ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌: ವಿದರ್ಭಕ್ಕೆ ಮತ್ತೆ ಚಾಂಪಿಯನ್‌ ಪಟ್ಟ

7
ಸರವಟೆ ಜೀವನಶ್ರೇಷ್ಠ ಬೌಲಿಂಗ್‌

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌: ವಿದರ್ಭಕ್ಕೆ ಮತ್ತೆ ಚಾಂಪಿಯನ್‌ ಪಟ್ಟ

Published:
Updated:
Prajavani

ನಾಗಪುರ: ಕಳೆದ ವರ್ಷ ಅಚ್ಚರಿಯ ಫಲಿತಾಂಶಗಳನ್ನು ನೀಡಿ ಪ್ರಶಸ್ತಿ ಗೆದ್ದ ವಿದರ್ಭ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಆಯಿತು. ಇಲ್ಲಿನ ಜಮ್ತಾ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯಗೊಂಡ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಎದುರು ವಿದರ್ಭ 78 ರನ್‌ಗಳಿಂದ ಗೆದ್ದಿತು.

ಈ ಮೂಲಕ ರಣಜಿ ಟೂರ್ನಿಯಲ್ಲಿ ಸತತ ಎರಡು ವರ್ಷ ಪ್ರಶಸ್ತಿ ಗೆದ್ದ ಆರನೇ ತಂಡವಾಯಿತು. ಫೈನಲ್‌ಗೇರಿದ ಮೂರು ಬಾರಿಯೂ ಪ್ರಶಸ್ತಿ ಗೆಲ್ಲಲಾಗದ ನಿರಾಸೆ ಸೌರಾಷ್ಟ್ರವನ್ನು ಕಾಡಿತು. 2012–13 ಮತ್ತು 2015–16ರಲ್ಲಿ ತಂಡ ಮುಂಬೈ ವಿರುದ್ಧ ಸೋತಿತ್ತು.

206 ರನ್‌ಗಳ ಸುಲಭ ಗುರಿ ಬೆನ್ನ ತ್ತಿದ್ದ ಸೌರಾಷ್ಟ್ರ ಅಗ್ರ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಬುಧ ವಾರವೇ ಕಳೆದುಕೊಂಡಿತ್ತು. ಗುರುವಾರ ಈ ತಂಡದ ಗೆಲುವಿಗೆ 148 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ವಿಶ್ವರಾಜ್ ಜಡೇಜ ಮತ್ತು ಕಮಲೇಶ್‌ ಮಕ್ವಾನ ಮೇಲೆ ತಂಡದ ನಿರೀಕ್ಷೆಯ ಭಾರ ಇತ್ತು. ಆದರೆ ವಿದರ್ಭ ಬೌಲರ್‌ಗಳು ವಿಶ್ವಾಸದಿಂದಲೇ ಕಣಕ್ಕೆ ಇಳಿದಿದ್ದರು.

ಕೊನೆಯ ದಿನವೂ ಮಿಂಚಿದ ಅವರು ದಿನದ 31ನೇ ಓವರ್‌ನಲ್ಲಿ ವಿಜಯ ಪತಾಕೆ ಹಾರಿಸಿದರು. ದಿನದ ಮೊದಲ ಅವಧಿಯಲ್ಲೇ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಅಕ್ಷಯ ವಾಖರೆ ಎಸೆತದಲ್ಲಿ ಧರ್ಮೇಂದ್ರ ಸಿಂಹ ಜಡೇಜ ಅವರ ಬ್ಯಾಟಿನ ಅಂಚಿಗೆ ಸವರಿದ ಚೆಂಡು ಆದಿತ್ಯ ಸರವಟೆ ಮುಷ್ಠಿಯೊಳಗೆ ಸೇರುತ್ತಿದ್ದಂತೆ ವಿದರ್ಭ ಆಟಗಾರರು ಕುಣಿದು ಕುಪ್ಪಳಿಸಿದರು.

ವಿಶ್ವರಾಜ್ ಜಡೇಜ ಮತ್ತು ಕಮಲೇಶ್ ಮಕ್ವಾನ ಬೆಳಿಗ್ಗೆ ವಿಶ್ವಾಸದಿಂದ ಬ್ಯಾಟ್ ಬೀಸಿದರು. ಇವರಿಬ್ಬರು ಲಯ ಕಂಡುಕೊಂಡ ನಂತರ ಬೌಂಡರಿಗಳು ಹರಿದು ಬಂದವು. ಮೊದಲ ಒಂದು ತಾಸು ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಇಬ್ಬರು ಭರವಸೆ ಮೂಡಿಸಿದರು. ಮಕ್ವಾನ ಅವರನ್ನು ಬೌಲ್ಡ್‌ ಮಾಡುವ ಮೂಲಕ ಸರವಟೆ ದಿನದ ವಿಕೆಟ್ ಬೇಟೆ ಆರಂಭಿಸಿದರು.

ಕರ್ನಾಟಕ, ಮುಂಬೈ, ಮಹಾರಾಷ್ಟ್ರ, ರಾಜಸ್ತಾನ ಮತ್ತು ದೆಹಲಿ ಈ ಹಿಂದೆ ಸತತ ಎರಡು ವರ್ಷ ಪ್ರಶಸ್ತಿ ಗೆದ್ದಿವೆ.

ಉಮೇಶ್ ಯಾದವ್‌ ಅವರನ್ನು ಮಕ್ವಾನ ಮತ್ತು ಜಡೇಜ ದಿಟ್ಟವಾಗಿ ಎದುರಿಸಿದಾಗ ನಾಯಕ ಫೈಜ್ ಫಜಲ್‌ ಅವರು ಅಕ್ಷಯ್ ವಾಖರೆ ಕೈಗೆ ಚೆಂಡು ನೀಡಿದರು. ಆದರೂ ಬ್ಯಾಟ್ಸ್‌ಮನ್‌ಗಳು ಜಗ್ಗಲಿಲ್ಲ. ಮಕ್ವಾನ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರೆ ಜಡೇಜ ಆಕ್ರಮಣಕ್ಕೆ ಮುಂದಾದರು. ಕೊನೆಗೂ ಮಕ್ವಾನ ಅವರನ್ನು ಬೌಲ್ಡ್ ಮಾಡುವಲ್ಲಿ ಸರವಟೆ ಯಶಸ್ವಿಯಾದರು. ನೇರ ಎಸೆತ ತಿರುವು ಪಡೆಯುವ ನಿರೀಕ್ಷೆಯಲ್ಲಿದ್ದ ಮಕ್ವಾನ  ಬ್ಯಾಟ್ ಎತ್ತಿ ಚೆಂಡನ್ನು ಆಚೆ ಹೋಗಲು ಬಿಟ್ಟರು. ಆದರೆ ಚೆಂಡು ಆಪ್ ಸ್ಟಂಪ್‌ ಎಗರಿಸಿತು.

ನಂತರ ಮೂರು ರನ್ ಸೇರಿಸುವಷ್ಟರಲ್ಲಿ ಪ್ರೇರಕ್ ಮಂಕಡ್‌ ಅವರನ್ನು ವಾಖರೆ ವಾಪಸ್ ಕಳುಹಿಸಿದರು. ನಾಯಕ ಜಯದೇವ ಉನದ್ಕತ್ ಜೊತೆ 11 ರನ್‌ಗಳ ಜೊತೆಯಾಟ ಆಡಿದ ಜಡೇಜ ತಮ್ಮ ಅರ್ಧಶತಕ ಪೂರೈಸಿದರು. ಆದರೆ ಇವರಿಬ್ಬರೂ ಸರವಟೆಗೆ ವಿಕೆಟ್ ಒಪ್ಪಿಸಿದರು.

ವಾಖರೆ ಎಸೆತವನ್ನು ಲಾಫ್ಟ್ ಮಾಡಿ ಬೌಂಡರಿ ಗಳಿಸಲು ಪ್ರಯತ್ನಿಸಿದ ಧರ್ಮೇಂಧ್ರ ಸಿಂಹ ಜಡೇಜ ಎಡವಿ ಸರವಟೆಗೆ ಕ್ಯಾಚ್ ನೀಡುವುದರೊಂದಿಗೆ ಸೌರಾಷ್ಟ್ರ ಇನಿಂಗ್ಸ್‌ಗೆ ತೆರೆ ಬಿತ್ತು.

***

ಕಳೆದ ಬಾರಿ ಪ್ರಶಸ್ತಿ ಗೆದ್ದಾಗ ಹಲವರು ಅದು, ಅದೃಷ್ಟದ ಜಯ ಎಂದೇ ಮಾತನಾಡಿಕೊಂಡಿದ್ದರು. ಆದ್ದರಿಂದ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡವಿತ್ತು.

–ಚಂದ್ರಕಾಂತ್‌ ಪಂಡಿತ್‌, ವಿದರ್ಭ ತಂಡದ ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !