಮುಟ್ಟಿ ಭರವಸೆ ಮೂಡಿಸಿದ್ದರು. ಅದೇ ವರ್ಷ ದಕ್ಷಿಣ ಏಷ್ಯಾ ಗೇಮ್ಸ್‌ನ 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಅವರ ಕೊರಳಿಗೇರಿತ್ತು. ಒಲಿಂಪಿಕ್ಸ್‌ನ 200 ಮೀಟರ್ಸ್ ಹೀಟ್ಸ್‌ನಲ್ಲಿ ಅವರ ಸಾಧನೆ 23.58 ಸೆಕೆಂಡು ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT