ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಪ್ರಜಾವಾಣಿ ಸಂವಾದ: ಸಾಧನೆಗೆ ಆತ್ಮವಿಶ್ವಾಸವೊಂದೇ ಬಲ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಜಯಿಸಿದ್ದಾರೆ. ಒಲಿಂಪಿಕ್ಸ್‌ ಮತ್ತು ಭಾರತೀಯ ಮಹಿಳಾ ಕ್ರೀಡಾಪಟುಗಳ ಮುಂದಿರುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಶುಕ್ರವಾರ ‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪ್ಯಾರಾಲಿಂಪಿಯನ್‌ ಮಾಲತಿ ಹೊಳ್ಳ, ಒಲಿಂಪಿಯನ್‌ ಅಥ್ಲೀಟ್‌ಗಳಾದ ಜೆ.ಜೆ. ಶೋಭಾ ಮತ್ತು ಎಂ.ಆರ್‌. ಪೂವಮ್ಮ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.

***

ಸೋತರೆ ಯಾರೂ ಬರುವುದಿಲ್ಲ

ಅನೇಕ ಸಮಸ್ಯೆಗಳು ಹಾಗೂ ಸವಾಲುಗಳು ನಡುವೆ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಾರೆ. ಆಗ ಎಲ್ಲರೂ ಜೊತೆಗಿರುತ್ತಾರೆ. ಒಮ್ಮೆ ಸೋತರೆ ಕುಟುಂಬದವರನ್ನು ಹೊರತುಪಡಿಸಿ ಯಾರೂ ನಮ್ಮ ಜೊತೆ ನಿಲ್ಲುವುದಿಲ್ಲ. ಸೋಲಿಗೆ ಕಾರಣ ತಿಳಿದುಕೊಳ್ಳುವುದಿಲ್ಲ. ಈಗ ಎಲ್ಲ ಕ್ರೀಡಾಪಟುಗಳಿಗೆ ಗ್ರಾಮೀಣ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದ ತನಕ ಅನೇಕ ಟೂರ್ನಿಗಳಿವೆ. ಭಾರತದಲ್ಲಿ ಎಲ್ಲಿಯೇ ಸ್ಪರ್ಧೆಗಳು ನಡೆದರೂ ನಾವು ಮುಂಚೂಣಿಯಲ್ಲಿರುತ್ತೇವೆ. ಆದರೆ, ವಿದೇಶಿ ಸ್ಪರ್ಧಿಗಳ ಸವಾಲು ಎದುರಿಸಲು ಪರದಾಡುತ್ತೇವೆ. ಆದ್ದರಿಂದ ವಿದೇಶಿಗರ ಜೊತೆ ಹೆಚ್ಚು ಪಂದ್ಯಗಳನ್ನು ಆಡಬೇಕು. ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ಪ್ರಾಯೋಜಕರೂ ಸಿಗುತ್ತಾರೆ. ಆದರೆ, ಈಗಿನವರು ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೆ ಸಾಕು ಅದೇ ದೊಡ್ಡ ಸಾಧನೆ ಎಂದು ಸಂಭ್ರಮಿಸುತ್ತಾರೆ. ಈ ಮನೋಭಾವದಿಂದ ಹೊರಬಂದು ಒಲಿಂಪಿಕ್ಸ್‌ನಂಥ ಭವ್ಯ ವೇದಿಕೆಯಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತರುವ ಹೆಗ್ಗುರಿ ಹೊಂದಬೇಕು.

-ಎಂ.ಆರ್‌. ಪೂವಮ್ಮ, ಒಲಿಂಪಿಯನ್‌

***

ಆತ್ಮವಿಶ್ವಾಸ ನಾವೇ ಗಳಿಸಿಕೊಳ್ಳಬೇಕು

ಕ್ರೀಡೆಯಲ್ಲಿ ದೊಡ್ಡ ಸಾಧನೆಯ ಕನಸು ಕಂಡವರು ದೇಹ ದಂಡಿಸಲು ಸಿದ್ಧರಾಗಿರಬೇಕು. ದೇಹ ದಂಡಿಸಿದಷ್ಟೂ ಮನಸ್ಸು ಬಲಿಷ್ಠವಾಗುತ್ತದೆ. ಸಾಧನೆಯ ಹುಮ್ಮಸ್ಸು ಮೂಡುತ್ತದೆ. ನಾನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ದಿನಗಳಲ್ಲಿ ಈಗಿನಷ್ಟು ಸೌಲಭ್ಯಗಳು ಇರಲಿಲ್ಲ. ಈಗಿನ ಕ್ರೀಡಾಪಟುಗಳಿಗೆ ಸಾಕಷ್ಟು ಸ್ಪರ್ಧೆಗಳು ಮತ್ತು ವೇದಿಕೆಗಳಿವೆ. ಒಂದು ಟೂರ್ನಿಯಲ್ಲಿ ಗೆದ್ದರೂ ನಗದು ಬಹುಮಾನ ಸಿಗುತ್ತದೆ. ಮೊದಲಾದರೆ ಅವರಿವರ ಬಳಿ ಸಾಲ ಮಾಡಿ ಸ್ಪರ್ಧೆಗಳಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಈಗ ಹಾಗಿಲ್ಲ. ಆದರೆ, ಈಗಿನ ನಮ್ಮ ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ. ಆತ್ಮವಿಶ್ವಾಸವನ್ನು ಯಾರೂ ತಂದುಕೊಡುವುದಿಲ್ಲ. ಅದನ್ನು ನಾವೇ ಗಳಿಸಿಕೊಳ್ಳಬೇಕು. ಸರ್ಕಾರ ಕೊಟ್ಟ ನೆರವು ಸದುಪಯೋಗ ಪಡಿಸಿಕೊಳ್ಳಬೇಕು. ನೀವೇನು ಮಾಡುತ್ತೀರಿ ಎಂದು ಟೀಕಿಸುವವರಿಗೆ ಸಾಧನೆಯ ಮೂಲಕ ಉತ್ತರ ಕೊಡಬೇಕು. 

-ಮಾಲತಿ ಹೊಳ್ಳ, ಪ್ಯಾರಾಲಿಂಪಿಯನ್‌

***

ಸೋಲು ಗೆಲುವಿಗೆ ಮೆಟ್ಟಿಲಾಗಲಿ

ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಎಂಬ ಪುಟ್ಟ ಗ್ರಾಮದಿಂದ ನಗರ ಪ್ರದೇಶಕ್ಕೆ ಹೋದಾಗಲೇ ಅಥ್ಲೆಟಿಕ್ ಟ್ರ್ಯಾಕ್‌ ಹೇಗಿರುತ್ತದೆ ಎನ್ನುವುದನ್ನು ಮೊದಲ ಬಾರಿಗೆ ನೋಡಿದ್ದೆ. ಅಲ್ಲಿ ಕಲಿತ ಪಾಠ ನನ್ನ ಕ್ರೀಡಾ ಬದುಕನ್ನು ರೂಪಿಸಿದೆ.

ಭಾರತದಲ್ಲಿ ಕ್ರಿಕೆಟ್‌ಗೆ ಸಿಕ್ಕಷ್ಟು ಸ್ಥಾನಮಾನ, ಗೌರವ ಬೇರೆ ಯಾವ ಕ್ರೀಡೆಗಳಿಗೂ ಸಿಗುತ್ತಿಲ್ಲ. ಹೀಗಾಗಿ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ನಮಗೆ ಈಗ ಪದಕ ಗೆಲ್ಲಲು ಸಾಧ್ಯವಾಗುತ್ತಿಲ್ಲ. ವಿದೇಶದಲ್ಲಿ ಇರುವಷ್ಟು ಸೌಲಭ್ಯಗಳು ಆಗ ನಮಗೆ ಸಿಗುತ್ತಿರಲಿಲ್ಲ. ಈಗ ಸಾಕಷ್ಟು ಅನುಕೂಲಗಳಿವೆ. ತರಬೇತಿ ವಿಧಾನ, ಸಿಬ್ಬಂದಿ, ತಾಂತ್ರಿಕ ಕೌಶಲ ಸಾಕಷ್ಟು ಸುಧಾರಣೆಯಾಗಿವೆ. ಇನ್ನೂ ಬಹಳಷ್ಟು ಬದಲಾಗಬೇಕಿದೆ.ಕ್ರೀಡಾಪಟುಗಳಿಗೆ ಆತ್ಮಶಕ್ತಿ ಬಹಳ ಮುಖ್ಯ. ಭಾರತದಲ್ಲಿ ಅತ್ಯುತ್ತಮ ಅಥ್ಲೀಟ್‌ಗಳಿದ್ದಾರೆ. ಒಂದೆರೆಡು ಟೂರ್ನಿಗಳಲ್ಲಿ ಸೋತರೆ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಬೇಕು.

-ಶೋಭಾ ಜೆ ಜಾವೂರ್, ಒಲಿಂಪಿಯನ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು