ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಅಂತರ ವಿ.ವಿ ಕೊಕ್ಕೊ: ಮೈಸೂರು ವಿ.ವಿ ಚಾಂಪಿಯನ್‌

ಲವ್ಲಿ ಪ್ರೊಫೆಷನಲ್‌ ವಿ.ವಿ ರನ್ನರ್ ಅಪ್
Last Updated 7 ಜುಲೈ 2022, 17:45 IST
ಅಕ್ಷರ ಗಾತ್ರ

ಮೈಸೂರು: ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡವು ಗುರುವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕೊಕ್ಕೊ ಟೂರ್ನಿಯ ಫೈನಲ್‌ನಲ್ಲಿ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ ತಂಡವನ್ನು 10- 7ರಿಂದ ಮಣಿಸಿ ಮೊದಲ ಬಾರಿ ಪ್ರಶಸ್ತಿ ಜಯಿಸಿತು.

ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಮೈಸೂರು ತಂಡದ ಎಲ್‌.ಮೋನಿಕಾ, ಲವ್ಲಿ ಪ್ರೊಫೆಷನಲ್ ತಂಡದ ಏಳು ಮಂದಿಯನ್ನು ಔಟ್‌ ಮಾಡಿದರೆ, ಕೆ.ಆರ್‌.ತೇಜಸ್ವಿನಿ, ಎಲ್‌.ಚೈತ್ರಾ ಜೋಡಿಯ ಡಿಫೆನ್ಸ್‌ ತಂತ್ರಗಳಿಗೆ ಪಂಜಾಬ್‌ ಆಟಗಾರ್ತಿಯರು ಶರಣಾದರು.

ಮೊದಲ ಸುತ್ತಿನ ಚೇಸಿಂಗ್‌ನಲ್ಲಿ ಮೈಸೂರು ಆಕ್ರಮಣಕಾರಿಯಾಗಿ ಆಟವಾಡಿತು. ಎಲ್‌.ಮೋನಿಕಾ ಪಂಜಾಬ್‌ ತಂಡದ ಮೂವರನ್ನು ಔಟ್‌ ಮಾಡಿದರೆ, ಎಸ್‌.ವಿನುತಾ, ಬಿ.ಚೈತ್ರಾ, ಅರ್ಪಿತಾ ತಲಾ ಒಂದು ಅಂಕದ ಕಾಣಿಕೆ ನೀಡಿದರು. ಲವ್ಲಿ ವಿಶ್ವವಿದ್ಯಾಲಯದ ನೀತಾ ದೇವಿ 4.20 ನಿಮಿಷ ಅಂಗಳದಲ್ಲಿದ್ದರು. ಉಳಿದವರನ್ನು ಎರಡು ನಿಮಿಷಗಳೊಳಗೆ ಮೈಸೂರು ಔಟ್‌ ಮಾಡಿತು. ಅದರಿಂದ ಮೈಸೂರು 6–0ಯ ಮುನ್ನಡೆ ಪಡೆಯಿತು.

ಡಿಫೆನ್ಸ್‌ನಲ್ಲಿ ತೇಜಸ್ವಿನಿ, ಮೋನಿಕಾ ಹಾಗೂ ಚೈತ್ರಾ ಕ್ರಮವಾಗಿ 8 ನಿಮಿಷ, 2.5 ನಿಮಿಷ, 3.5 ನಿಮಿಷ ಕಾಡಿದರು. ತೇಜಸ್ವಿನಿ ಅವರನ್ನು ಔಟ್‌ ಮಾಡಲು ಲವ್ಲಿ ತಂಡದ ಆಟಗಾರ್ತಿಯರು ಸುಸ್ತಾದರು. ಮೂವರ ತಂತ್ರದಿಂದ ಎದುರಾಳಿಗಳಿಗೆಹೆಚ್ಚು ಅಂಕ ಸಿಗಲಿಲ್ಲ. ಲವ್ಲಿ ತಂಡವು ಒಬ್ಬರನ್ನು ಔಟ್‌ ಮಾಡುವತ್ತ ಗುರಿಯನ್ನು ಇರಿಸದಿದ್ದರಿಂದ ಬೆಲೆ ತೆರಬೇಕಾಯಿತು. 3–6ರ ಹಿನ್ನಡೆ ಅನುಭವಿಸಬೇಕಾಯಿತು.

ಎರಡನೇ ಸುತ್ತಿನ ಚೇಸಿಂಗ್‌ನಲ್ಲೂ ಮೈಸೂರಿನ ಮೋನಿಕ ನಾಲ್ವರನ್ನು ಔಟ್‌ ಮಾಡುವ ಮೂಲಕ ಮೈಸೂರಿನ ಗೆಲುವನ್ನು ಸುಲಭಗೊಳಿಸಿದರು. ನಂತರ ನಡೆದ ಡಿಫೆನ್ಸ್‌ನಲ್ಲಿ ಚೈತ್ರಾ 4.30 ನಿಮಿಷ ಕಣದಲ್ಲಿದ್ದರು. ತೇಜಸ್ವಿನಿ, ವಿನುತಾ, ಮೋನಿಕಾ ಕ್ರಮವಾಗಿ 2.30 ನಿ., 1.40ನಿ, 2 ನಿಮಿಷ ಆಟವಾಡಿಸಿದರೆ, ಕೊನೆಯ 30 ಸೆಕೆಂಡ್‌ಗಳಲ್ಲಿ ಪಿ.ಅರ್ಪಿತಾ ಉತ್ತಮ ಡಿಫೆನ್ಸ್‌ ಮಾಡಿ ಗೆಲುವು ಮೈಸೂರಿನ ಪಾಲಾಗಿಸಿದರು.

ಮೈಸೂರಿನ ತೇಜಸ್ವಿನಿ ಉತ್ತಮ ಡಿಫೆಂಡರ್‌, ಮೋನಿಕಾ ಉತ್ತಮ ಚೇಸರ್‌, ಲವ್ಲಿ ಪ್ರೊಫೆಷನಲ್‌ ಯೂನಿವರ್ಸಿಟಿಯ ನೀತಾ ದೇವಿ ಡಾಡ್ಜರ್‌ ಪ್ರಶಸ್ತಿಗೆ ಪಾತ್ರರಾದರು.

ಅದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಮೈಸೂರು, ಔರಂಗಾಬಾದ್‌ನ ಅಂಬೇಡ್ಕರ್
ವಿಶ್ವವಿದ್ಯಾಲಯವನ್ನು 8–7ರಲ್ಲಿ ಸೋಲಿಸಿ ಅಂತಿಮ ಘಟ್ಟಕ್ಕೆ ಪ್ರವೇಶಿಸಿದ್ದರೆ, ಲವ್ಲಿ ವಿಶ್ವವಿದ್ಯಾಲಯವು ರೋಹ್ಟಕ್‌ನ ಎ.ಡಿ.ವಿಶ್ವವಿದ್ಯಾಲಯನ್ನು 9–6ರಿಂದ ಮಣಿಸಿ ಫೈನಲ್‌ ಪ್ರವೇಶಿಸಿತ್ತು. ಮೈಸೂರು ಇದುವರೆಗೂ ಮೂರು ಬಾರಿ ಮೂರನೇ ಸ್ಥಾನ ಪಡೆದಿದ್ದೇ ಸಾಧನೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT