ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಸ್ಯಾನಿಟೈಸರ್, ನೀರಿನ ಬಾಟಲಿಗಳ ಬಳಕೆ

‘ನವ ವಾಸ್ತವ’ ನಿಯಮಗಳಿಗೆ ಹೊಂದಿಕೊಳ್ಳುವತ್ತ ಭಾರತ ಹಾಕಿ ತಂಡಗಳ ಪ್ರಯತ್ನ
Last Updated 10 ಜೂನ್ 2020, 15:23 IST
ಅಕ್ಷರ ಗಾತ್ರ

ಬೆಂಗಳೂರು:ಇಲ್ಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಎರಡು ತಿಂಗಳು ‘ಗೃಹಬಂಧನ’ದಲ್ಲಿದ್ದ ಹಾಕಿ ತಂಡಗಳ ಆಟಗಾರರು ಈಗ ಅಭ್ಯಾಸಕ್ಕಾಗಿ ಕಣಕ್ಕಿಳಿದಿದ್ದಾರೆ. ಮುಂಬರುವ ಟೂರ್ನಿಗಳಲ್ಲಿ ಆಡಲಿರುವ ಸಂಭವನೀಯ ತಂಡದ ಹಾಕಿ ಪಟುಗಳಿಗೆ ಹತ್ತು ದಿನಗಳ ತರಬೇತಿ ಶಿಬಿರ ಆರಂಭಿಸಲಾಗಿದೆ. ಹೊಸ ನಿಯಮದಂತೆ ಎಲ್ಲರೂ ಪ್ರತ್ಯೇಕವಾದ ಸ್ಯಾನಿಟೈಸರ್, ನೀರಿನ ಬಾಟಲಿಗಳನ್ನು ನಿರ್ವಹಿಸಬೇಕು.

‘ಲಾಕ್‌ಡೌನ್ ಸಂದರ್ಭದಲ್ಲಿ ಕೋಣೆಗಳಲ್ಲಿದ್ದಾಗ ನಾವು ಸರಳವಾದ ವ್ಯಾಯಾಮಗಳನ್ನು ಮಾಡುತ್ತಿದ್ದೆವು. ದೈಹಿಕ ಕ್ಷಮತೆಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಅದರಿಂದಾಗಿ ನಾವು ಮೈದಾನಕ್ಕೆ ಮರಳಿದಾಗ ದೇಹವು ಕೊರಡಿನಂತಾಗಿರಲಿಲ್ಲ. ಆದರೂ ನಾವು ಯಾವುದೇ ಅವಸರ ಮತ್ತು ಆತಂಕವಿಲ್ಲದೇ ಸರಳವಾದ ಮತ್ತು ನಿಧಾನವಾಗಿ ವ್ಯಾಯಾಮಗಳನ್ನು ಆರಂಭಿಸಿದ್ದೇವೆ. ದೇಹದ ಮೇಲೆ ಹೆಚ್ಚು ಒತ್ತಡ ಹಾಕುತ್ತಿಲ್ಲ. ಇದರಿಂದ ಗಾಯಗೊಳ್ಳುವ ಅಪಾಯವನ್ನು ತಪ್ಪಿಸಲಾಗುತ್ತಿದೆ’ ಎಂದು ಭಾರತ ತಂಡದ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.

‘ನಮ್ಮ ತರಬೇತಿಯನ್ನು ಸಣ್ಣ ಸಣ್ಣ ಗುಂಪುಗಳಲ್ಲಿ ಮಾಡಲಾಗುತ್ತಿದೆ. ಅದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಮೊದಲು ನಾವು ಸ್ಯಾನಿಟೈಸರ್‌ಗಳನ್ನು ಹೆಚ್ಚು ಬಳಸುತ್ತಿರಲಿಲ್ಲ. ಎಲ್ಲರೂ ನೀರು ಕುಡಿಯಲು ಒಂದೇ ತಂಬಿಗೆ ಬಳಸುತ್ತಿದ್ದೆವು. ಆದರೆ ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಸ್ಯಾನಿಟೈಸರ್‌ನಿಂದ ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುತ್ತಿದ್ದೇವೆ. ಮುಖ್ಯವಾಗಿ ಮೈದಾನ ಪ್ರವೇಶಿಸುವ ಮುನ್ನ ಹಾಗೂ ವಿರಾಮದ ಸಂದರ್ಭಗಳಲ್ಲಿ ಬಳಕೆ ಮಾಡಲಾಗುತ್ತಿದೆ. ನೀರು ಕುಡಿಯಲು ಪ್ರತ್ಯೇಕವಾದ ಬಾಟಲಿಗಳನ್ನು ತರುತ್ತಿದ್ದೇವೆ. ಯಾರೊಂದಿಗೂ ಅದನ್ನು ಹಂಚಿಕೊಳ್ಳುತ್ತಿಲ್ಲ’ ಎಂದು ಮನ್‌ಪ್ರೀತ್‌ ವಿವರಿಸಿದರು.

‘ನಮ್ಮ ಹಾಕಿ ಸ್ಟಿಕ್‌ಗಳ ಹಿಡಿಕೆಗಳ ಗ್ರಿಪ್‌ ಅನ್ನೂ ಆಗಾಗ ಬದಲಿಸುತ್ತಿದ್ದೇವೆ. ನಮ್ಮ ಮೈ ಉಷ್ಣವನ್ನು ಕೂಡ ದಿನವೂ ತಪಾಸಣೆ ಮಾಡಿ ದಾಖಲಿಸಲಾಗುತ್ತಿದೆ. ನಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ. ಯಾವುದೂ ಅಸ್ತವ್ಯಸ್ತವಾಗದಂತೆ ಎಚ್ಚರ ವಹಿಸಲಾಗುತ್ತಿದೆ’ ಎಂದರು.

‘ಮುಂದಿನ ಕೆಲವು ತಿಂಗಳುಗಳಲ್ಲಿ ನಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ಕೌಶಲಗಳನ್ನು ಸುಧಾರಿಸಿಕೊಳ್ಳುವತ್ತ ಗುರಿ ಇಟ್ಟಿದ್ದೇವೆ. ಸಣ್ಣ ಸಣ್ಣ ಅಂಶಗಳನ್ನೂ ಗಮನಿಸುತ್ತಿದ್ದೇವೆ. ಶ್ರೇಷ್ಠತೆಯತ್ತ ಸಾಗಲು ಪ್ರತಯ್ನಿಸುತ್ತಿದ್ದೇವೆ’ ಎಂದು ಹೇಳಿದರು.

ಈ ಕುರಿತು ಮಾತನಾಡಿರುವ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್, ‘ಪ್ರಾಥಮಿಕ ಹಂತದ ತರಬೇತಿ ಆರಂಭಿಸಿದ್ದೇವೆ. ಇದಕ್ಕೂ ಮುನ್ನ ತರಬೇತುದಾರರು ನಮ್ಮೊಂದಿಗೆ ಕೂಲಂಕಷವಾಗಿ ಮಾತನಾಡಿದ್ದಾರೆ. ಮಾನಸಿಕ, ದೈಹಿಕವಾಗಿ ಯಾವುದೇ ಸಮಸ್ಯೆಗಳಿದ್ದರೂ ಕೂಡಲೇ ತಿಳಿಸಬೇಕೆಂದು ಹೇಳಿದ್ದಾರೆ. ತರಬೇತಿ ಮತ್ತು ಸಿಬ್ಬಂದಿಯೊಂದಿಗೆ ಏನೇ ವಿಷಯ ಇದ್ದರೂ ಮುಕ್ತವಾಗಿ ಚರ್ಚಿಸಬೇಕೆಂದು ಸೂಚಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT