ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೋತರೂ ವಿನೇಶಾಗೆ ಕಂಚಿನ ಅವಕಾಶ

Last Updated 17 ಸೆಪ್ಟೆಂಬರ್ 2019, 19:58 IST
ಅಕ್ಷರ ಗಾತ್ರ

ನೂರ್ ಸುಲ್ತಾನ್‌, ಕಜಕಸ್ತಾನ:ಭಾರತದ ತಾರೆ ವಿನೇಶಾ ಪೊಗಟ್‌ಗೆ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಆಸೆ ಈಡೇರಲಿಲ್ಲ. ಅವರು ಮಂಗಳವಾರ 53 ಕೆ.ಜಿ. ವಿಭಾಗದ ಎರಡನೇ ಸುತ್ತಿನ ಸೆಣಸಾಟದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ ಮಯು ಮುಕೈಡಾ ಎದುರು ಸೋಲನುಭವಿಸಿದರು. ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಜೀವಂತವಾಗಿದೆ.

ಭಾರತದ ಆಟಗಾರ್ತಿ ಮೇಲೆ ಗೆದ್ದು ಸೆಮಿಫೈನಲ್‌ ತಲುಪಿದ್ದ ಜಪಾನ್‌ನ ಮುಕೈಡಾ, ನಂತರ ಫೈನಲ್‌ ಕೂಡ ತಲುಪಿದ್ದರಿಂದ ‘ರಿಪೇಚ್‌’ ಆಧಾರದ ಮೇಲೆ ವಿನೇಶಾ ಅವರುಕಂಚಿನ ಪದಕಕ್ಕಾಗಿ ಹೋರಾಟ ನಡೆಸುವ ಅವಕಾಶ ಪಡೆದಿದ್ದಾರೆ.

ವಿನೇಶಾ, ರಿಪೇಚ್‌ನಲ್ಲಿ ಮೂರು ಸೆಣಸಾಟಗಳಲ್ಲಿ ವಿಜಯಿಯಾದರೆ ಕಂಚಿನ ಪದಕ ಕೊರಳಿಗೇರಿಸಬಹುದು. ಎರಡರಲ್ಲಿ ಜಯಶಾಲಿಯಾದರೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸಬಹುದು.

ಅವರು ಇದಕ್ಕಾಗಿ ಯುಲಿಯಾ ಖಾವಲ್ಜಿ (ಉಕ್ರೇನ್‌), ವಿಶ್ವದ ನಂಬರ್‌ ವನ್‌ ಸಾರಾ ಆ್ಯನ್‌ ಹಿಲ್ಡಬ್ರಾಂಟ್‌ (ಅಮೆರಿಕ) ಮತ್ತು ಮರಿಯಾ ಪ್ರಿವಲರಾಕಿ (ಗ್ರೀಸ್‌) ಅವರನ್ನು ಸೋಲಿಸಬೇಕಾಗುತ್ತದೆ.

ಮುಕೈಡಾಗೆ ಜಯ:ವಿನೇಶಾ, ವಿಶ್ವದ ಎರಡನೇ ಕ್ರಮಾಂಕದ ಪೈಲ್ವಾನರಾದ ಮುಕೈಡಾ ಅವರಿಗೆ ಸತತ ಎರಡನೇ ಬಾರಿ ಸೋತಂತಾಯಿತು. ಚೀನಾದಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ಮುಕೈಡಾ ಜಯಗಳಿಸಿದ್ದರು. ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್ ಚಿನ್ನ ಗೆದ್ದುಕೊಂಡಿರುವ ವಿನೇಶಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದುವರೆಗೆ ಪದಕ ಗೆದ್ದುಕೊಂಡಿಲ್ಲ.

‘ಜಪಾನ್‌ ಕುಸ್ತಿಯಲ್ಲಿ ಪ್ರಬಲ ಶಕ್ತಿ. ಅವರ ಮೇಲೆ ಯಶಸ್ಸು ಗಳಿಸಲು ಸಮಯ ಹಿಡಿಯುತ್ತದೆ’ ಎಂದು ವಿನೇಶಾ ಹೇಳಿದರು. ‘ಬರೇ ಮುಕೈಡಾ ಮಾತ್ರ ನಮ್ಮ ಗುರಿಯಲ್ಲ. ಬೇರೆ ರೆಸ್ಲರ್‌ಗಳ ಮೇಲೆಯೂ ಗಮನವಿಡಬೇಕಾಗುತ್ತದೆ. 53 ಕೆ.ಜಿ. ವಿಭಾಗದಲ್ಲಿ ಎಲ್ಲರೂ ಪ್ರಬಲರಿದ್ದಾರೆ. ಆದರೆ ನನಗೆ ಪದಕದ ಆಸೆ ಇನ್ನೂ ಇದೆ’ ಎಂದು ನಾಲ್ಕನೇ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಅವರು ಹೇಳಿದರು.

ಮೊದಲ ಸುತ್ತಿನಲ್ಲಿ ವಿನೇಶಾ, ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆಯಾಗಿದ್ದ ಸೋಫಯಾ ಮ್ಯಾಟ್ಸನ್‌ ಅವರನ್ನು ಅವರನ್ನು 13–0 ಯಿಂದ ಸೋಲಿಸಿದ್ದರು. ಆದರೆ ಕುತೂಹಲಕ್ಕೆ ಕಾರಣವಾಗಿದ್ದ ಎರಡನೇ ಸುತ್ತಿನಲ್ಲಿ ಅವರು ಮುಕೈಡೊ ಎದುರು ಹೆಚ್ಚು ಪ್ರತಿರೋಧ ತೋರಲಿಲ್ಲ. ಎಂದಿನ ರೀತಿ ಅಕ್ರಮಣಕಾರಿಯಾಗಿ ಸೆಣಸಾಡಲು ವಿಫಲರಾದರು.

ಒಲಿಂಪಿಕ್‌ ವಿಭಾಗವಾಗಿರುವ ‍50 ಕೆ.ಜಿ. ಸ್ಪರ್ಧೆಯಲ್ಲಿ ಸೀಮಾ ಬಿಸ್ಲಾ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 2–9 ರಿಂದ ಒಲಿಂಪಿಕ್‌ ಪದಕ ವಿಜೇತೆ ಮರಿಯಾ ಸ್ಟಡ್ನಿಕ್‌ ಅವರಿಗೆ ಮಣಿದರು. ಮರಿಯಾ, ಫೈನಲ್‌ ತಲುಪಿರುವ ಕಾರಣ ವಿನೇಶಾ ರೀತಿಯಲ್ಲಿ ಸೀಮಾ ಅವರಿಗೂ ಕಂಚಿನ ಪದಕ ಹಾಗೂ ಒಲಿಂಪಿಕ್‌ ಪದಕದ ಆಸೆ ಜೀವಂತವಾಗುಳಿದಿದೆ.

‘ಮರಿಯಾ ನನಗಿಂತ ಹೆಚ್ಚು ಪ್ರಬಲರೆಂದೇನಲ್ಲ. ಆದರೆ ಅವರು ನನಗಿಂತ ಹೆಚ್ಚು ಅನುಭವಿ. ನಾನು ಈ ವಿಭಾಗದಲ್ಲಿ 5–6 ಬಾರಿ ಸ್ಪರ್ಧಿಸಿದ್ದೇನಷ್ಟೇ. ನಾನು ಕಲಿಯುತ್ತಿದ್ದೇನೆ’ ಎಂದಿದ್ದಾರೆ ಸೀಮಾ.

ಒಲಿಂಪಿಕ್‌ಯೇತರ ವಿಭಾಗವಾದ 72 ಕೆ.ಜಿ. ಸೆಣಸಾಟದಲ್ಲಿ ಕೋಮಲ್‌ ಗೋಲೆ, ಟರ್ಕಿಯ ಬೆಸ್ಟೆ ಆಲ್ಟುಗ್‌ ಅವರಿಗೆ 1–4ರಲ್ಲಿ ಮಣಿದರು. 55 ಕೆ.ಜಿ. ವಿಭಾಗದಲ್ಲಿ ಲಲಿತಾ 3–10 ರಿಂದ ಮಂಗೋಲಿಯಾದ ಬೊಲೊರ್‌ತುಯ ಒಕಿರ್‌ ಅವರಿಗೆ ಶರಣಾದರು. ಆದರೆ ಈ ಎರಡು ವಿಭಾಗಗಳಲ್ಲಿ ಗೆದ್ದ ಸ್ಪರ್ಧಿಗಳು ಫೈನಲ್‌ ತಲುಪದ ಕಾರಣ, ಭಾರತೀಯ ಸ್ಪರ್ಧಿಗಳಿಬ್ಬರು ಹೊರಬಿದ್ದಂತಾಗಿದೆ.

ಗ್ರೀಕೊ ರೋಮನ್‌ ಶೈಲಿಯಲ್ಲಿ ಭಾರತದ ಪದಕದ ಅವಕಾಶ ಭಗ್ನಗೊಂಡಿತು. 130 ಕೆ.ಜಿ. ವಿಭಾಗದ ‘ರಿಪೇಚ್‌’ನಲ್ಲಿ ನವೀನ್, ಎಸ್ಟೋನಿಯಾದ ಹೀಕಿ ಬನಿ ಅವರಿಗೆ ತಾಂತ್ರಿಕ ಕೌಶಲದ ಆಧಾರದಲ್ಲಿ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT