ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಅಥ್ಲೆಟಿಕ್ಸ್‌ಗೆ ಸಂದ ಗೌರವ’

‘ವೆಟರನ್ ಪಿನ್’ ಪ್ರಶಸ್ತಿ ಸಂಭ್ರಮದಲ್ಲಿ ವೇಗದ ರಾಣಿ, ಪಯ್ಯೋಳಿ ಎಕ್ಸ್‌ಪ್ರೆಸ್‌ ಪಿ.ಟಿ ಉಷಾ
Last Updated 18 ಜುಲೈ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಇದು, ಅರ್ಜಿ ಸಲ್ಲಿಸಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಕಾಲ. ಇಂಥ ಸಂದರ್ಭದಲ್ಲಿ ಸಾಧನೆಯನ್ನು ಗುರುತಿಸಿ ಗೌರವ ಹುಡುಕಿಕೊಂಡು ಬಂದಾಗ ಆಗುವ ಖುಷಿಯೇ ಬೇರೆ. ಅಥ್ಲೆಟಿಕ್ಸ್‌ಗಾಗಿ, ಅಥ್ಲೆಟಿಕ್ಸ್‌ ಜೊತೆಯಲ್ಲೇ ಬದುಕುತ್ತಿರುವ ನನ್ನ ಸಂಭ್ರಮ ಈಗ ಹೆಚ್ಚಾಗಿದೆ..’

ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ (ಐಎಎಎಫ್‌) ನೀಡುವ ‘ವೆಟರನ್ ಪಿನ್’ ಪ್ರಶಸ್ತಿಗೆ ಭಾಜನರಾಗಿರುವ ’ಟ್ರ್ಯಾಕ್‌ ಮತ್ತು ಫೀಲ್ಡ್‌ನ ರಾಣಿ’, ‘ಪಯ್ಯೋಳಿ ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾಗಿರುವ ಪಿ.ಟಿ.ಉಷಾ ಆಡಿದ ಮಾತು ಇದು.

‘ಪ್ರಜಾವಾಣಿ’ ಜೊತೆ ದೂರವಾಣಿ ಮೂಲಕ ಮಾತನಾಡಿದ ಉಷಾ ‘ಅಥ್ಲೆಟಿಕ್ಸ್‌ನಲ್ಲಿ ಮಹತ್ವದ ಸಾಧನೆ ಮಾಡಿದವರಿಗೆ ಐಎಎಎಫ್‌ ಈ ಪ್ರಶಸ್ತಿ ನೀಡುತ್ತದೆ. ಈ ಬಾರಿ ಇದು ನನ್ನನ್ನು ಹುಡುಕಿಕೊಂಡು ಬಂದಿರುವುದು ಗೌರವದ ವಿಷಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ನನ್ನ ಸೇವೆಯನ್ನು ಐಎಎಎಫ್‌ಗುರುತಿಸಿದೆ’ ಎಂದರು.

ನಿಮ್ಮ ಯಾವ ಸಾಧನೆಗೆ ಗೌರವ ಸಲ್ಲಿಸಲು ಐಎಎಎಫ್ ನಿರ್ಧರಿಸಿರಬಹುದು ಎಂದು ಕೇಳಿದಾಗ ‘ನನ್ನ ಜೀವನ ಪೂರ್ತಿ ಕ್ರೀಡೆಗೆ, ವಿಶೇಷವಾಗಿ ಅಥ್ಲೆಟಿಕ್ಸ್‌ಗೆ ಮೀಸಲು. ಇದು ಐಎಎಎಫ್ ಗಮನಕ್ಕೆ ಬಂದಿದೆ ಎಂದೆನಿಸುತ್ತದೆ. ಸ್ಪರ್ಧಾ ಕಣದಿಂದ ನಿವೃತ್ತಿಯಾದ ಮೇಲೂ ತರಬೇತಿ ನೀಡುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ 103 ಪದಕಗಳನ್ನು ಗೆದ್ದಿದ್ದೇನೆ. ಆದ್ದರಿಂದ ಕಾಲ–ವಿಷಯಾತೀತವಾಗಿ ಆಯ್ಕೆ ಮಾಡಿರುವ ಸಾಧ್ಯತೆ ಇದೆ’ ಎಂದರು.

‘ಪ್ರಶಸ್ತಿ ಬಯಸಿ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಆದರೆ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಉಷಾ ಕ್ರೀಡಾ ಶಾಲೆಯಲ್ಲಿ ನಡೆಯುತ್ತಿರುವ ತರಬೇತಿಗೆ ಇನ್ನಷ್ಟು ಶಿಸ್ತು ತುಂಬಲು ಇದು ನೆರವಾಗಲಿದೆ. ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗಾಗಿ ಮತ್ತಷ್ಟು ಪ್ರಯತ್ನ ನಡೆಸಲು ಪ್ರೇರಣೆಯಾಗಲಿದೆ’ ಎಂದರು.

ಮಿಂಚಿನ ಓಟಗಾರ್ತಿ: ಭಾರತದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮಿಂಚಿದ್ದ ಉಷಾ 1985ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 100, 200, 400 ಮೀಟರ್ಸ್ ಓಟ, 400 ಮೀಟರ್ಸ್ ಹರ್ಡಲ್ಸ್ ಮತ್ತು 4x400 ಮೀಟರ್ಸ್ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ಮುಂದಿನ ವರ್ಷ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಚಿನ್ನ ಗಳಿಸಿದ್ದರು. 1984ರ ಒಲಿಂಪಿಕ್ಸ್‌ನ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ 100ನೇ ಒಂದು ಸೆಕೆಂಡು ಅಂತರದಲ್ಲಿ ಕಂಚಿನ ಪದಕ ಕಳೆದುಕೊಂಡಿದ್ದರು.

ವೆಟರನ್ ಪಿನ್ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ನೀಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಖತಾರ್‌ನಲ್ಲಿ ನಡೆಯಲಿರುವ ಐಎಎಎಫ್‌ನ 52ನೇ ಸಮಾವೇಶದಲ್ಲಿ ಈ ಬಾರಿಯ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕೇರಳದ ಪ್ರತಿಭೆಗಳು

ಈ ಪ್ರಶಸ್ತಿಗೆ ಭಾಜನರಾದ ಭಾರತದ ಇಬ್ಬರೂ ಉತ್ತರ ಕೇರ ಳದ ಅಥ್ಲೀಟ್‌ಗಳು. 2011ರಲ್ಲಿ ಸಿ.ಕೆ.ವಲ್ಸನ್ ಅವರಿಗೆ ಈ ಪ್ರಶಸ್ತಿ ಸಂದಿತ್ತು. ಅವರು ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದರು. ಕಣ್ಣೂರು ಜಿಲ್ಲೆಯ ಮಾಹೆ ಇವರ ಊರು. ಸಮೀಪದ ಜಿಲ್ಲೆಯಾದ ಕೋಯಿಕ್ಕೋಡ್‌ನ ಪಯ್ಯೋಳಿ ಪಿ.ಟಿ.ಉಷಾ ಊರು. ಜಿಲ್ಲೆಯ ಗುಡ್ಡ–ಬೆಟ್ಟಗಳಿಂದೊಡಗೂಡಿದ ಕಿನಾಲೂರಿನ ಬಾಲುಶ್ಶೇರಿಯಲ್ಲಿ ಉಷಾ ಅವರು ಅಥ್ಲೆಟಿಕ್ ಸ್ಕೂಲ್ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT