ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics| ಜಿಮ್ನಾಸ್ಟಿಕ್ಸ್‌: ‘ದೀಪ’ ಬೆಳಗಿಸುವರೇ ಪ್ರಣತಿ?

ಟೋಕಿಯೊ ಒಲಿಂಪಿಕ್ಸ್‌ 2020 ಭಾರತದ ಕನಸಿನ ಪಯಣ
Last Updated 20 ಜುಲೈ 2021, 17:12 IST
ಅಕ್ಷರ ಗಾತ್ರ

2016ರ ರಿಯೊ ಒಲಿಂಪಿಕ್ಸ್‌. ಭಾರತವಷ್ಟೇ ಅಲ್ಲ. ಜಗತ್ತಿನ ಬಲಾಢ್ಯ ಕ್ರೀಡಾರಾಷ್ಟ್ರಗಳೆಲ್ಲ ಬೆಕ್ಕಸಬೆರಗಾಗಿದ್ದವು. ತ್ರಿಪುರಾದ ದೀಪಾ ಕರ್ಮಾಕರ್ ಎಂಬ ಹುಡುಗಿ ಅಂತಹ ಅಚ್ಚರಿ ಮೂಡಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಹಲವು ಕ್ರೀಡಾವಿಭಾಗಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ಭಾರತವು ಹಿಂದೆಂದೂ ಜಿಮ್ನಾಸ್ಟಿಕ್ಸ್‌ ಕ್ರೀಡೆಯಲ್ಲಿ ಮಾತ್ರ ದೊಡ್ಡಮಟ್ಟದ ಸಾಧನೆ ಮಾಡಿರಲಿಲ್ಲ. ಆದರೆ, ದೀಪಾ ಅವತ್ತು ಪದಕ ಜಯದ ಭರವಸೆಯನ್ನೇ ಮೂಡಿಸಿದ್ದರು. ಮಹಿಳೆಯರ ವಾಲ್ಟ್‌ ವಿಭಾಗದಲ್ಲಿ ಅಲ್ಪ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು. ನಾಲ್ಕನೇ ಸ್ಥಾನ ಪಡೆದರು. ಆಗ ಅವರು 2020ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸದೊಂದಿಗೆ ದೇಶಕ್ಕೆ ಮರಳಿದ್ದರು. ಆದರೆ, ಅದೃಷ್ಟ ಅವರೊಂದಿಗಿಲ್ಲ. ಗಾಯದಿಂದಾಗಿ ಅವರು ಈ ಬಾರಿಯ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುತ್ತಿಲ್ಲ.

ಅವರ ಗೈರುಹಾಜರಿಯಲ್ಲಿ ಭಾರತದ ನಿರೀಕ್ಷೆಯ ಭಾರ ಹೊತ್ತು ಪ್ರಣತಿ ನಾಯಕ್ ಟೋಕಿಯೊಗೆ ತೆರಳಿದ್ದಾರೆ. ಪಶ್ಚಿಮ ಬಂಗಾಳದ ಪಿಂಗ್ಲಾದ ಹುಡುಗಿ ಪ್ರಣತಿ ಬಾಲ್ಯದಿಂದಲೇ ಜಿಮ್ನಾಸ್ಟಿಕ್ಸ್‌ನಲ್ಲಿ ಕಠಿಣ ಅಭ್ಯಾಸ ಮಾಡಿದವರು.

26 ವರ್ಷದ ಪ್ರಣತಿಗೆ ಮಿನಾರಾ ಬೇಗಂ ತರಬೇತಿ ನೀಡುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಬೇಗಂ ಮಾರ್ಗದರ್ಶನದಲ್ಲಿ ಹಲವು ಕೌಶಲಗಳನ್ನು ಕಲಿತಿರುವ ಪ್ರಣತಿ, ವಾಲ್ಟ್‌ನಲ್ಲಿಯೇ ಪರಿಣತಿ ಸಾಧಿಸಿದ್ದಾರೆ. 2019ರಲ್ಲಿ ಉಲಾನ್‌ಬಾತರ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದೇ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 45.832 (ವಾಲ್ಟ್‌ 14.200, ಫ್ಲೋರ್ ಎಕ್ಸೈಜ್ 11.133, ಬಾರ್ 10.566 ಮತ್ತು ಭೀಮ್‌ನಲ್ಲಿ 9.933) ಅಂಕಗಳನ್ನು ಗಳಿಸಿದ್ದರು. ಇದರಿಂದಾಗಿ ಅವರಿಗೆ ಒಲಿಂಪಿಕ್ಸ್‌ ರಹದಾರಿ ಸಿಕ್ಕಿತು.

ಆದರೆ, ಅವರ ಮುಂದೆ ಈಗ ಕಠಿಣ ಸವಾಲು ಇದೆ. ಇದೇ 24ರಂದು ನಡೆಯುವ ಕ್ವಾಲಿಫೈಯರ್‌ನಲ್ಲಿ ಅವರು ಗೆದ್ದರೆ, ಫೈನಲ್‌ ಪ್ರವೇಶಿಸುತ್ತಾರೆ.

ಆದರೆ ಈ ಹಾದಿಯಲ್ಲಿ ಅವರು ಜರ್ಮನಿ, ಚೀನಾ, ರಷ್ಯಾ, ಅಮೆರಿಕದ ಬಲಾಢ್ಯರ ಸ್ಪರ್ಧೆಯನ್ನು ಎದುರಿಸಬೇಕಿದೆ. ಹೋದ ಸಲದ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿದ್ದ ಅಮೆರಿಕದ ಸೈಮನ್ ಬೈಲ್ಸ್‌ ಈ ಬಾರಿಯೂ ಫೆವರಿಟ್ ಆಗಿದ್ದಾರೆ.

ಆಲ್‌ರೌಂಡ್ ವಿಭಾಗದ ಪ್ರಶಸ್ತಿ ಗೆಲ್ಲುವ ಛಲದಲ್ಲಿ ಅವರಿದ್ದಾರೆ. ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಇಲ್ಲಿಯವರೆಗೆ 30 ಪದಕಗಳನ್ನು ಜಯಿಸಿದ್ದಾರೆ.

ಇನ್ನುಳಿದ ವಿಭಾಗಗಳಲ್ಲಿ ಚೀನಾ, ರುಮೆನಿಯಾ, ರಷ್ಯಾ, ಅಮೆರಿಕ, ಜರ್ಮನಿಯ ಸ್ಪರ್ಧಿಗಳ ಪೈಪೋಟಿಯನ್ನು ಕಣ್ತುಂಬಿಕೊಳ್ಳಬೇಕು. ಆರ್ಟಿಸ್ಟಿಕ್, ರಿಧಮಿಕ ಮತ್ತು ಟ್ರ್ಯಾಂಪೊಲಿನ್ ವಿಭಾಗಗಳಲ್ಲಿ ರೋಚಕ ಸ್ಪರ್ಧೆಗಳು ನಡೆಯುವ ನಿರೀಕ್ಷೆ ಇದೆ. ಚೀನಾದ 20 ವರ್ಷ ಲಿ ಟಿಂಗ್‌ಟಿಂಗ್ ಈ ಬಾರಿ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಅತಿ ಕಿರಿಯ ವಯಸ್ಸಿನವರಾಗಿದ್ದಾರೆ. ರಿಂಗ್ ಜಂಪ್‌ನಲ್ಲಿ ಅವರು ಪರಿಣಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT