ಸೋಮವಾರ, ಡಿಸೆಂಬರ್ 16, 2019
17 °C

ಅಥ್ಲೆಟಿಕ್ಸ್‌: ಪಾವನಾಗೆ ಎರಡನೇ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಟೂರು: ಕರ್ನಾಟಕದ ಪಾವನಾ ನಾಗರಾಜ್‌ ಅವರು ಇಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಚಿನ್ನದ ಪದಕ ಜಯಿಸಿದರು.

14 ವರ್ಷದೊಳಗಿನ ಬಾಲಕಿಯರ ಟ್ರಯಥ್ಲಾನ್‌ ಸ್ಪರ್ಧೆಯಲ್ಲಿ ಒಟ್ಟು 1,961 ಪಾಯಿಂಟ್ಸ್‌ ಕಲೆಹಾಕಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ಭಾನುವಾರ ನಡೆದಿದ್ದ ಹೈಜಂಪ್‌ ಸ್ಪರ್ಧೆಯಲ್ಲೂ ಅವರಿಂದ ಚಿನ್ನದ ಸಾಧನೆ ಅರಳಿತ್ತು.

ಟಿಂಟು ದಾಖಲೆ ಮುರಿದ ರಚನಾ: ಮಿಂಚಿನ ಗತಿಯಲ್ಲಿ ಓಡಿದ ಹರಿಯಾಣದ ರಚನಾ ಅವರು ಮಂಗಳವಾರ ಹೊಸ ದಾಖಲೆ ಬರೆದರು.

ಮಹಿಳೆಯರ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ 2 ನಿಮಿಷ 06.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಟಿಂಟು ಲುಕಾ ಹೆಸರಿನಲ್ಲಿದ್ದ 11 ವರ್ಷಗಳ ಹಿಂದಿನ ಕೂಟ ದಾಖಲೆಯನ್ನು ಅಳಿಸಿ ಹಾಕಿದರು.

2008ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಕೂಟದ 20 ವರ್ಷದೊಳಗಿನವರ ವಿಭಾಗದಲ್ಲಿ ಟಿಂಟು 2 ನಿಮಿಷ 07.48 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದ್ದರು.

ಕರ್ನಾಟಕದ ರಾಖಿ (2:08.66ಸೆ.) ಈ ವಿಭಾಗದ ಬೆಳ್ಳಿಯ ಪದಕ ಜಯಿಸಿದರು.

16 ವರ್ಷದೊಳಗಿನ ಬಾಲಕಿಯರ ಪೆಂಟಾಥ್ಲಾನ್‌ನಲ್ಲಿ ರಾಜ್ಯದ ಉನ್ನತಿ ಅಯ್ಯಪ್ಪ ಒಟ್ಟು 3,272 ಪಾಯಿಂಟ್ಸ್‌ ಗಳಿಸಿ ಬೆಳ್ಳಿಯ ಪದಕ ಪಡೆದರು.

14 ವರ್ಷದೊಳಗಿನವರ 600 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ರಾಜ್ಯದ ಪ್ರಿಯಾಂಕ ಮಡಿವಾಳಪ್ಪ ಓಲೇಕರ್‌ 1 ನಿಮಿಷ 36.68 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಜಯಿಸಿದರು.

20 ವರ್ಷದೊಳಗಿನವರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕರ್ನಾಟಕದ ಕರೀಷ್ಮಾ ಎಸ್‌.ಸನಿಲ್‌ ಕಂಚಿನ ಪದಕ ಗೆದ್ದರು. ಅವರಿಂದ 42.77 ಮೀಟರ್ಸ್‌ ಸಾಮರ್ಥ್ಯ ಮೂಡಿಬಂತು.

ಪ್ರತಿಕ್ರಿಯಿಸಿ (+)