ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಕ್ರೀಡೆಗೆ ತೆಗೆದಿರಿಸಿರುವ ಮೊತ್ತ: ಪರಿಷ್ಕರಣೆಗೆ ಅವಕಾಶ

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿಕೆ
Last Updated 3 ಫೆಬ್ರುವರಿ 2021, 12:49 IST
ಅಕ್ಷರ ಗಾತ್ರ

ನವದೆಹಲಿ : 2021–22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ ತೆಗೆದಿರಿಸಲಾಗಿರುವ ಮೊತ್ತವನ್ನು ಅಗತ್ಯವಿದ್ದರೆ ಪರಿಷ್ಕರಿಸಬಹುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳುತ್ತಿರುವ ಎಲ್ಲ ಅಥ್ಲೀಟುಗಳ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಕ್ರೀಡೆಗಾಗಿ ₹ 2596.14 ಕೋಟಿ ತೆಗೆದಿರಿಸಿದ್ದಾರೆ. ಇದು ಹಿಂದಿನ ವರ್ಷದ ಆರಂಭದಲ್ಲಿ ನಿಗದಿಪಡಿಸಿದ ಮೊತ್ತಕ್ಕೆ ಹೋಲಿಸಿದರೆ ₹ 230.78 ಕೋಟಿ ಕಡಿತವಾಗಿದೆ. 2020ರಲ್ಲಿ ಕೋವಿಡ್‌–19 ಹಿನ್ನೆಲೆಯಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆದಿರಲಿಲ್ಲ.

‘ಅಗತ್ಯವಿದ್ದರೆ, ಪರಿಷ್ಕೃತ ಹಂಚಿಕೆಯನ್ನು ಕೇಳುವ ಅವಕಾಶವಿದೆ‘ ಎಂದು ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಕಚೇರಿಯನ್ನು ಉದ್ಘಾಟಿಸಿದ ರಿಜಿಜು ಹೇಳಿದರು.

ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರವು ಕ್ರೀಡೆಗಾಗಿ ₹ 2826.92 ಕೋಟಿ ನಿಗದಿಪಡಿಸಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಇದನ್ನು ₹ 1800.15 ಕೋಟಿಗೆ ಪರಿಷ್ಕರಿಸಲಾಗಿತ್ತು.

ಈ ವರ್ಷದ ನಿಗದಿಪಡಿಸಿದ ಮೊತ್ತವು 2020-21ರ ಪರಿಷ್ಕೃತ ಮೊತ್ತಕ್ಕಿಂತ ₹ 795.99 ಕೋಟಿ ಹೆಚ್ಚಾಗಿದೆ.

‘ಕ್ರೀಡಾಪಟುಗಳು ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ (ಎನ್‌ಎಸ್‌ಎಫ್) ಹಿತಾಸಕ್ತಿಯನ್ನು ಕಾಪಾಡಲು ಮತ್ತು ಬೆಂಬಲಿಸಲು ಕ್ರೀಡಾ ಸಚಿವಾಲಯವಿದೆ. ಅಥ್ಲೀಟುಗಳ ಅವಶ್ಯಕತೆ ಮತ್ತು ಎನ್‌ಎಸ್‌ಎಫ್‌ಗಳ ಬೇಡಿಕೆಗಳ ಕುರಿತು ಗಮನಹರಿಸುತ್ತೇವೆ‘ ಎಂದು ರಿಜಿಜು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT