ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು

Last Updated 18 ಮಾರ್ಚ್ 2021, 13:34 IST
ಅಕ್ಷರ ಗಾತ್ರ

ಪಣಜಿ, ಗೋವಾ (ಪಿಟಿಐ): ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್‌, ಒಂದು ವರ್ಷದ ಬಳಿಕ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶುಕ್ರವಾರ ನಡೆಯುವ76 ಕೆಜಿ ಸೂಪರ್ ಮಿಡ್ಲ್‌ ವೇಟ್ ವಿಭಾಗದ ಬೌಟ್‌ನಲ್ಲಿ ರಷ್ಯಾದ ಅರ್ಟಿಶ್ ಲಾಪ್ಸನ್ ಸವಾಲನ್ನು ಅವರು ಎದುರಿಸುವರು.

ಮೆಜೆಸ್ಟಿಕ್ ಪ್ರೈಸ್ ಕ್ಯಾಸಿನೊ ಹಡಗಿನಲ್ಲಿ ನಡೆಯಲಿರುವ ಈ ಬೌಟ್‌ಗೆ ‘ಬ್ಯಾಟಲ್ ಆನ್ ಶಿಪ್‌’ ಎಂದೇ ಹೆಸರು ಇಡಲಾಗಿದ್ದು ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ತಮ್ಮ ಅಮೋಘ ಓಟ ಮುಂದುವರಿಸುವತ್ತ ಚಿತ್ತ ನೆಟ್ಟಿದ್ದಾರೆ. ಒಲಿಂಪಿಕ್‌ ಪದಕ ವಿಜೇತ ಬಾಕ್ಸರ್‌ ವೃತ್ತಿಪರ ಕಣಕ್ಕೆ ಇಳಿದ ನಂತರ ಒಂದು ಬೌಟ್ ಕೂಡ ಸೋತಿಲ್ಲ. ಎಂಟು ನಾಕೌಟ್‌ ಒಳಗೊಂಡಂತೆ ಒಟ್ಟು 12 ಸ್ಪರ್ಧೆಗಳಲ್ಲಿ ಅವರು ಈ ವರೆಗೆ ಪಾಲ್ಗೊಂಡಿದ್ದಾರೆ.

ವಿಜೇಂದರ್ ಮತ್ತು ಲಾಪ್ಸನ್ ನಡುವಿನ ಪೈಪೋಟಿಯನ್ನು ಕೆಲವು ದಿನಗಳ ಹಿಂದೆಯೇ ಘೋಷಿಸಲಾಗಿತ್ತು. ವೃತ್ತಿಪರ ಕಣಕ್ಕೆ ಇಳಿದ ನಂತರ ಲಾಪ್ಸನ್‌ ಕೂಡ ಉತ್ತಮ ಲಯದಲ್ಲಿದ್ದಾರೆ. ಆರು ಅಡಿ ನಾಲ್ಕು ಇಂಚು ಎತ್ತರದ, 26 ವರ್ಷದ ಈ ಬಾಕ್ಸರ್ ಹಿಂದಿನ ಆರು ಬೌಟ್‌ಗಳ ಪೈಕಿ ನಾಲ್ಕರಲ್ಲಿ ಗೆದ್ದಿದ್ದಾರೆ.

‘ಒಂದು ವರ್ಷದ ಬಿಡುವಿನ ಅವಧಿ ಸವಾಲಿನದ್ದಾಗಿತ್ತು. ಜೀವನ ಸಹಜಸ್ಥಿತಿಗೆ ಬರಲು ಒಂದಷ್ಟು ಸಮಯ ಬೇಕಾಯಿತು. ಕಳೆದ ಎರಡು ತಿಂಗಳುಗಳು ನನ್ನ ಪಾಲಿಗೆ ಅದ್ಭುತವಾಗಿದ್ದವು. 2010ರ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಜೈ ಭಗವಾನ್ ಅವರ ನೆರವು ಪಡೆದು ಗುರುಗ್ರಾಮದಲ್ಲಿ ತರಬೇತಿ ನಡೆಸಿದ್ದೇನೆ‘ ಎಂದು ವಿಜೇಂದರ್ ತಿಳಿಸಿದ್ದಾರೆ.

ಕೋವಿಡ್‌–19ರಿಂದಾಗಿ ವಿಜೇಂದರ್ ಒಂದು ವರ್ಷದಿಂದ ಸ್ಪರ್ಧಾಕಣಕ್ಕೆ ಇಳಿದಿರಲಿಲ್ಲ. ಅವರು ಕೊನೆಯದಾಗಿ ಸ್ಪರ್ಧಿಸಿದ್ದು 2019ರ ನವೆಂಬರ್‌ನಲ್ಲಿ. ದುಬೈನಲ್ಲಿ ನಡೆದಿದ್ದ ಆ ಬೌಟ್‌ನಲ್ಲಿ ಅವರು ಕಾಮನ್‌ವೆಲ್ತ್ ಚಾಂಪಿಯನ್‌ ಚಾರ್ಲ್ಸ್‌ ಅಡಮು ಎದುರು ಸೆಣಸಿದ್ದರು.

ಶುಕ್ರವಾರದ ಮತ್ತೊಂದು ಹಣಾಹಣಿಯಲ್ಲಿ ಭಾರತದ ನೀರಜ್ ಗೋಯತ್ ಅವರು ಸಂದೀಪ್ ಕುಮಾರ್ ಎದುರು ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT