ಬುಧವಾರ, ಜೂನ್ 29, 2022
24 °C

ವಿಶ್ವಕಪ್‌ ಹಾಕಿ: ಭಾರತ ತಂಡಕ್ಕೆ ಸವಿತಾ ಪೂನಿಯಾ ನೇತೃತ್ವ, ರಾಂಪಾಲ್‌ಗಿಲ್ಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರು ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್‌ ಮಹಿಳಾ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ನೆದರ್ಲೆಂಡ್ಸ್‌ ಮತ್ತು ಸ್ಪೇನ್‌ ಜಂಟಿ ಆತಿಥ್ಯದಲ್ಲಿ ಜುಲೈ 1 ರಿಂದ 17ರ ವರೆಗೆ ನಡೆಯುವ ಟೂರ್ನಿಗೆ 18 ಸದಸ್ಯರ ಭಾರತ ತಂಡವನ್ನು ಹಾಕಿ ಇಂಡಿಯಾ (ಎಚ್‌ಐ) ಮಂಗಳವಾರ ಪ್ರಕಟಿಸಿತು. ಸ್ಟ್ರೈಕರ್‌ ಹಾಗೂ ಮಾಜಿ ನಾಯಕಿ ರಾಣಿ ರಾಂಪಾಲ್‌ ಅವರನ್ನು ಕೈಬಿಡಲಾಗಿದೆ.

ರಾಣಿ ಅವರ ನೇತೃತ್ವದಲ್ಲಿ ಭಾರತ ತಂಡ 2020ರ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು. ಒಲಿಂಪಿಕ್ಸ್‌ ಬಳಿಕ ಗಾಯದ ಕಾರಣ ಕೆಲವು ಸಮಯ ತಂಡದಿಂದ ದೂರವುಳಿದಿದ್ದ ಅವರನ್ನು ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ವಿರುದ್ಧದ ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ತಂಡದಲ್ಲಿದ್ದರೂ ಪ್ರೊ ಲೀಗ್‌ನ ಮೊದಲ ನಾಲ್ಕು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದರಿಂದ ಅವರ ಫಿಟ್‌ನೆಸ್‌ ಬಗ್ಗೆ ಅನುಮಾನಗಳು ಮೂಡಿದ್ದವು. ಇನ್ನೂ ಪೂರ್ಣ ಫಿಟ್‌ನೆಸ್‌ ಪಡೆಯದಿರುವುದರಿಂದ ಅವರಿಗೆ ವಿಶ್ವಕಪ್‌ ತಂಡದಲ್ಲಿ ಅವಕಾಶ ತಪ್ಪಿದೆ.

ರಾಣಿ ಅವರನ್ನು ಕೈಬಿಟ್ಟಿರುವುದು ಹೊರತುಪಡಿಸಿದರೆ, ತಂಡದಲ್ಲಿ ಬೇರೆ ಯಾವುದೇ ಅಚ್ಚರಿಯ ಬದಲಾವಣೆ ಮಾಡಿಲ್ಲ. ಈಗಾಗಲೇ ಸಾಕಷ್ಟು ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರ್ತಿಯರಿಗೆ ಮಣೆ ಹಾಕಲಾಗಿದೆ.

ರಾಣಿ ಅಲ್ಲದೆ ಎಫ್‌ಐಎಚ್‌ ಪ್ರೊ ಲೀಗ್‌ ತಂಡದಲ್ಲಿರುವ ಇಶಿಕಾ ಚೌಧರಿ, ಅಕ್ಷತಾ ದೇಖಲೆ, ಬಲ್ಜೀತ್‌ ಕೌರ್ ಮತ್ತ ಸಂಗೀತಾ ಕುಮಾರಿ ಅವರನ್ನು ಕೈಬಿಡಲಾಗಿದೆ. ದೀಪ್‌ ಗ್ರೇಸ್‌ ಎಕ್ಕಾ ಅವರು ಉಪನಾಯಕಿ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಭಾರತ ತಂಡವು ಇಂಗ್ಲೆಂಡ್‌, ನ್ಯೂಜಿಲೆಂಡ್ ಮತ್ತು ಚೀನಾ ಜೊತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಜುಲೈ 3 ರಂದು ಇಂಗ್ಲೆಂಡ್‌ ವಿರುದ್ಧದ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದೆ.

ಲಂಡನ್‌ನಲ್ಲಿ ನಡೆದಿದ್ದ ಕಳೆದ ವಿಶ್ವಕಪ್‌ನಲ್ಲಿ ಭಾರತ, ಕ್ವಾರ್ಟರ್‌ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಐರ್ಲೆಂಡ್‌ ಎದುರು ಪರಾಭವಗೊಂಡಿತ್ತು.

ಭಾರತ ತಂಡ ಹೀಗಿದೆ:

ಗೋಲ್‌ಕೀಪರ್ಸ್: ಸವಿತಾ ಪೂನಿಯಾ, ಬಿಚು ದೇವಿ

ಡಿಫೆಂಡರ್ಸ್: ದೀಪ್‌ ಗ್ರೇಸ್ ಎಕ್ಕಾ, ಗುರ್ಜಿತ್‌ ಕೌರ್, ನಿಕ್ಕಿ ಪ್ರಧಾನ್, ಉದಿತಾ

ಮಿಡ್‌ಫೀಲ್ಡರ್ಸ್: ನಿಶಾ, ಸುಶೀಲಾ ಚಾನು, ಮೋನಿಕಾ, ನೇಹಾ, ಜ್ಯೋತಿ, ನವ್‌ಜೋತ್‌ ಕೌರ್, ಸೋನಿಕಾ, ಸಲೀಮಾ ತೇತೆ

ಫಾರ್ವರ್ಡ್ಸ್‌: ವಂದನಾ ಕಟಾರಿಯಾ, ಲಾಲ್‌ರೆಮ್ಸಿಯಾಮಿ, ನವನೀತ್‌ ಕೌರ್, ಶರ್ಮಿಳಾ ದೇವಿ

ಕಾಯ್ದಿರಿಸಿದ ಆಟಗಾರ್ತಿಯರು: ಅಕ್ಷತಾ ದೇಖಲಾ, ಸಂಗೀತಾ ಕುಮಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು