ಶುಕ್ರವಾರ, ಸೆಪ್ಟೆಂಬರ್ 17, 2021
22 °C

Tokyo Olympics ಹಾಕಿ: ವಂದನಾ 'ಶ್ರೀರಕ್ಷೆ'; ಕ್ವಾರ್ಟರ್ ಲೆಕ್ಕಾಚಾರದಲ್ಲಿ ಭಾರತ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ವಿಭಾಗದಲ್ಲಿ ಗೆಲ್ಲಲೇಬೇಕಾದ ಅಂತಿಮ ಎರಡು ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿರುವ ಭಾರತ ತಂಡವು ಕ್ವಾರ್ಟರ್‌ಫೈನಲ್ ಕನಸನ್ನು ಜೀವಂತವಾಗಿರಿಸಿದೆ.

ಶನಿವಾರ 'ಎ' ಗುಂಪಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ತಂಡವು 4-3 ಗೋಲುಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ದಾಖಲಿಸಿತು.

'ಹ್ಯಾಟ್ರಿಕ್ ಗೋಲು' ಸಾಧನೆ ಮಾಡಿದ ವಂದನಾ ಕಟಾರಿಯಾ ಭಾರತಕ್ಕೆ ಶ್ರೀರಕ್ಷೆಯಾಗುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದನ್ನೂ ಓದಿ: 

 

 

 

ಪಂದ್ಯದ ನಾಲ್ಕನೇ ನಿಮಿಷದಲ್ಲಿ ಗೋಲು ಬಾರಿಸಿದ ವಂದನಾ ಮಹತ್ವದ ಮುನ್ನಡೆ ಒದಗಿಸಿಕೊಟ್ಟರು. ಕೆಲವೇ ಹೊತ್ತಿನಲ್ಲಿ ಟರಿನ್ ಗ್ಲಾಸ್ಬಿ (15ನೇ ನಿಮಿಷ) ರೂಪದಲ್ಲಿ ದಕ್ಷಿಣ ಆಫ್ರಿಕಾ ತಿರುಗೇಟು ನೀಡಿತು. ಆದರೆ 17ನೇ ನಿಮಿಷದಲ್ಲಿ ವಂದನಾ ಮಗದೊಂದು ಗೋಲು ಬಾರಿಸಿ 2-1ರ ಮುನ್ನಡೆ ಒದಗಿಸಿಕೊಟ್ಟರು.

 

ದಕ್ಷಿಣ ಆಫ್ರಿಕಾದ ಎರಿನ್ ಹಂಟರ್ 30ನೇ ನಿಮಿಷದಲ್ಲಿ ಸಮಬಲದ ಗೋಲು ದಾಖಲಿಸಿದರು. ಇನ್ನೆರಡು ನಿಮಿಷಗಳಲ್ಲಿ ನೇಹಾ ಗೋಯಲ್ (32ನೇ ನಿಮಿಷ) ತಿರುಗೇಟು ನೀಡಿದರು. 39ನೇ ನಿಮಿಷದಲ್ಲಿ ಮಾರಿಜೆನ್ ಮಾರೈಸ್ ಗೋಲು ಬಾರಿಸುವುದರೊಂದಿಗೆ ಭಾರತದ ಪಡೆಯಲ್ಲಿ ಆತಂಕ ಸೃಷ್ಟಿಯಾಯಿತು.

ಈ ಹಂತದಲ್ಲಿ ಭಾರತದ ಪಾಲಿಗೆ ಶ್ರೀರಕ್ಷೆಯಾದ ವಂದನಾ ಪಂದ್ಯದ 49ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ ರೋಚಕ ಗೆಲುವು ದಾಖಲಿಸಲು ನೆರವಾದರು.

ಕ್ವಾರ್ಟರ್ ಲೆಕ್ಕಾಚಾರದಲ್ಲಿ ಭಾರತ...
ಈ ಗೆಲುವಿನೊಂದಿಗೆ ಆಡಿರುವ ಐದು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಒಟ್ಟು ಆರು ಅಂಕಗಳನ್ನು ಸಂಪಾದಿಸಿರುವ ಭಾರತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆದರೂ ಕ್ವಾರ್ಟರ್‌ಫೈನಲ್ ಪ್ರವೇಶಕ್ಕಾಗಿ ಐರ್ಲೆಂಡ್ ಸೋಲಿಗಾಗಿ ಕಾಯಬೇಕಿದೆ.

ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶವನ್ನು ಪಡೆಯಲಿವೆ. ಅತ್ತ ಐರ್ಲೆಂಡ್ ನಾಲ್ಕು ಪಂದ್ಯಗಳಲ್ಲಿ ಮೂರು ಅಂಕಗಳನ್ನು ಹೊಂದಿವೆ. ಐರ್ಲೆಂಡ್ ಕೊನೆಯ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಸವಾಲನ್ನು ಎದುರಿಸಲಿದೆ.

ಅಂತಿಮ ಪಂದ್ಯದಲ್ಲಿ ಐರ್ಲೆಂಡ್ ಗೆದ್ದರೆ ಭಾರತದಷ್ಟೇ ಅಂಕ ಗಳಿಸಲಿದೆ. ಆದರೆ ಗೋಲುಗಳ ಲೆಕ್ಕಾಚಾರದಲ್ಲಿ ಕ್ವಾರ್ಟರ್‌ಗೆ ಪ್ರವೇಶಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು