ಬುಧವಾರ, ಜೂನ್ 16, 2021
28 °C
ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥರ ಪ್ರತಿಪಾದನೆ

ನಿಗದಿಯಂತೆ ಒಲಿಂಪಿಕ್ಸ್: ಥಾಮಸ್ ಬಾಕ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಪಾನ್‌ನ ಬಹುತೇಕ ಜನರ ವಿರೋಧದ ನಡುವೆಯೂ ನಿಗದಿತ ವೇಳಾಪಟ್ಟಿಯ ಪ್ರಕಾರವೇ ಒಲಿಂಪಿಕ್ಸ್ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್ ಶನಿವಾರ ಹೇಳಿದ್ದಾರೆ.

‘2020ರ ಟೋಕಿಯೊ ಕೂಟವನ್ನು ಕೋವಿಡ್‌ ಹಿನ್ನೆಲೆಯಲ್ಲಿ ಈಗಾಗಲೇ ಒಂದು ವರ್ಷ ಮುಂದೂಡಲಾಗಿದೆ. ಕೂಟವನ್ನು ಈ ಬಾರಿ ಆಯೋಜಿಸುವುದರಿಂದ ಗಾಢ ಕತ್ತಲಿನಾಚೆಯೂ ಬೆಳಕಿದೆ ಎಂಬ ಸಂದೇಶವನ್ನು ಸಾರಿದಂತಾಗುತ್ತದೆ‘ ಎಂದು ಬಾಕ್ ಪ್ರತಿಪಾದಿಸಿದ್ದಾರೆ.

ಆನ್‌ಲೈನ್ ಮೂಲಕ ನಡೆದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) 47ನೇ ಅಧಿವೇಶನವನ್ನುದ್ದೇಶಿ ಅವರು ಮಾತನಾಡಿದರು.

‘ಟೋಕಿಯೊ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಏಕತೆ, ವೈವಿದ್ಯತೆ, ಸ್ಥಿರತೆಯ ಬಲವಾದ ಸಂದೇಶಗಳನ್ನು ಕಳುಹಿಸಬೇಕಿದೆ. ಟೋಕಿಯೊ ಕೂಟವು ಕತ್ತಲಿನಾಚೆಯೂ ಬೆಳಕಿದೆ ಎಂಬುದನ್ನು ತೋರಿಸಲಿದೆ‘ ಎಂದು ಬಾಕ್ ಹೇಳಿದ್ದಾರೆ.

ಇನ್ನೆರಡು ತಿಂಗಳುಗಳ ನಂತರ ಟೋಕಿಯೊ ಮತ್ತು ಜಪಾನಿನ ಕೆಲವು ನಗರಗಳಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಇದ್ದರೂ ಒಲಿಂಪಿಕ್ಸ್‌ ಆಯೋಜಿಸಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಪ್ರಭಾರಿ ಉಪಾಧ್ಯಕ್ಷ ಜಾನ್ ಕೋಟ್ಸ್‌ ಶುಕ್ರವಾರ ಹೇಳಿದ್ದರು. ಅದಕ್ಕೆ ಪೂರಕವಾಗಿ ಬಾಕ್ ಈ ಮಾತುಗಳನ್ನಾಡಿದ್ದಾರೆ.

ಜಪಾನ್‌ನ ಬಹುತೇಕ ಜನತೆ ಒಲಿಂಪಿಕ್ಸ್ ಆಯೋಜನೆಯ ಪರವಾಗಿ ಇಲ್ಲ. ಕೋವಿಡ್‌ ಹಿನ್ನೆಲೆಯಲ್ಲಿ, ವೈದ್ಯಕೀಯ ಮೂಲಸೌಕರ್ಯಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಅವರದು. ಆದರೆ ಕೂಟ ಆಯೋಜನೆಯ ವಿಷಯದಲ್ಲಿ ಐಒಸಿ ಅಚಲವಾಗಿದೆ.

‘ಎಲ್ಲರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಜಪಾನ್‌ನಲ್ಲಿರುವ ನಮ್ಮ ಸಹ ಸಂಸ್ಥೆಯ ಅಧಿಕಾರಿಗಳೊಂದಿಗೆ ಕೂಟಕ್ಕೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡಲಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ನಮ್ಮ ಶೇಕಡಾ 70ರಷ್ಟು ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಬರುಬರುತ್ತಾ ಹೆಚ್ಚಾಗಲಿದೆ. ಲಸಿಕೆ ನೀಡಲು ಮೂರು ಉತ್ಪಾದಕ ಕಂಪನಿಗಳಿಂದ ಬೇಡಿಕೆ ಬಂದಿದೆ‘ ಎಂದು ಬಾಕ್ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು