ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ಒಸಾಕದಲ್ಲಿ ಜ್ಯೋತಿಯಾತ್ರೆ ನಿರ್ಧಾರ ವಿಳಂಬ

Last Updated 2 ಏಪ್ರಿಲ್ 2021, 12:25 IST
ಅಕ್ಷರ ಗಾತ್ರ

ಟೋಕಿಯೊ: ಕೋವಿಡ್‌–19 ಸೋಂಕು ಹೆಚ್ಚು ಇರುವ ಒಸಾಕ ನಗರ ಮತ್ತು ಸುತ್ತಮುತ್ತ ಒಲಿಂಪಿಕ್ಸ್ ಜ್ಯೋತಿಯಾತ್ರೆ ಕೈಗೊಳ್ಳಬೇಕೇ ಬೇಡವೇ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಒಲಿಂಪಿಕ್ಸ್ ಆಯೋಜನಾ ಸಮಿತಿಯ ಮುಖ್ಯಸ್ಥ ಸೀಕೊ ಹಶಿಮೊಟೊ ತಿಳಿಸಿದ್ದಾರೆ.

ಶುಕ್ರವಾರ ಆನ್‌ಲೈನ್ ಸಂವಾದದಲ್ಲಿ ಪಾಲ್ಗೊಂಡ ಅವರು ‘ಜ್ಯೋತಿಯಾತ್ರೆಯ ಕುರಿತು ಒಸಾಕ ಸ್ಥಳೀಯ ಸರ್ಕಾರದ ಜೊತೆ ಮತ್ತು ಕಾರ್ಯಕಾರಿ ಸಮಿತಿ ಜೊತೆ ಚರ್ಚಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಈಶಾನ್ಯ ಜಪಾನ್‌ನಿಂದ ವಾರದ ಹಿಂದೆ ಯಾತ್ರೆ ಆರಂಭಗೊಂಡಿದ್ದು 10 ಸಾವಿರ ಓಟಗಾರರು ಪಾಲ್ಗೊಂಡಿದ್ದಾರೆ. ಜುಲೈ 23ರಂದು ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಯಾತ್ರೆ ಕೊನೆಗೊಳ್ಳಲಿದೆ. ಒಸಾಕ ನಗರ ಮತ್ತು ಸುತ್ತಮುತ್ತ ಏಪ್ರಿಲ್ 14ರಂದು ನಡೆಸಲು ಉದ್ದೇಶಿಸಿರುವ ಜ್ಯೋತಿಯಾತ್ರೆಯನ್ನು ರದ್ದುಪಡಿಸುವಂತೆ ಒಸಾಕದ ಮೇಯರ್ ಮತ್ತು ಸ್ಥಳೀಯ ಗವರ್ನರ್ ಗುರುವಾರ ಆಗ್ರಹಿಸಿದ್ದರು.

ಕೋವಿಡ್‌ ನಡುವೆ ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಲು ಆಯೋಜಕರಿಗೆ ಜ್ಯೋತಿಯಾತ್ರೆ ಅವಕಾಶ ಒದಗಿಸಿದೆ. ಇದರಲ್ಲಿ ಯಾವುದೇ ಲೋಪ ಆದರೆ, ಒಲಿಂಪಿಕ್ಸ್ ಆಯೋಜಿಸುವುದರ ಬಗ್ಗೆ ಸಂದೇಹಗಳಿಗೆ ಎಡೆಮಾಡಿಕೊಡಲಿದೆ. ಕ್ರೀಡಾಕೂಟದ ಸಂದರ್ಭದಲ್ಲಿ ಜಪಾನ್‌ಗೆ 15,400 ಅಥ್ಲೀಟ್‌ಗಳು, ನೂರಾರು ಅಧಿಕಾರಿಗಳು, ತೀರ್ಪುಗಾರರು, ಕೋಚ್‌ಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸಲಿದ್ದಾರೆ.

ಕ್ರೀಡಾಕೂಟಕ್ಕೆ ವಿದೇಶದ ಪ್ರೇಕ್ಷಕರನ್ನು ಈಗಾಗಲೇ ನಿಷೇಧಿಸಲಾಗಿದೆ. ಕ್ರೀಡಾಂಗಣಗಳಿಗೆ ಎಷ್ಟು ಪ್ರಮಾಣದಲ್ಲಿ ಪ್ರೇಕ್ಷಕರನ್ನು ಬಿಡಬೇಕು ಎಂಬುದರ ಬಗ್ಗೆ ಈ ತಿಂಗಳ ಅಂತ್ಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಹಶಿಮೊಟೊ ಹೇಳಿದ್ದರು. ಆದರೆ ಈ ಕುರಿತು ಅಂತಿಮ ತೀರ್ಮಾನ ವಿಳಂಬವಾಗಲಿದೆ ಎಂದು ಶುಕ್ರವಾರ ಅವರು ಸ್ಪಷ್ಟಪಡಿಸಿದರು.

ಈ ನಡುವೆ ಕ್ರೀಡಾಕೂಟದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಯೋಜನೆಗಳಿಗೆ ಸಂಬಂಧಿಸಿದ 280 ಪುಟಗಳ ದಾಖಲೆಗಳು ಸ್ಥಳೀಯ ಶುಕನ್ ಬುನ್ಶುನ್ ವಾರಪತ್ರಿಕೆಗೆ ಲಭ್ಯವಾಗಿದ್ದು ಅದರ ಹಿನ್ನೆಲೆಯಲ್ಲಿ ಬರೆದ ಲೇಖನದ ವಿರುದ್ಧ ಆಯೋಜಕರು ಪ್ರತಿಭಟನೆ ದಾಖಲಿಸಿದ್ದಾರೆ. ಪತ್ರಿಕೆಯ ಆನ್‌ಲೈನ್ ಆವೃತ್ತಿಯಿಂದ ಲೇಖನವನ್ನು ಅಳಿಸಿ ಹಾಕುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT