ಬುಧವಾರ, ಜುಲೈ 6, 2022
22 °C

ಪ್ಯಾರಾಲಿಂಪಿಕ್‌ ಟೇಬಲ್ ಟೆನಿಸ್: ಸೆಮಿ ತಲುಪಿ ಐತಿಹಾಸಿಕ ಸಾಧನೆ ಮಾಡಿದ ಭಾವಿನಾ

ಎಎಫ್‌ಪಿ/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಭಾವಿನಾಬೆನ್ ಪಟೇಲ್‌ ಅವರು ಪ್ಯಾರಾಲಿಂಪಿಕ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಸೆಮಿಫೈನಲ್‌ ತಲುಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಪ್ಯಾರಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಈ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ಕ್ಲಾಸ್‌ 4 ವಿಭಾಗದಲ್ಲಿ ಭಾವಿನಾಬೆನ್‌ ಎಂಟರಘಟ್ಟದಲ್ಲಿ ಹಣಾಹಣಿಯಲ್ಲಿ 11-5 11-6 11-7ರಿಂದ ಹಾಲಿ ಚಾಂಪಿಯನ್‌, ಸರ್ಬಿಯಾದ ಬೊರಿಸ್ಲಾವಾ ಪೆರಿಚ್‌ ರ‍್ಯಾಂಕೊವಿಚ್‌ ಅವರನ್ನು ಪರಾಭಗೊಳಿಸಿದರು. ವಿಶ್ವದ ಎರಡನೇ ರ‍್ಯಾಂಕಿನ ಆಟಗಾರ್ತಿಗೆ ಭಾವಿನಾಬೆನ್ ಕೇವಲ 18 ನಿಮಿಷಗಳಲ್ಲೇ ಆಘಾತ ನೀಡಿದರು.

16ರ ಘಟ್ಟದ ಪಂದ್ಯದಲ್ಲಿ ಭಾರತದ ಆಟಗಾರ್ತಿಯು 12–10, 13–11, 11–6ರಿಂದ ಬ್ರೆಜಿಲ್‌ನ ಜಾಯ್ಸ್ ಡಿ ಒಲಿವೆರಾ ಅವರನ್ನು ಮಣಿಸಿದ್ದರು.

ಸೆಮಿಫೈನಲ್‌ನಲ್ಲಿ ಭಾವಿನಾ ಅವರಿಗೆ ಚೀನಾದ ಜಾಂಗ್‌ ಮಿಯಾವೊ ಅವರ ಸವಾಲು ಎದುರಾಗಿದೆ.

ಶನಿವಾರ ಈ ಪಂದ್ಯ ನಿಗದಿ ಯಾಗಿದೆ. ಈ ಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಕಂಚಿನ ಪದಕದ ಪ್ಲೇ ಆಫ್‌ ಇಲ್ಲವಾದ್ದರಿಂದ ಸೆಮಿಫೈನಲ್‌ನಲ್ಲಿ ಸೋತವರಿಗೂ ಪದಕ ಖಚಿತವಾಗಿದೆ.

ಗುಜರಾತ್‌ನ ಮೆಹಸಾನಾ ಜಿಲ್ಲೆಯ ಸುಂಡಿಯಾ ಗ್ರಾಮದ ಭಾವಿನಾ, ಗುಜರಾತ್‌ ಪರ ಜೂನಿಯರ್ ಕ್ರಿಕೆಟ್ ಆಡಿದ್ದ ನಿಕುಂಜ್ ‍ಪಟೇಲ್‌ ಎಂಬು ವರನ್ನು ವರಿಸಿದ್ದಾರೆ. ಮದುವೆ ಬಳಿಕ ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ.

ಬಾಲ್ಯದಲ್ಲಿ ಪೊಲೀಯೊ ಬಾಧಿಸಿದ ಕಾರಣ ಭಾವಿನಾ ಅವರ ಕಾಲು ಬಲ ಕಳೆದುಕೊಂಡಿದೆ. ‘ಅವಳಿಗೆ ಶೇಕಡಾ 90ರಷ್ಟು ಅಂಗವೈಕಲ್ಯವಿದೆ. ಆದರೆ 10 ಮಂದಿ ಸಾಮಾನ್ಯ ನಾಗರಿ ಕರಿಗೆ ಇರುವಷ್ಟು ಇಚ್ಛಾಶಕ್ತಿ ಮತ್ತು ದೃಢವಿಶ್ವಾಸ ಅವಳಲ್ಲಿದೆ‘ ಎಂದು ನಿಕುಂಜ್ ಹೇಳುತ್ತಾರೆ.

ಆರ್ಚರಿ: ರ‍್ಯಾಂಕಿಂಗ್‌ ಸುತ್ತಿನಲ್ಲಿ ರಾಕೇಶ್‌ಗೆ ಮೂರನೇ ಸ್ಥಾನ: ಆರ್ಚರಿ ಓಪನ್‌ ವಿಭಾಗದಲ್ಲಿ ರಾಕೇಶ್‌ ಕುಮಾರ್ ಜೀವನಶ್ರೇಷ್ಠ 699 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಗಳಿಸಿದರು. ರಿಕರ್ವ್ ಓಪನ್ ವಿಭಾಗದಲ್ಲಿ ವಿವೇಕ್ ಚಿಕಾರ 10ನೇ ಸ್ಥಾನ ಪಡೆದರು. ವಿವೇಕ್‌ 2019ರ ಏಷ್ಯನ್ ಪ್ಯಾರಾ ಚಾಂಪಿಯನ್ ಆಗಿದ್ದಾರೆ. ಓಪನ್ ವಿಭಾಗದಲ್ಲಿ ಶ್ಯಾಮ ಸುಂದರ್ ಸ್ವಾಮಿ 21ನೇ ಸ್ಥಾನ ಗಳಿಸಿದರು. ರಾಕೇಶ್ ಹಾಗೂ ಶ್ಯಾಮ ಸುಂದರ್ ಎರಡನೇ ಸುತ್ತು ಪ್ರವೇಶಿಸಿ ದ್ದಾರೆ. ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಜ್ಯೋತಿ ಬಲಿಯಾನ್‌ 15ನೇ ಸ್ಥಾನ ತಮ್ಮದಾಗಿಸಿಕೊಂಡರು. ಕುಮಾರ್ ಮತ್ತು ಜ್ಯೋತಿ ಮಿಶ್ರ ಪೇರ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಪವರ್‌ ಲಿಫ್ಟಿಂಗ್‌: ಭಾರತದ ಸಕೀನಾಗೆ ಐದನೇ ಸ್ಥಾನ
ನಿರೀಕ್ಷೆ ಮೂಡಿಸಿದ್ದ ಭಾರತದ ಸಕೀನಾ ಖಾತುನ್‌ ಪವರ್‌ ಲಿಫ್ಟಿಂಗ್‌ನಲ್ಲಿ ಐದನೇ ಸ್ಥಾನ ಗಳಿಸಿದರು.

ಮಹಿಳೆಯರ 50 ಕೆಜಿ ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ ಒಟ್ಟು 93 ಕೆಜಿ ಸಾಧನೆ ಮಾಡಿದರು. ಪಶ್ಚಿಮ ಬಂಗಾಳದವರಾದ ಸಕೀನಾ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿದ್ದರು.

ಚೀನಾದ ಡ್ಯಾಂಡನ್‌ ಹು (120 ಕೆಜಿ ಭಾರ) ಚಿನ್ನದ ಪದಕ ಗೆದ್ದುಕೊಂಡರೆ, ಈಜಿಪ್ಟ್‌ನ ರೆಹಾಬ್ ಅಹಮದ್‌ (120 ಕೆಜಿ) ಮತ್ತು ಗ್ರೇಟ್‌ ಬ್ರಿಟನ್‌ನ ಒಲಿವಿಯಾ ಬ್ರೂಮ್‌ (107 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

32 ವರ್ಷದ ಸಕೀನಾ ಮೊದಲ ಯತ್ನದಲ್ಲಿ 90 ಕೆಜಿ ಭಾರ ಎತ್ತಿದರು. ಎರಡನೆ ಪ್ರಯತ್ನದಲ್ಲಿ 93 ಎತ್ತುವ ಯತ್ನದಲ್ಲಿ ವಿಫಲರಾದರು ಆದರೆ ಮೂರನೇ ಯತ್ನದಲ್ಲಿ ಸಫಲರಾದರು.

2014ರಲ್ಲಿ ಗ್ಲಾಸ್ಗೊದಲ್ಲಿ ಕಂಚು ಗೆದ್ದಿದ್ದ ಸಕೀನಾ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಏಕೈಕ ಮಹಿಳಾ ಪ್ಯಾರಾಲಿಂಪಿಯನ್ ಎನಿಸಿಕೊಂಡಿದ್ದಾರೆ. 2014ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಅವರಿಗೆ ಬೆಳ್ಳಿ ಒಲಿದಿತ್ತು.

ಜೈದೀಪ್ ವಿಫಲ: ಪುರುಷರ 65 ಕೆಜಿ ವಿಭಾಗದಲ್ಲಿ ಜೈದೀಪ್‌ ಮೂರು ಪ್ರಯತ್ನಗಳಲ್ಲಿ ವೈಫಲ್ಯ ಅನುಭವಿಸಿದರು.

***

ದೇಶದ ಜನರ ಬೆಂಬಲವಿದ್ದರೆ ಸೆಮಿಫೈನಲ್‌ ಹಣಾಹಣಿಯಲ್ಲಿ ವಿಜಯ ಸಾಧಿಸಬಲ್ಲೆ. ನಿಮ್ಮೆಲ್ಲರ ಹಾರೈಕೆ ಮತ್ತು ಸಹಕಾರ ನನ್ನೊಂದಿಗೆ ಇರಲಿದೆ ಎಂಬ ವಿಶ್ವಾಸದಲ್ಲಿದ್ದೇನೆ.
-ಭಾವಿನಾಬೆನ್, ಭಾರತದ ಟಿಟಿ ಆಟಗಾರ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು