ಗುರುವಾರ , ಅಕ್ಟೋಬರ್ 1, 2020
28 °C

ವರ್ಸ್ಟ್ಯಾಪನ್‌ಗೆ ವಾರ್ಷಿಕ ಗ್ರ್ಯಾನ್‌ ಪ್ರಿ ಪ್ರಶಸ್ತಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಲ್ವರ್ಸ್ಟೋನ್, ಯುಕೆ: ಆರು ಬಾರಿಯ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಒಳಗೊಂಡಂತೆ ಹೆಸರಾಂತ ಚಾಲಕರು ತುಂಬಿದ್ದ ಟ್ರ್ಯಾಕ್‌ನಲ್ಲಿ ನೆದರ್ಲೆಂಡ್ಸ್‌ನ ಮ್ಯಾಕ್ಸ್ ವರ್ಸ್ಟ್ಯಾಪನ್‌ ಭಾನುವಾರ ಮೋಡಿ ಮಾಡಿದರು. ಕೂದಲೆಳೆ ಅಂತರದಲ್ಲಿ ಹ್ಯಾಮಿಲ್ಟನ್ ಮತ್ತು ವಾಲ್ಟೇರಿ ಬೊತಾಸ್ ಅವರನ್ನು ಹಿಂದಿಕ್ಕಿದ ಅವರು ಸಿಲ್ವರ್‌ ಸ್ಟೋನ್ ಎಫ್‌ ಒನ್ 70ನೇ ವಾರ್ಷಿಕ ಗ್ರ್ಯಾನ್‌ ಪ್ರಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಮೂಲಕ ಸಿಲ್ವರ್‌ ಸ್ಟೋನ್‌ನಲ್ಲಿ ಎಂಟು ವರ್ಷಗಳ ಬಳಿಕ ರೆಡ್ ಬುಲ್‌ಗೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟರು. 

ಈ ಋತುವಿನಲ್ಲಿ ಸತತ ವೈಫಲ್ಯ ಅನುಭಿವಿಸಿದ್ದ ವರ್ಸ್ಟ್ಯಾಪನ್‌ ನೇತೃತ್ವದ ರೆಡ್ ಬುಲ್ಸ್‌ ಇಲ್ಲಿ ವಿಶಿಷ್ಟ ತಂತ್ರದೊಂದಿಗೆ ಕಣಕ್ಕೆ ಇಳಿದರು. ಈ ಮೂಲಕ ಈ ಬಾರಿಯ ಮೊದಲ ನಾಲ್ಕು ಸ್ಪರ್ಧೆಗಳಲ್ಲಿ ತಮ್ಮನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದ ಮರ್ಸಿಡಿಸ್ ಚಾಲಕರಿಗೆ ಬುಲ್ಸ್ ಚಾಲಕರು ತಿರುಗೇಟು ನೀಡಿದರು. ಪ್ರಶಸ್ತಿ ಗೆದ್ದ ವರ್ಸ್ಟ್ಯಾಪನ್‌  11.326 ಸೆಕೆಂಡು ಅಂತರದಲ್ಲಿ ಮೊದಲಿಗರಾದರು. ಹ್ಯಾಮಿಲ್ಟನ್ ಎರಡನೇ ಸ್ಥಾನ ಗಳಿಸಿದರು. ತಂಡದ ಸಹ ಚಾಲಕ ವಾಲ್ಟೆರಿ ಬೊತಾಸ್ ಅವರನ್ನು ಹ್ಯಾಮಿಲ್ಟನ್ ಹಿಂದಿಕ್ಕಿದ್ದರು. 

ಮೊದಲಿಗರಾಗಲು ಸಾಧ್ಯವಾಗದಿದ್ದರೂ ಹ್ಯಾಮಿಲ್ಟನ್ ದಾಖಲೆಯೊಂದನ್ನು ಸರಿಗಟ್ಟಿದರು. ಇದು ಅವರ 155ನೇ ‘ಪೋಡಿಯಂ ಫಿನಿಷ್’ ಸಾಧನೆ. ಈ ಮೂಲಕ ಮೈಕೆಲ್ ಶುಮಾಕರ್ ಅವರ ದಾಖಲೆಯನ್ನು ಸರಿಗಟ್ಟಿದರು.

ಫೆರಾರಿ ಚಾಲಕ ಚಾರ್ಲ್ಸ್ ಲೆಕ್ಲೆರ್ಕ್ ನಾಲ್ಕನೇ ಸ್ಥಾನ ಗಳಿಸಿದರು. ರೆಡ್‌ಬುಲ್‌ನ ಅಲೆಕ್ಸ್ ಆಲ್ಬನ್ ಅವರನ್ನು ಚಾರ್ಲ್ಸ್ ಹಿಂದಿಕ್ಕಿದರು. ರೆನಾಲ್ಟ್‌ನ ಎಸ್ತೆಬನ್ ಒಕಾನ್ ಅವರು ಲ್ಯಾಂಡೊ ನೊರಿಸ್ ಮತ್ತು ಡ್ಯಾನಿಲ್ ಕ್ಯಾತ್ ಅವರನ್ನು ಹಿಂದಿಕ್ಕಿ ಎಂಟನೇ ಸ್ಥಾನ ಗಳಿಸಿದರು.

ಸತತ ಏಳು ರೇಸ್‌ಗಳ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನಗಳಲ್ಲಿ ಕಾಣಿಸಿಕೊಳ್ಳಲಾಗದ ಚಾಲಕನೊಬ್ಬ ಪ್ರಶಸ್ತಿ ಗೆಲ್ಲುವುದು ಇದೇ ಮೊದಲು. ವರ್ಸ್ಟ್ಯಾಪನ್‌ ಕಳೆದ ಬಾರಿಯ ಮೆಕ್ಸಿಕನ್ ಗ್ರ್ಯಾನ್‌ಪ್ರಿಯ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನಗಳಲ್ಲಿದ್ದರು.

‘ನಮ್ಮ ತಂಡ ಇಂದು ಎಲ್ಲವನ್ನೂ ಸರಿಯಾಗಿ ನಿರ್ವಹಿಸಿದೆ. ಹೀಗಾಗಿ ಉತ್ತಮ ಫಲಿತಾಂಶ ಲಭಿಸಿದೆ. ಎಲ್ಲರಿಗೂ ಧನ್ಯವಾದಗಳು’ ಎಂದು ವರ್ಸ್ಟ್ಯಾಪನ್‌ ಹೇಳಿದರು. ಅವರ ತಂಡದ ಮಾಲೀಕ ಕ್ರಿಸ್ಟಿಯನ್ ಹಾರ್ನರ್ ಖುಷಿಯಿಂದ ‘ಅದ್ಭುತ...ಪೂರ್ತಿ ಸ್ಯಾನಿಟೈಸ್‌ ಆಗಿದೆ’ ಎಂದು ಹೇಳಿ ರೇಸ್ ಪ್ರಿಯರನ್ನು ನಗಿಸಿದ್ದಾರೆ.

‘ಇಲ್ಲಿ ಭಾರಿ ಸವಾಲು ಎದುರಾಗಿತ್ತು. ಇದನ್ನು ಮೆಟ್ಟಿನಿಂತು ಪ್ರಶಸ್ತಿ ಗೆದ್ದ ರೆಡ್‌ಬುಲ್‌ಗೆ ಅಭಿನಂದನೆ ಸಲ್ಲಲೇಬೇಕು’ ಎಂದು ಹ್ಯಾಮಿಲ್ಟನ್ ಹೇಳಿದರೆ, ’ಪೋಲ್ ಪೊಸಿಷನ್‌ನಿಂದ ಶುರು ಮಾಡಿದರೂ ಮೂರನೇ ಸ್ಥಾನಕ್ಕೆ ಕುಸಿದದ್ದು ಬೇಸರ ಮತ್ತು ನಿರಾಸೆ ತಂದಿದೆ. ಈ ರೇಸ್‌ನಲ್ಲಿ ನಮ್ಮ ತಂತ್ರಗಳು ಫಲಿಸಲಿಲ್ಲ. ಸ್ಪರ್ಧೆಯ ಮಧ್ಯೆ ನಾವು ಮೈಮರೆತುಬಿಟ್ಟೆವು ಎನಿಸುತ್ತದೆ’ ಎಂದು ಬೊತಾಸ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.