ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ಪ್ರೇಕ್ಷಕರಿಗೆ ಲಸಿಕೆ– ನೆಗೆಟಿವ್‌ ವರದಿ ಕಡ್ಡಾಯ

ಅಭಿಮಾನಿಗಳಿಗೆ ಅವಕಾಶ ನೀಡಬೇಕೇ: ಸದ್ಯದಲ್ಲೇ ನಿರ್ಧಾರ
Last Updated 31 ಮೇ 2021, 7:19 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ ಕ್ರೀಡೆಗಳು ನಡೆಯುವ ಇಲ್ಲಿನ ತಾಣಗಳಿಗೆ ಪ್ರವೇಶ ಪಡೆಯಬೇಕಾದರೆ ಅಭಿಮಾನಿಗಳು ಒಂದೊ ಲಸಿಕೆ ಹಾಕಿಸಿಕೊಂಡಿರಬೇಕು ಇಲ್ಲವೇ ಸೋಂಕು ಇಲ್ಲವೆಂಬ ಪರೀಕ್ಷಾ ವರದಿಯನ್ನು ತರಬೇಕು ಎಂದು ಜಪಾನ್‌ನ ಪತ್ರಿಕೆಯೊಂದು ಸೋಮವಾರ ವರದಿ ಮಾಡಿದೆ.

ಹರ್ಷೋದ್ಗಾರ ಮಾಡುವುದಕ್ಕೆ, ತಿನಿಸುಗಳನ್ನು ಒಯ್ಯುವುದಕ್ಕೆ, ಹೈ–ಫೈವ್‌ (ಚಪ್ಪಾಳೆಯ ಸಂಭ್ರಮಕ್ಕೆ) ಮತ್ತು ಮದ್ಯಸೇವನೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ಯೊಮಿಯುರಿ ಶಿಂಬುನ್‌’ ಪತ್ರಿಕೆ ವರದಿ ಮಾಡಿದೆ.

ಕೊರೊನಾ ವೈರಸ್‌ ಎಬ್ಬಿಸಿದ ಕೋಲಾಹಲದಿಂದ ಕ್ರೀಡೆಗಳು ಈಗಾಗಲೇ ಒಮ್ಮೆ ಮುಂದೂಡಿಕೆಯಾಗಿವೆ. ಈಗ ಜುಲೈ ಅಂತ್ಯದಲ್ಲಿ ಆರಂಭವಾಗುವ ಈ ಕ್ರೀಡೆಗಳಿಗೆ ಪ್ರೇಕ್ಷಕರಿಗೇನಾದರೂ ಅವಕಾಶ ನೀಡುವುದಾದರೆ ಎಷ್ಟು ಮಂದಿಗೆ ಬಿಡಬೇಕು ಅಥವಾ ಸಂಪೂರ್ಣ ನಿರ್ಬಂಧ ಹೇರಬೇಕೇ ಎಂಬುದನ್ನು ಸಂಘಟಕರು ಜೂನ್‌ನಲ್ಲಿ ನಿರ್ಧರಿಸಲಿದ್ದಾರೆ.

ಹೊರರಾಷ್ಟ್ರಗಳ ಪ್ರೇಕ್ಷಕರಿಗೆ ಈಗಾಗಲೇ ನಿರ್ಬಂಧ ವಿಧಿಸಲಾಗಿದೆ. ದೇಶಿಯ ಪ್ರೇಕ್ಷಕರು ಮಾರ್ಗಸೂಚಿ ಉಲ್ಲಂಘಿಸಿದರಲ್ಲಿ ಅವರನ್ನು ಹೊರಹಾಕಲಾಗುವುದು ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ.

‘ಸೋಂಕು ಹರಡುವುದಕ್ಕೆ ಸಂಪೂರ್ಣ ತಡೆಹಾಕುವುದು ಯೋಜನೆಯಾಗಿದೆ. ಈ ಯೋಜನೆಯ ಪ್ರಕಾರ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರ ತೋರಿಸಬೇಕು ಅಥವಾ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಆಗಿರುವ ವರದಿಯನ್ನು ತಪಾಸಣೆ ವೇಳೆ ತೋರಿಸಬೇಕಾಗುತ್ತದೆ. ಕ್ರೀಡಾಂಗಣಕ್ಕೆ ಹೋಗುವ ವಾರಕ್ಕೆ ಮೊದಲು ಅಭಿಮಾನಿಗಳು ತಮ್ಮದೇ ಖರ್ಚಿನಲ್ಲಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯ. ಆರೋಗ್ಯ ತಪಾಸಣೆ ವಿವರದ ಅರ್ಜಿಯನ್ನು ಪ್ರೇಕ್ಷಕರು ಭರ್ತಿಮಾಡಬೇಕಾಗುತ್ತದೆ. ಇವೆಲ್ಲಾ ಮುಗಿಸಿ ಕ್ರೀಡಾಂಗಣಕ್ಕೆ ಹೋದರೂ ಅಲ್ಲಿ ಗಟ್ಟಿಯಾಗಿ ಹರ್ಷೋದ್ಗಾರ ಮಾಡುವಂತಿಲ್ಲ. ಸಂಭ್ರಮ ಆಚರಿಸಲು ಹೈಫೈಗಳನ್ನೂ ಮಾಡುವಂತಿಲ್ಲ.

ಸೋಂಕು ಪ್ರಕರಣಗಳ ನಿಯಂತ್ರಣಕ್ಕೆ ಈಗಾಗಲೇ ಟೋಕಿಯೊ ಮತ್ತು ಜಪಾನ್‌ನ ಇತರ ಪ್ರಮುಖ ನಗರಗಳಲ್ಲಿ ತುರ್ತುಸ್ಥಿತಿ ಜಾರಿಗೊಳಿಸಲಾಗಿದೆ. ಕಳೆದ ಶುಕ್ರವಾರ ಈ ತುರ್ತುಸ್ಥಿತಿಯನ್ನು ಜೂನ್‌ 20ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅಲ್ಲಿಂದ ಸುಮಾರು ಒಂದು ತಿಂಗಳ ನಂತರ– ಜುಲೈ 23ಕ್ಕೆ ಕ್ರೀಡೆಗಳ ಉದ್ಘಾಟನಾ ಸಮಾರಂಭ ನಿಗದಿಯಾಗಿದೆ.

ಪ್ರೇಕ್ಷಕರ ವರ್ತನೆ ಗಮನಿಸಲು ಅಲ್ಲಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಎಷ್ಟು ಮಂದಿ ಪ್ರೇಕ್ಷಕರಿಗೆ ಕ್ರೀಡೆಗಳನ್ನು ನೋಡಲು ಬಿಡಲಾಗುವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಇದುವರೆಗೆ ಕೇವಲ ಶೇ 2.5 ರಷ್ಟು ಜಪಾನೀಯರು ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ.

ಯೊಮಿಯೂರಿ ಶಿಂಬುನ್‌ ಪತ್ರಿಕೆ ಸೋಮವಾರ ಹೊಸ ಸಮೀಕ್ಷಾ ವರದಿ ಪ್ರಕಟಿಸಿದ್ದು, ಅದರ ಪ್ರಕಾರ ಟೋಕಿಯೊದ ಶೇ 49ರಷ್ಟು ಮಂದಿ ಕ್ರೀಡೆಗಳು ನಡೆಯಲಿ ಎಂದು ಹೇಳಿದ್ದರೆ, ಶೇ 48 ಮಂದಿ ಒಲಿಂಪಿಕ್ಸ್‌ ನಡೆಸುವುದು ಬೇಡವೇ ಬೇಡ ಎಂದಿದ್ದಾರೆ.

ನಿಕ್ಕಿ ಹೆಸರಿನ ಪತ್ರಿಕೆ ನಡೆಸಿದ ದೇಶವ್ಯಾಪಿ ಸಮೀಕ್ಷೆಯಲ್ಲಿ ಶೇ 62ರಷ್ಟು ಮಂದಿ ಕ್ರೀಡೆಗಳನ್ನು ರದ್ದುಮಾಡಬೇಕು ಇಲ್ಲವೇ ಮುಂದೂಡಬೇಕು ಎಂದು ಹೇಳಿದ್ದರೆ, ಶೇ 34ರಷ್ಟು ಮಂದಿ ಈ ಬೇಸಿಗೆಯಲ್ಲೇ ನಡೆಯಲಿ ಎಂದಿದ್ದಾರೆ.

ಟೋಕಿಯೊ ಕ್ರೀಡೆಗಳನ್ನು ಮತ್ತೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಸಂಘಟಕರು ಪದೇ ಪದೇ ಹೇಳುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT