ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಭಾರತದಲ್ಲಿ ಗಾಲ್ಫ್‌ ಬೆಳವಣಿಗೆಗೆ ಅದಿತಿ ಮುನ್ನುಡಿ

Last Updated 7 ಆಗಸ್ಟ್ 2021, 20:29 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ರಾತ್ರಿ ನಾಟಿಂಗ್‌ಹ್ಯಾಮ್ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದನ್ನು ನೋಡುತ್ತ ಕುಳಿತಿದ್ದೆ. ಪಕ್ಕದಮನೆಯವರು ಬಂದು ಯಾರು ಈ ಅದಿತಿ ಅಶೋಕ್? ಬೆಂಗಳೂರಿನ ಹುಡುಗಿಯಂತೆ? ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದಂತೆ? ಗಾಲ್ಫ್ ಬಗ್ಗೆ ನಿಮಗೇನಾದರೂ ಗೊತ್ತಾ? ಎಂದು ಕೇಳಿದರು.

ಅವರ ಮಾತು ಕೇಳಿ ಮುಗಿಲು ಮೂರೇ ಗೇಣು ಉಳಿದಿತ್ತು ನನಗೆ. ಭಾರತದಲ್ಲಿ ಗಾಲ್ಫ್‌ ಕ್ರೀಡೆ ಜನಪ್ರಿಯ ವಾಗಬೇಕೆಂಬ ಬಹುದಿನಗಳ ಆಸೆಗೆ ರೆಕ್ಕೆ ಮೂಡಿದ್ದವು. ಇದಕ್ಕೆ ಕಾರಣವಾದ ಅದಿತಿಗೆ ಧನ್ಯವಾದಗಳು. ಒಲಿಂಪಿಕ್ ವೇದಿಕೆಯಲ್ಲಿ ಅದಿತಿ ಈ ಸಾಧನೆ ಮಾಡಿದ್ದರಿಂದ ಇಷ್ಟೆಲ್ಲ ಜನಾನುರಾಗ ದೊರೆಯುತ್ತಿರುವುದು ಸತ್ಯ.

ಸುಮಾರು ಒಂದು ದಶಕದ ಹಿಂದೆ, ಜೂನಿಯರ್ ಸ್ಪರ್ಧೆಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದ್ದ ಅದಿತಿಯ ಬಗ್ಗೆ ಆಗಾಗ ಕೇಳುತ್ತಿದ್ದೆ. ಆದರೆ 2013 ರಲ್ಲಿ ಅವರು ಏಷ್ಯಾ ಪೆಸಿಫಿಕ್ ಜೂನಿಯರ್ ಚಾಂಪಿಯನ್‌ಷಿಪ್ ಗೆದ್ದಾಗ ಮೊದಲ ಬಾರಿಗೆ ನೋಡಿದ್ದೆ. ಅವತ್ತು ರಾಯಲ್ ಕಲ್ಕತ್ತಾ ಗಾಲ್ಫ್‌ ಕೋರ್ಸ್‌ನಲ್ಲಿ ಪ್ಲೇ-ಆಫ್‌ನಲ್ಲಿ ತೈಪೆಯ ಪ್ರತಿಭಾವಂತ ಮಿನ್-ಜೌ ಚೆನ್ ಅವರನ್ನು ಮೀರಿ ನಿಂತಿದ್ದರು. ಅದಾಗಿ ಎಂಟು ವರ್ಷ ಗಳಲ್ಲಿ ಅದಿತಿ ಏರಿರುವ ಎತ್ತರ ಅಮೋಘವಾದದ್ದು.

ವಾಸ್ತವವಾಗಿ ಅದಿತಿ ಗಾಲ್ಫ್‌ ಆರಂಭಿಸಿದಾಗ ಈ ಆಟವಿನ್ನೂ ಒಲಿಂಪಿಕ್ ಕ್ರೀಡೆಯಾಗಿರಲಿಲ್ಲ. 2016ರಲ್ಲಿ ರಿಯೊ ಡಿಜನೈರೊದಲ್ಲಿ ಸೇರ್ಪಡೆಯಾದಾಗ ಅದಿತಿ ಆಯ್ಕೆಯಾಗಿದ್ದರು. ಈಗ ಟೋಕಿಯೊ ಒಲಿಂಪಿಕ್‌ ಕೂಟದಲ್ಲಿ ಪದಕ ಗಳಿಕೆಯ ಹೊಸ್ತಿಲಿಗೆ ಬಂದು ನಿಂತರು. ಆದರೆ ಸ್ವಲ್ಪ ಅಂತರದಿಂದ ಬೆಳ್ಳಿಯ ಪದಕ ಕೈತಪ್ಪಿತು. ಆದರೆ, ಅದಿತಿ ಪಡೆದ ನಾಲ್ಕನೇ ಸ್ಥಾನವು ಭಾರತವನ್ನು ವಿಶ್ವದ ಗಾಲ್ಫ್‌ ಕ್ರೀಡೆಯ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿತು. ಅಲ್ಲದೇ ಯುವಸಮೂಹವನ್ನು ಈ ಕ್ರೀಡೆಯತ್ತ ಸೆಳೆಯುವ ಚುಂಬಕ
ಶಕ್ತಿಯಾಗಲಿದೆ.ಅದಿತಿಯ ಸಾಧನೆಯ ಹಿಂದಿನ ರೂವಾರಿಗಳು ಅವರ ತಂದೆ, ಅಶೋಕ್ ಮತ್ತು ತಾಯಿ ಮಹೇಶ್ವರಿ. ಅದಿತಿ ಐದನೇ ವಯಸ್ಸಿನಲ್ಲಿಯೇ ಈ ಕ್ರೀಡೆಯತ್ತ ಆಕರ್ಷಿತರಾಗಿದ್ದರು. ಅದನ್ನು ಗುರುತಿಸಿದ ತಂದೆ ತಾಯಿ, ಸರ್ವರೀತಿಯಲ್ಲಿಯೂ ಬೆಂಬಲಿಸಿದರು. ಅದರ ಫಲವಾಗಿ ತನ್ನ ಹತ್ತನೇ ವಯಸ್ಸಿನಿಂದಲೇ ಪ್ರಶಸ್ತಿಗಳನ್ನು ಜಯಿಸುವ ಮಟ್ಟಕ್ಕೆ ಅದಿತಿ ಬೆಳೆದರು. ಎಲ್‌ಇಟಿ ಕಾರ್ಡ್ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿ ಶ್ರೇಯವೂ ಒಲಿಯಿತು ಐದು ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದು ಅವರು ದೊಡ್ಡ ಸಾಧನೆಯೇ ಸರಿ.

ಬೆಂಗಳೂರಿನ ಅದಿತಿಗೆ ಈಗ 23 ವರ್ಷ. ಪ್ರಸ್ತುತ 200 ಕ್ಕಿಂತ ಕಡಿಮೆ ಶ್ರೇಯಾಂಕದಲ್ಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಗಾಲ್ಫ್ ಆಟಗಾರ್ತಿಯರ ವಿರುದ್ಧ ಸ್ಪರ್ಧಿಸಿದ್ದರು. ‘ಕಪ್ಪುಕುದುರೆ’ ಹಣೆಪಟ್ಟಿಯೊಂದಿಗೆ ಕಣಕ್ಕಿಳಿದಿದ್ದ ಅವರು ಕಳೆದ ನಾಲ್ಕು ದಿನಗಳಲ್ಲಿ ಅದ್ಭುತವಾದ ಗಾಲ್ಫ್ ಆಡಿದರು.

ವಿಶ್ವದ ಅಗ್ರಶ್ರೇಯಾಂಕದ ನೆಲ್ಲಿ ಕೊರ್ಡಾ ಚಿನ್ನದ ಪದಕ ಜಯಿಸಿದ ಈ ಸ್ಪರ್ಧೆಯಲ್ಲಿ ಶುಕ್ರವಾರ ಸಂಜೆಯ ಹೊತ್ತಿಗೆ ಎರಡನೇ ಸ್ಥಾನ ಪಡೆಯುವ ನಿರೀಕ್ಷೆ ಮೂಡಿಸಿದ್ದು ಆದಿತಿ.
ಎರಡನೇ ಹಂತದಲ್ಲಿ ಅದಿತಿಯ ಏಕೈಕ ನ್ಯೂನತೆಯೆಂದರೆ ಡ್ರೈವ್‌ಗಳು, ಅದು ತನ್ನ ಎದುರಾಳಿಗಳಿಗಿಂತ ದುರ್ಬಲವಾಗಿದ್ದು ದುಬಾರಿಯಾಯಿತು. ಆದರೂ ಶಾರ್ಟ್‌ಗೇಮ್, ಸ್ಟೋಕ್ ಪ್ಲೇ ಮತ್ತು ಪುಟ್ಟಿಂಗ್‌ಗಳಲ್ಲಿ ವಿಶೇಷ ಸಾಧನೆ ತೋರಿದರು.

ಈ ಬಾರಿ ಅದಿತಿ ಪದಕ ಜಯಿಸದೇ ಇರಬಹುದು. ಆದರೆ, ಅವರ ನಾಲ್ಕನೇ ಸ್ಥಾನ ಮತ್ತು ಕಳೆದ ನಾಲ್ಕಾರು ದಿನಗಳಲ್ಲಿ ತೋರಿದ ಪ್ರದರ್ಶನ ಬಹಳ ಮಹತ್ವದ್ದು. ವಿಶ್ವದ ಪ್ರಮುಖ ಟೂರ್‌ಗಳಲ್ಲಿ ಅವರು ಅಗ್ರ 10ರಲ್ಲಿ ಸ್ಥಾನ ಪಡೆಯಲು ಇದು ಸಹಕಾರಿ. ಈ ಕ್ರೀಡೆಯಲ್ಲಿ ವೃತ್ತಿಪರ ಮತ್ತು ಹವ್ಯಾಸಕ್ಕಾಗಿ ತೊಡಗಿಕೊಂಡಿರುವ ಬಹುತೇಕ ಎಲ್ಲ ವರ್ಗದವರ ಗಮನವನ್ನು ಸೆಳೆ ಯುವಲ್ಲಿ ಅದಿತಿ ಸಫಲರಾಗಿದ್ದಾರೆ. ಅದರಿಂದಾಗಿ ಭಾರತದಲ್ಲಿ ಈಗ ಗಾಲ್ಫ್‌ ಜನಾಕರ್ಷಣೆಯ ಕ್ರೀಡೆಯಾಗಿ ಬೆಳೆಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

(–ಪಾರ್ಥ್ ಸಿಂಗ್ ಹವ್ಯಾಸಿ ಕ್ರೀಡಾ ಲೇಖಕ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT