ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರ ಜುಲೈ 23ರಿಂದ ಆಗಸ್ಟ್ 8ರವರೆಗೆ ಟೋಕಿಯೊ ಒಲಿಂಪಿಕ್ಸ್: ಹೊಸ ದಿನಾಂಕ ಪ್ರಕಟ

Last Updated 30 ಮಾರ್ಚ್ 2020, 17:51 IST
ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊ ಒಲಿಂ‍ಪಿಕ್‌ ಕ್ರೀಡೆಗಳು ಮುಂದಿನ ವರ್ಷದ ಜುಲೈ 23ರಂದು ಆರಂಭವಾಗಲಿವೆ ಎಂದು ಸಂಘಟಕರು ಸೋಮವಾರ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಕೋಲಾಹಲದ ಕಾರಣ ಈ ವರ್ಷದ ಜುಲೈ 24ರಂದು ಆರಂಭವಾಗಬೇಕಿದ್ದ ಕ್ರೀಡೆಗಳನ್ನು ಮುಂದಕ್ಕೆ ಹಾಕಲಾಗಿತ್ತು. ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರ ಕೈಗೊಂಡ ನಂತರ ವಾರದೊಳಗೇ ಪರಿಷ್ಕೃತ ದಿನಾಂಕಗಳನ್ನೂ ಪ್ರಕಟಿಸಿದಂತಾಗಿದೆ.

‘ಟೋಕಿಯೊ ಒಲಿಂಪಿಕ್ಸ್‌ ಜುಲೈ 23 ರಿಂದ ಆಗಸ್ಟ್‌ 8ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 24ರಿಂದ ಸೆಪ್ಟೆಂಬರ್‌ 5ರವರೆಗೆ ನಡೆಯಲಿದೆ‘ ಎಂದು ಟೋಕಿಯೊ 2020 ಕ್ರೀಡೆಗಳ ಮುಖ್ಯಸ್ಥ ಯೊಶಿರೊ ಮೊರಿ ಅವರು ಸಂಜೆ ತುರ್ತಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೆಲವೇ ಗಂಟೆಗಳ ಮೊದಲು ನೀಡಿದ್ದ ಹೇಳಿಕೆಯಲ್ಲಿ ಮೊರಿ ಅವರು ‘ಒಲಿಂಪಿಕ್‌ ಕ್ರೀಡೆಗಳ ದಿನಾಂಕಗಳು ಈ ವಾರ ನಿಗದಿಯಾಗಲಿವೆ‘ ಎಂದಿದ್ದರು. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಅಧ್ಯಕ್ಷರ ಜೊತೆ ತುರ್ತು ಟೆಲಿಕಾನ್ಫರೆನ್ಸ್‌ ನಡೆಸಿದ ನಂತರ ದಿನಾಂಕ ನಿಗದಿಯಾಯಿತು ಎಂದು ಅವರು ನಂತರ ತಿಳಿಸಿದರು.

‘ನಾವು ಆರಂಭದಲ್ಲೇ ಅಂದುಕೊಂಡಂತೆ ಬೇಸಿಗೆಯಲ್ಲೇ ಕ್ರೀಡೆಗಳನ್ನು ನಡೆಸಲು ಒಪ್ಪಿಕೊಂಡೆವು. ಕೊರೊನಾ ವೈರಸ್‌ ಎಬ್ಬಿಸಿದ ಹಾವಳಿಯಿಂದ ಚೇತರಿಸಲು ಸಮಯ, ಸಿದ್ಧತೆಗೆ ಅಗತ್ಯ ಕಾಲ, ಅಥ್ಲೀಟುಗಳ ಆಯ್ಕೆ ಮತ್ತು ಅರ್ಹತೆಗೆ ಕೂಟಗಳನ್ನು ಆಯೋಜನೆ ನಡೆಸಲು ತಗಲುವ ಸಮಯ ಮೊದಲಾದವುಗಳನ್ನು ಪರಿಗಣಿಸಿದೆವು‘ ಎಂದು ಮೊರಿ ತಿಳಿಸಿದರು.

ಟೋಕಿಯೊ ಕ್ರೀಡೆಗಳು ನಿಗದಿಯಂತೆ ಈ ವರ್ಷದ ಜುಲೈ 24ರಂದು ಆರಂಭವಾಗಿ ಒಟ್ಟು 16 ದಿನಗಳ ಕಾಲ ನಡೆಯಬೇಕಿತ್ತು.

ಕೋವಿಡ್‌ –19 ಸಾಂಕ್ರಾಮಿಕ ಪಿಡುಗಿನಿಂದ ಜನಸಂಕುಲದ ಮೇಲಾಗಿರುವ ಹಾನಿ, ಪರಿಣಾಮದಿಂದ ಹೊರಬರಲು ಆರೋಗ್ಯ ಅಧಿಕಾರಿಗಳಿಗೆ ಮತ್ತು ಸಂಘಟಕರಿಗೆ ಈ ಹೊಸ ದಿನಾಂಕವು ಸಾಕಷ್ಟು ಸಮಯ ಒದಗಿಸಲಿದೆ ಎಂದು ಐಒಸಿ ಹೇಳಿಕೆಯಲ್ಲಿ ತಿಳಿಸಿದೆ.

ಈ ತೀರ್ಮಾನದಿಂದ, ಅಂತರರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳ ಪಟ್ಟಿಯ ಮೇಲೆ ಆಗುವ ಏರುಪೇರು ಕನಿಷ್ಠ ಪ್ರಮಾಣದಲ್ಲಿರಲಿದೆ ಎಂದು ಹೇಳಿಕೆ ತಿಳಿಸಿದೆ.

ತಲೆನೋವು:ಒಲಿಂಪಿಕ್ಸ್‌ ಮುಂದೂಡಿರುವ ಕಾರಣ ಇದರ ಬಿಸಿ ಪ್ರಮುಖವಾಗಿ ಹೋಟೆಲ್‌, ಟಿಕೆಟ್ ವೆಚ್ಚ, ಕ್ರೀಡಾಗ್ರಾಮದ ನಿರ್ವಹಣೆ ಮತ್ತು ಸಾರಿಗೆ ಕ್ಷೇತ್ರಗಳ ಮೇಲೆ ತಟ್ಟಲಿದೆ. ಹೋಟೆಲ್‌ ಉದ್ಯಮವು ಬುಕ್ಕಿಂಗ್‌ ರದ್ದು ಮಾಡಬೇಕಾಗಿದೆ. ಈಗಾಗಲೇ ವೈರಸ್‌ ಉಪಟಳದಿಂದ ಪ್ರವಾಸದೋದ್ಯಮ ಕ್ಷೇತ್ರ ತತ್ತರಿಸಿದ್ದು, ಪರಿಣಾಮ ಹೋಟೆಲ್‌ ಉದ್ಯಮಕ್ಕೆ ಇದು ಹೆಚ್ಚುವರಿ ಹೊಡೆತವಾಗಲಿದೆ.

ಕ್ರೀಡಾ ಗ್ರಾಮದ ನಿರ್ವಹಣೆಯ ವೆಚ್ಚವೂ ಅಪಾರವಾಗಲಿದೆ. ಅಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲವನ್ನು ಈಗಾಗಲೇ ಜನರು ಖರೀದಿಸಿದ್ದಾರೆ. ಟಿಕೆಟ್‌ ಖರೀದಿಸಿದವರಿಗೆ ಹಣವನ್ನು ಹಿಂತಿರುಗಿಸಬೇಕಾಗಿದೆ.

ವಿಶ್ವ ಅಥ್ಲೆಟಿಕ್ಸ್ ಕೂಟ 2022ಕ್ಕೆ
ಪ್ಯಾರಿಸ್‌ (ಎಎಫ್‌ಪಿ):
ಅಮೆರಿಕದ ಆರೆಗಾನ್‌ ಯೂಜೀನ್‌ನಲ್ಲಿ ನಡೆಯಬೇಕಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಅನ್ನು 2022ಕ್ಕೆ ಮುಂದೂಡಲಾಗಿದೆ. ಟೋಕಿಯೊ ಒಲಿಂಪಿಕ್‌ ಕೂಟದ ಪರಿಷ್ಕೃತ ದಿನಾಂಕ ಪ್ರಕಟವಾದ ಬಳಿಕ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ಸ್ ಸಂಸ್ಥೆ (ಐಎಎಎಫ್‌) ಈ ನಿರ್ಧಾರ ಕೈಗೊಂಡಿದೆ.

2021ರ ಆಗಸ್ಟ್‌ 6ರಿಂದ15ರವರೆಗೆ ಚಾಂಪಿಯನ್‌ಷಿಪ್‌ ಆಯೋಜನೆಯಾಗಿತ್ತು. ಟೋಕಿಯೊ ಕೂಟವು ಇದೇ ವರ್ಷದ ಜುಲೈ 23ರಿಂದ ಆಗಸ್ಟ್‌ 8ರವರೆಗೆ ನಡೆಯಲಿರುವುದರಿಂದ ಚಾಂಪಿಯನ್‌ಷಿಪ್‌ ಮುಂದಕ್ಕೆ ಹೋಗಿದೆ.

‘ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ವಿಶ್ವ ಅಥ್ಲೆಟಿಕ್ಸ್ ಆಡಳಿತ ಮಂಡಳಿ ತಿಳಿಸಿದೆ.Tokyo Olympics

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT