ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಟ್ರ್ಯಾಕ್‌–ಫೀಲ್ಡ್‌ನಲ್ಲಿ ಹೊಸ ಕ್ರೀಡೆಗಳು

ಮೂಡುಬಿದಿರೆಯಲ್ಲಿ ಜಾರಿಗೆ ಬಂದ ಬಾಲ್ ಥ್ರೋ, 60 ಮೀಟರ್ ಓಟ, 80 ಮೀಟರ್ಸ್‌ ಹರ್ಡಲ್ಸ್‌
Last Updated 23 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಾವೆಲಿನ್ ಥ್ರೋ ಬದಲಿಗೆ ಕ್ರಿಕೆಟ್ ಬಾಲ್ ಹಿಡಿದು ಬಂದ ಅಥ್ಲೀಟ್‌ಗಳನ್ನು ಕಂಡ ಪ್ರೇಕ್ಷಕರು ಕಣ್ಣು ಮಿಟುಕಿಸಿದರು. 100 ಮೀಟರ್ಸ್ ಓಟದ ಸವಿ ಅನುಭವಿಸಲು ಸಜ್ಜಾಗಿದ್ದವರು, ಓಟ 60 ಮೀಟರ್ಸ್‌ಗೇ ಮುಗಿದಾಗ ಅಚ್ಚರಿಪಟ್ಟರು. 400 ಮೀಟರ್ಸ್ ಓಟ 300 ಮೀಟರ್ಸ್‌ಗೆ ಕುಗ್ಗಿತು. ಹರ್ಡಲ್ಸ್‌ ಸಂದರ್ಭದಲ್ಲೂ ಹೀಗೆಯೇ ಆಯಿತು; ಪ್ರೇಕ್ಷಕರು 110 ಮೀಟರ್ಸ್‌ ದೂರದ ‘ಗುರಿ’ ಇಟ್ಟುಕೊಂಡಿದ್ದರೆ ಸ್ಪರ್ಧೆ 80 ಮೀಟರ್ಸ್‌ಗೇ ಕೊನೆಗೊಂಡಿತು!

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟದಲ್ಲಿ ಈ ನಾಲ್ಕು ಹೊಸ ಸ್ಪರ್ಧೆಗಳು ಕ್ರೀಡಾಪ್ರಿಯರಲ್ಲಿ ಕುತೂಹಲ ಮೂಡಿಸಿದವು. ಯಾಕೆಂದರೆ ರಾಜ್ಯದಲ್ಲಿ ಇವುಗಳನ್ನು ಇದೇ ಮೊದಲ ಬಾರಿ ಜಾರಿಗೆ ತರಲಾಗಿದೆ.

ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ 14 ಮತ್ತು 16 ವರ್ಷದೊಳಗಿನ ಕ್ರೀಡಾಪಟುಗಳ ದೈಹಿಕ ಕ್ಷಮತೆಗೆ ಅನುಗುಣವಾಗಿ ಹೊಸ ಸ್ಪರ್ಧೆಗಳನ್ನು ಜಾರಿಗೆ ತರಲು ಕಳೆದ ವರ್ಷ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ನಿರ್ಧರಿಸಿತ್ತು. ಇದರ ಮೊದಲ ಪ್ರಯೋಗ, ಡಿಸೆಂಬರ್‌ ಕೊನೆಯ ವಾರದಲ್ಲಿ ಗುವಾಹಟಿಯಲ್ಲಿ ನಡೆದಿದ್ದ ಪೂರ್ವ ವಲಯ ಚಾಂಪಿಯನ್‌ಷಿಪ್‌ನಲ್ಲಿ ಆಗಿತ್ತು. ದಕ್ಷಿಣದ ರಾಜ್ಯಗಳಲ್ಲಿ ಇದನ್ನು ಮೊದಲ ಬಾರಿ ಜಾರಿಗೆ ತಂದ ಶ್ರೇಯಸ್ಸು ಕರ್ನಾಟಕ ಅಥ್ಲೆಟಿಕ್ ಸಂಸ್ಥೆಗೆ (ಕೆಎಎ) ಸಂದಿದೆ.

ಯಾವ ಸ್ಪರ್ಧೆ? ಏನು ಮಹತ್ವ?

ಭಾರತದಲ್ಲಿ ಜೂನಿಯರ್ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನವರಿಗೆ ಜಾವೆಲಿನ್ ಥ್ರೋ ಸ್ಪರ್ಧೆ ಇಲ್ಲ. ಹೀಗಾಗಿ 16 ವರ್ಷ ಮತ್ತು ಅದಕ್ಕಿಂತ ಮೇಲಿನವರ ವಿಭಾಗದಲ್ಲಿ ಏಕಾಏಕಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗುತ್ತಿದೆ. ಆದ್ದರಿಂದ ಜಾವೆಲಿನ್‌ ಥ್ರೋಗೆ ಸಮಾನವಾಗಿ ಬಾಲ್ ಥ್ರೋ ಜಾರಿಗೆ ತರಲಾಗಿದೆ. 150 ಗ್ರಾಂ ತೂಕದ ಹಾರ್ಡ್‌ ಕ್ರಿಕೆಟ್ ಬಾಲ್‌ ಇಲ್ಲಿ ಬಳಕೆಯಾಗುತ್ತದೆ. ಜಾವೆಲಿನ್ ಸೆಕ್ಟರ್‌ನಲ್ಲಿ ಸ್ಪರ್ಧೆ ನಡೆಯುತ್ತದೆ. ಜಾವೆಲಿನ್ ಥ್ರೋ ನಿಯಮಗಳನ್ನೇ ಅನುಸರಿಸಿ, ಅದರಂತೆಯೇ ಎಸೆಯಲಾಗುತ್ತದೆ.

100 ಮೀಟರ್ಸ್ ಓಟದ ಬದಲಿಗೆ 60 ಮೀಟರ್ಸ್ ಓಟವನ್ನೂ 14 ವರ್ಷದೊಳಗಿನವರಿಗಾಗಿ ಜಾರಿಗೆ ತರಲಾಗಿದೆ. ‘100 ಮೀಟರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಣ್ಣ ಮಕ್ಕಳು 60 ಮೀಟರ್ಸ್ ತಲುಪುವಷ್ಟರಲ್ಲಿ ಸುಸ್ತಾಗಿ ವೇಗ ಗಣನೀಯವಾಗಿ ಕುಸಿಯುತ್ತದೆ. ಆದ್ದರಿಂದ 60 ಮೀಟರ್ಸ್‌ಗೇ ಸ್ಪರ್ಧೆಯನ್ನು ಮುಕ್ತಾಯಗೊಳಿಸುವುದು ಇದರ ಹಿಂದಿನ ಉದ್ದೇಶ’ ಎಂದು ಆಳ್ವಾಸ್ ಕಾಲೇಜಿನ ಅಥ್ಲೆಟಿಕ್‌ ಕೋಚ್ ಎಚ್‌.ಬಿ. ರಾಧಾಕೃಷ್ಣ ಹೇಳಿದರು. 16 ವರ್ಷದೊಳಗಿನವರಿಗೆ 400 ಮೀಟರ್ಸ್ ಓಟದ ಬದಲು 300 ಮೀಟರ್ಸ್ ಮತ್ತು 110 ಮೀಟರ್ಸ್ ಹರ್ಡಲ್ಸ್‌ ಬದಲಿಗೆ 80 ಮೀಟರ್ಸ್‌ ಹರ್ಡಲ್ಸ್‌ ಜಾರಿಗೆ ತಂದಿರುವುದರ ಹಿಂದೆಯೂ ಇದೇ ತರ್ಕ್ ಅಡಗಿದೆ.

ಓಟಕ್ಕೆ ಹೊಸ ದಿಸೆಯ ಸಾಧ್ಯತೆ

ಕೆಲವು ರಾಜ್ಯಗಳಲ್ಲಿ ಸ್ಪ್ರಿಂಟರ್‌ಗಳನ್ನಾಗಿ ರೂಪಿಸುವ ಬಯಕೆಯೊಂದಿಗೆ ಸಣ್ಣ ಮಕ್ಕಳ‌ನ್ನು ಓಟದ ಸ್ಪರ್ಧೆಗೆ ಸಜ್ಜುಗೊಳಿಸುತ್ತಾರೆ. 14 ವರ್ಷದೊಳಗಿನ ಮಕ್ಕಳು 100 ಅಥವಾ 200 ಮೀಟರ್ಸ್ ಒಟಕ್ಕೆ ಸಿದ್ಧರಾಗುವುದೇನೋ ನಿಜ. ಆದರೆ ಅದರಿಂದ ಅವರ ಕ್ರೀಡಾಜೀವನದ ಭವಿಷ್ಯಕ್ಕೇ ಕುತ್ತು ಉಂಟಾಗುತ್ತದೆ ಎಂಬುದು ವಾಸ್ತವ. ಅವರ ಶಕ್ತಿ ಅಷ್ಟಕ್ಕೇ ಉಡುಗಿ ಹೋಗಿ ಸೀನಿಯರ್ ಮಟ್ಟಕ್ಕೆ ಬೆಳೆಯುವುದೇ ಇಲ್ಲ ಎಂಬುದು ಕ್ರೀಡಾ ತಜ್ಞರ ಗ್ರಹಿಕೆ. ಈ ಹಿನ್ನೆಲೆಯಲ್ಲಿ 14 ವರ್ಷದ ಮಕ್ಕಳಿಗೆ 60 ಮೀಟರ್ಸ್ ಓಟದ ಸ್ಪರ್ಧೆ ಜಾರಿಗೆ ತಂದಿರುವುದು ಮಹತ್ವದ ಬೆಳವಣಿಗೆ ಎಂದು ಹೇಳುವ ಕೋಚ್‌ಗಳು ಇದರಿಂದ ಭವಿಷ್ಯದಲ್ಲಿ ಉತ್ತಮ ಸ್ಪ್ರಿಂಟರ್‌ಗಳು ಮೂಡಿಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT