ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌ ಹುಡುಗನ ಸಿನಿಮಾ ಹಾದಿ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಓದಿದ್ದು ಬಿ.ಎಸ್‌ಸಿ ನರ್ಸಿಂಗ್‌. ಆದರೆ ನೆಲೆ ಹುಡುಕುತ್ತಿರುವುದು ಸಿನಿಮಾ ಕ್ಷೇತ್ರದಲ್ಲಿ. ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಕೇಳಿದರೆ ಮುಗುಳ್ನಗುತ್ತಾರೆ ನಿರ್ದೇಶಕ ಅರ್ಜುನ್‌ ಕುಮಾರ್‌ ಎಸ್.

ಅಪರೂಪದ ‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌’ ಕಾಯಿಲೆಯಿಂದ ಬಳಲುತ್ತಿರುವ ಯುವಕನ ಕತೆಯನ್ನು ಹೊಂದಿರುವ ‘ಸಂಕಷ್ಟಕರ ಗಣಪತಿ’ ಎಂಬ ಸಿನಿಮಾ ನಿರ್ದೇಶನದ ಮೂಲಕ ಚಂದನವನಕ್ಕೆ ಕಾಲಿಡುತ್ತಿರುವವರು ಅರ್ಜುನ್‌. ಶಿವಮೊಗ್ಗದವರಾದ ಅವರು ಮೈಸೂರಿನಲ್ಲಿ ಬಿ.ಎಸ್‌ಸಿ ನರ್ಸಿಂಗ್‌ ಕೋರ್ಸ್‌ ಮುಗಿಸಿ, ಒಂದು ವರ್ಷ ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. ಆದರೆ ಬಾಲ್ಯದಿಂದಲೇ ಕಂಡಿದ್ದು ಸಿನಿಮಾ ಕನಸು. ಅನಿವಾರ್ಯವಾಗಿ ಓದಿದ್ದು ನರ್ಸಿಂಗ್‌. ಉಪನ್ಯಾಸಕನಾಗಿ ಮುಂದುವರಿಯಲು ಇಷ್ಟವಾಗದೇ ರಾಜೀನಾಮೆ ನೀಡಿ ಬೆಂಗಳೂರಿಗೆ ಹೊರಟು ನಿಂತರು.

ನಿರ್ಧಾರ ಮಾಡಿಯಾಗಿತ್ತು. ಆದರೆ ಸಿನಿಮಾ ಕ್ಷೇತ್ರದ ಒಳಗಿನ ಬಗ್ಗೆ ಅರಿವಿಲ್ಲದೇ, ಗಾಡ್‌ಫಾದರ್‌ಗಳಿಲ್ಲದೇ ಈ ಕ್ಷೇತ್ರಕ್ಕೆ ಪ್ರವೇಶಿಸುವುದು ಅಸಾಧ್ಯ. ಅರ್ಜುನ್‌ಗೂ ಇದೇ ಸ್ಥಿತಿ ಎದುರಾಗಿತ್ತು. ಹಾಗಾಗಿ ಸಿನಿಮಾ ಕೊಂಡಿಯಾಗಿ ಟಿವಿ ವಾಹಿನಿಗಳಲ್ಲಿ ಕೆಲಸ ಹುಡುಕಿದರು. ಝೀ ಕನ್ನಡದಲ್ಲಿ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡರು. ‘ಕನಸಿನ ಕಣ್ಮಣಿ’ ರಿಯಾಲಿಟಿ ಷೋದ ಸಹಾಯಕ ನಿರ್ದೇಶಕನಾಗಿ  ಕೆಲಸ ಆರಂಭಿಸಿದರು. ಅದರ ಯಶಸ್ಸಿನ ನಂತರ ‘ಯಾರಿಗುಂಟು ಯಾರಿಗಿಲ್ಲ’, ‘ಡಾನ್ಸ್‌ ಕರ್ನಾಟಕ ಡಾನ್ಸ್‌’, ‘ಕುಣಿಯೋಣು ಬಾರಾ’... ಹೀಗೆ ಅನೇಕ ರಿಯಾಲಿಟಿ ಷೋಗಳನ್ನು ನಿರ್ದೇಶಿಸುತ್ತಾ ಬಂದರು. ಕಾರ್ಯಕಾರಿ ನಿರ್ದೇಶಕನಾಗಿ ಬಡ್ತಿಯೂ ಸಿಕ್ಕಿತು. ಉತ್ತಮ ಸ್ಥಾನ ಸಿಕ್ಕಿದರೂ ಅರ್ಜುನ್‌ ಅವರ ಮನಸ್ಸು ಸಿನಿಮಾ ಕ್ಷೇತ್ರದತ್ತಲೇ ಇತ್ತು. ಅಲ್ಲಿ ಕ್ಯಾಮೆರಾ, ಸಿನಿಮಾಟೋಗ್ರಾಫ್‌, ಎಡಿಟಿಂಗ್‌, ನಿರ್ದೇಶನದ ಬಗ್ಗೆ ಅನುಭವಗಳ ಮೂಟೆ ಕಟ್ಟಿಕೊಂಡು ಸಿನಿಮಾ ಕ್ಷೇತ್ರದತ್ತ ಹೊರಳಿದರು.

‘ವಾಹಿನಿ ಬಿಟ್ಟು ನಿರ್ದೇಶಕ ಝೇಂಕಾರ್‌ ಭರತ್‌ ಜೊತೆ ಕೆಲಸ ಮಾಡಿದೆ. ಏಳು ವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಹಂಬಲವಿಟ್ಟುಕೊಂಡಿದ್ದ ನಾಲ್ಕು ಜನರ ಸಮಾನ ಮನಸ್ಕರಾದ ಸಂಗೀತ ನಿರ್ದೇಶಕ ಋತ್ವಿಕ್‌ ಮುರಳೀಧರ್‌, ನಟ ಲಿಖಿತ್‌, ವಿಜಿತ್ ಚಂದ್ರ ಪರಿಚಯವಾಯಿತು. ಈ ನಾಲ್ಕು ಜನ ಸಿನಿಮಾ ಮಾಡಬೇಕೆಂದು ಹೊರಟೆವು. ಆದರೆ ಬಂಡವಾಳದ ಕೊರತೆ. ಹೀಗಾಗಿ ಇರುವ ದುಡ್ಡಿನಲ್ಲೇ ಕಿರುಚಿತ್ರ ನಿರ್ಮಾಣ ಮಾಡಿ, ಅದರ ಮೂಲಕ ಹೊಸ ಸಿನಿಮಾಕ್ಕೆ ನಿರ್ಮಾಪಕರನ್ನು ಹುಡುಕಲು ನಿರ್ಧರಿಸಿದೆವು. ಹಾಗೇ ತಯಾರಿಸಿದ ಚಿತ್ರವೇ  ‘ಪನ್ಮಾಂಡ್ರಿ ಕ್ರಾಸ್‌’ ಎಂದು ಮೊದಲ ಕಿರುಚಿತ್ರದ ಬಗ್ಗೆ ತಯಾರಾದ ಬಗ್ಗೆ ಹೇಳುತ್ತಾರೆ ಅರ್ಜುನ್‌.

ಹಾರರ್‌ ಕಥಾನಕವುಳ್ಳ ಈ ಕಿರುಚಿತ್ರ 2016ರಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಮೊದಲ ಬಾರಿ ಶಿವಮೊಗ್ಗದಲ್ಲಿ ನಡೆದ ಕಿರುಚಿತ್ರ ಉತ್ಸವದಲ್ಲಿ ಪ್ರದರ್ಶನವಾಯಿತು. ಮೂರು ಪ್ರಶಸ್ತಿಗಳು ಬಂದವು. ಇದೇ ಚಿತ್ರಕ್ಕೆ 2017ರಲ್ಲಿ ಅರ್ಜುನ್‌ ಅವರಿಗೆ ಬೆಸ್ಟ್‌ ಶಾರ್ಟ್‌ ಮೂವಿ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ಈಗ ಅರ್ಜುನ್‌ ಅವರು ‘ಸಂಕಷ್ಟಕರ ಗಣಪತಿ’ ಸಿನಿಮಾ ಮೂಲಕ ಪೂರ್ಣಪ್ರಮಾಣದಲ್ಲಿ ನಿರ್ದೇಶಕನಾಗುತ್ತಿದ್ದಾರೆ. ‘ಈ ಸಿನಿಮಾದಲ್ಲೂ ಹಳೆ ಸ್ನೇಹಿತರ ತಂಡವೇ ಇದೆ. ‘ಪನ್ಮಾಂಡ್ರಿ ಕ್ರಾಸ್‌’ ನೋಡಿ ಈ ತಂಡದ ಮೇಲೆ ವಿಶ್ವಾಸವಿಟ್ಟು ಈ ಹೊಸ ಸಿನಿಮಾಕ್ಕೆ ಹಣ ಹೂಡುತ್ತಿರುವವರು ಐದು ಜನ. ಋತ್ವಿಕ್‌ ಚಂದ್ರ ಸಂಗೀತ ನಿರ್ದೇಶಕನಾಗಿದ್ದಾರೆ’ ಎನ್ನುತ್ತಾರೆ ಅರ್ಜುನ್.

‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌’ ಕತೆಯುಳ್ಳ ಚಿತ್ರ ಮಾಡಬೇಕು ಎಂದು ಯಾಕೆ ಅನಿಸಿತು ಎಂದು ಕೇಳಿದರೆ, ’ಚಿತ್ರದ ನಾಯಕ ನಟ ಲಿಖಿತ್‌ ಇಂತಹ ಅಪರೂಪದ ಕಾಯಿಲೆ ಬಗ್ಗೆ ತಿಳಿಸಿದರು. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನನಗೆ ನರ್ಸಿಂಗ್‌ ಕೋರ್ಸ್‌ ಮಾಡಿರುವುದು ಸಹಾಯಕ್ಕೆ ಬಂತು. ವಿಶ್ವದಲ್ಲಿ ಇಲ್ಲಿ ತನಕ ಈ ಕಾಯಿಲೆ ಬಗ್ಗೆ  100 ಪ್ರಕರಣಗಳು ಅಷ್ಟೇ ದಾಖಲಾಗಿವೆ. ಎರಡನೇ ವಿಶ್ವಯುದ್ಧದ ಬಗ್ಗೆ 1965ರಲ್ಲಿ ಡಾ. ಸೇಜಿಲ್‌ರಾ ಎಂಬವರು ನಿರ್ಮಾಣ ಮಾಡಿದ ಸಿನಿಮಾದಲ್ಲಿ ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಕೆಲ ದೃಶ್ಯಗಳಿವೆ. ಹಾಗೇ ತೆಲುಗು, ತಮಿಳಿನಲ್ಲಿ ಈ ರೋಗದ ಕುರಿತಾದ ಕಿರುಚಿತ್ರಗಳಿವೆ. ಇದನ್ನೆಲ್ಲಾ ನೋಡಿದೆವು. ಆದರೆ ನಮ್ಮದು ಸ್ವತಂತ್ರ ಕತೆ, ಸ್ವಮೇಕ್‌ ಚಿತ್ರ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಅರ್ಜುನ್‌.

‘ಸಿನಿಮಾ ನಿರ್ದೇಶನ ಎಂದರೆ ಜವಾಬ್ದಾರಿ ಜಾಸ್ತಿ. ಬಜೆಟ್‌ ಲಿಮಿಟೇಶನ್‌ ಇರುತ್ತದೆ. ನಿರ್ದೇಶಕನಾದವನು ಕ್ಯಾಮೆರಾ, ಕತೆ, ಸ್ಕ್ರಿಪ್ಟ್‌, ಎಡಿಟಿಂಗ್‌, ಪ್ರಚಾರ ಈ ಎಲ್ಲದರ ಬಗ್ಗೆ ಆಲೋಚಿಸಬೇಕು. ಸಿನಿಮಾ ಬಿಡುಗಡೆಯಾಗುವವರೆಗೆ ಯೋಚನೆ ಇದ್ದಿದ್ದೇ’ ಮೊದಲ ನಿರ್ದೇಶನದ ಅನುಭವ ಹಂಚಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT