ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಕಂಚಿನ ಪದಕಕ್ಕಾಗಿ ದೀಪಕ್ ಪೂನಿಯಾ ಸೆಣಸು; ಅನ್ಶು ಮಲಿಕ್‌ಗೆ ನಿರಾಸೆ

Tokyo Olympics: ಚಿನ್ನದ ಭರವಸೆ ಮೂಡಿಸಿದ ರವಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಚಿಬಾ, ಜಪಾನ್‌: ಎದುರಾಳಿಯ ತಂತ್ರಗಳ ವಿರುದ್ಧ ’ಬಿಗಿ’ ಪಟ್ಟುಗಳನ್ನು ಬಳಸಿದ ಭಾರತದ ರವಿ ದಹಿಯಾ ಒಲಿಂಪಿಕ್ಸ್‌ ಕುಸ್ತಿಯ ಫೈನಲ್ ಪ್ರವೇಶಿಸಿದರು. ಬುಧವಾರ ನಡೆದ 57 ಕೆಜಿ ವಿಭಾಗದ ನಾಲ್ಕರ ಘಟ್ಟದ ಬೌಟ್‌ನಲ್ಲಿ ಕಜಕಸ್ತಾನದ ನೂರಿಸ್ಲಾಮ್ ಸನಯೆಮ್ ಅವರನ್ನು ‘ಕೆಡವಿ’ ರವಿ ಚಿನ್ನದ ಪದಕದ ಭರವಸೆ ಮೂಡಿಸಿದರು.

86 ಕೆಜಿ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ದೀಪಕ್ ಪೂನಿಯಾ ನಾಲ್ಕರ ಘಟ್ಟದ ಬೌಟ್‌ನಲ್ಲಿ ಅಮೆರಿಕದ ಬಲಿಷ್ಠ ಪೈಲ್ವಾನ್ ಡೇವಿಡ್ ಮೊರಿಸ್‌ ಟೇಲರ್‌ಗೆ ಮಣಿದರು. ಗುರುವಾರ ಅವರು ಕಂಚಿನ ಪದಕದಕ್ಕಾಗಿ ಸೆಣಸುವರು. ಮಹಿಳೆಯರ 57 ಕೆಜಿ ವಿಭಾಗದಲ್ಲಿ ಯೂರೊಪಿಯನ್ ಚಾಂಪಿಯನ್ ಐರಿನಾ ಕುರಚಿಕಿನ ವಿರುದ್ಧ ಸೋತ ಅನ್ಶು ಮಲಿಕ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಮೊದಲ ಸುತ್ತಿನಲ್ಲಿ ರವಿ ದಹಿಯಾ 2–1ರ ಮುನ್ನಡೆ ಸಾಧಿಸಿದ್ದರು. ಎರಡನೇ ಸುತ್ತಿನಲ್ಲಿ ನಿರ್ದಿಷ್ಟ ರಣತಂತ್ರದೊಂದಿಗೆ ಬಂದ ನೂರಿಸ್ಲಾಮ್‌ ಅವರು ರವಿ ಅವರ ಎಡಗಾಲನ್ನು ಹಿಡಿದು ಬೀಳಿಸಿ ಬಿಗಿಯಾಗಿ ಹಿಡಿದುಕೊಂಡು ಮೂರು ಬಾರಿ ಗಿರಿಗಿರಿ ತಿರುಗಿಸಿ ಆರು ಪಾಯಿಂಟ್ ಕಲೆ ಹಾಕಿದರು. ನಂತರ 9–2ರಲ್ಲಿ ಮುನ್ನಡೆದರು.

ಈ ಹಂತದಲ್ಲಿ ರವಿ ಚೇತರಿಸಿಕೊಳ್ಳುವುದು ಕಷ್ಟ ಎನಿಸಿತು. ಎದುರಾಳಿಯ ಕಾಲು ಹಿಡಿದು ಹೊರನೂಕಿದ ರವಿ ಪಾಯಿಂಟ್‌ಗಳನ್ನು ಕಲೆ ಹಾಕಿದರೂ 7–9ರ ಹಿನ್ನಡೆಯಲ್ಲಿದ್ದರು. ಕೊನೆಯ ಒಂದು ನಿಮಿಷ ಬಾಕಿ ಇದ್ದಾಗ ಡಬಲ್‌ ಲೆಗ್ ಅಟ್ಯಾಕ್ ಮಾಡಿ ಮ್ಯಾಟ್‌ಗೆ ಬೀಳಿಸಿ ಬಿಗಿ ‘ಲಾಕ್‌’ ಹಾಕಿದರು. ಬಿಡಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲವೂ ನೂರಿಸ್ಲಾಮ್ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಹೀಗಾಗಿ ರವಿ ಅವರನ್ನು ವಿಜೇತ ಎಂದು ಘೋಷಿಸಲಾಯಿತು.

ಈ ಜಯದೊಂದಿಗೆ ರವಿ ದಹಿಯಾ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಎರಡನೇ ಪೈಲ್ವಾನ್ ಎನಿಸಿಕೊಂಡರು. 2012ರ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಚಿನ್ನದ ಪದಕದ ಬೌಟ್ ಪ್ರವೇಶಿಸಿ ಬೆಳ್ಳಿ ಗಳಿಸಿದ್ದರು. ವಿಶ್ವ ಚಾಂಪಿಯನ್‌, ರಷ್ಯಾದ ಜವೂರ್ ಉಗುವೆ ಎದುರು ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಗೆದ್ದರೆ ಇತಿಹಾಸ ನಿರ್ಮಾಣ ಮಾಡಿದಂತಾಗುತ್ತದೆ.

ಮೊದಲ ಎರಡೂ ಬೌಟ್‌ಗಳಲ್ಲಿ ರವಿ ತಾಂತ್ರಿಕ ಪಾರಮ್ಯ ಸಾಧಿಸಿ ಜಯ ಗಳಿಸಿದ್ದರು. ಕೊಲಂಬಿಯಾದ ಟಿಗ್ರೆರಸ್ ಅರ್ಬನೊ ಅವರನ್ನು 13–2ರಲ್ಲಿ ಮಣಿಸಿದ್ದ ಅವರು ಬಲ್ಗೇರಿಯಾದ ಜಾರ್ಜಿ ವೆಲೆಂಟಿನೊವ್‌ ಎದುರು 14–4ರಲ್ಲಿ ಗೆದ್ದಿದ್ದರು.

ಸೆಮಿಫೈನಲ್‌ ಫಲಿತಾಂಶ

ರವಿ ದಹಿಯ 7

ನೂರಿಸ್ಲಾಮ್ ಸನಯೆವ್‌ 9

(ವಿಕ್ಟರಿ ಬೈ ಫಾಲ್ ಆಧಾರದಲ್ಲಿ ರವಿಗೆ ಜಯ)

ಡೇವಿಡ್ ಮೊರಿಸ್‌ ಟೇಲರ್‌ 10

ದೀಪಕ್ ಪೂನಿಯಾ 0

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು