ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಿಚಂದ್ ಅಭಿನಂದಿಸಿದ್ದಾರೆ, ಆದರೆ ಸೈನಾ...? ಸಿಂಧು ಪ್ರತಿಕ್ರಿಯೆ ಹೀಗಿತ್ತು

Last Updated 2 ಆಗಸ್ಟ್ 2021, 10:55 IST
ಅಕ್ಷರ ಗಾತ್ರ

ಟೋಕಿಯೊ: ದೇಶದಲ್ಲಿ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಬೆಳಕಿಗೆ ತಂದಿರುವ ದಿಗ್ಗಜ ಕೋಚ್ ಪುಲ್ಲೇಲ ಗೋಪಿಚಂದ್ ಅವರು ತಮ್ಮನ್ನು ಅಭಿನಂದಿಸಿರುವುದಾಗಿ ಪಿ.ವಿ.ಸಿಂಧು ತಿಳಿಸಿದ್ದಾರೆ. ಆದರೆ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಗೋಪಿಚಂದ್ ಗರಡಿಯಲ್ಲೇ ಪಳಗಿರುವ ಸಿಂಧು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಆದರೆ ಈಗ ದಕ್ಷಿಣ ಕೊರಿಯಾದ ನೂತನ ಕೋಚ್ ಪಾರ್ಕ್ ಟೆ ಸಾಂಗ್ ಮಾರ್ಗದರ್ಶನದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಈ ಮೂಲಕ ಭಾರತದ ಹೆಮ್ಮೆಯ ಪಿ.ವಿ. ಸಿಂಧು ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

'ಹೌದು, ಗೋಪಿ ಸರ್ ನನಗೆ ಅಭಿನಂದನೆ ಸಲ್ಲಿಸಿದರು. ಅಷ್ಟೇ, ನಾನು ಸೋಷಿಯಲ್ ಮೀಡಿಯಾವನ್ನು ನೋಡಿಲ್ಲ. ನಿಧಾನವಾಗಿ ಪ್ರತಿಯೊಬ್ಬರಿಗೂ ಉತ್ತರಿಸುತ್ತೇನೆ' ಎಂದರು.

ಮಾತು ಮುಂದುವರಿಸಿದ ಸಿಂಧು, 'ಗೋಪಿ ಸರ್ ನನಗೆ ಸಂದೇಶ ಕಳುಹಿಸಿದರು. ಸೈನಾ, ಇಲ್ಲ, ನಾವು ಹೆಚ್ಚು ಮಾತನಾಡುವುದಿಲ್ಲ. ಹಾಗಾಗಿ...' ಎಂದಷ್ಟೇ ಉತ್ತರಿಸಿದರು.

ಕಳೆದ ವರ್ಷ ಕೋಚ್ ಗೋಪಿಚಂದ್ ನಡುವಣ ಭಿನ್ನಭಿಪ್ರಾಯದಿಂದಾಗಿ ಕೋವಿಡ್-19 ಪಿಡುಗಿನ ನಡುವೆಯೂ ಸಿಂಧು, ಮೂರು ತಿಂಗಳ ಕಾಲ ತರಬೇತಿಗಾಗಿ ಲಂಡನ್‌ಗೆ ತೆರಳಿದ್ದರು ಎಂದು ವರದಿಯಾಗಿತ್ತು.

ಹಿಂದೆ ಈ ಕುರಿತು ಸ್ಪಷ್ಟನೆ ನೀಡಿದ್ದ ಸಿಂಧು, ನ್ಯೂಟ್ರಿಷನ್ ಹಾಗೂ ಫಿಟ್ನೆಸ್ ಅಗತ್ಯಗಳಿಗಾಗಿ ಲಂಡನ್‌ಗೆ ಹೋಗಿದ್ದೆ ಎಂದಿದ್ದರು. ಆದರೆ ತವರಿಗೆ ಮರಳಿದ ಬೆನ್ನಲ್ಲೇ ಗೋಪಿಚಂದ್ ಅಕಾಡೆಮಿ ತೊರೆದು ನೂತನ ಕೋಚ್ ಪಾರ್ಕ್ ಟೆ ಸಾಂಗ್ ಅಡಿಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದರು. ಒಲಿಂಪಿಕ್ ಸಿದ್ಧತೆಯ ಬಗ್ಗೆ ಕೇಳಿದಾಗಲೂ ಗೋಪಿಚಂದ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.

ಏತನ್ಮಧ್ಯೆ ಒಲಿಂಪಿಕ್ಸ್‌ಗೆ ಹೋಗದಿರಲು ಗೋಪಿಚಂದ್ ನಿರ್ಧರಿಸಿದ್ದರು. ಅಲ್ಲದೆ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT