ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಾಲ್ವರು ಸೇಲಿಂಗ್ ಪಟುಗಳಿಗೆ ಒಲಿಂಪಿಕ್ಸ್‌ ಟಿಕೆಟ್‌

ಗಣಪತಿ ಕೇಳಪಂಡ ಚೆಂಗಪ್ಪ–ವರುಣ್ ಠಕ್ಕರ್ ಜೋಡಿ ಹಾಗೂ ವಿಷ್ಣು ಸರವಣನ್‌ಗೆ ಟೋಕಿಯೊ ಟಿಕೆಟ್
Last Updated 8 ಏಪ್ರಿಲ್ 2021, 14:33 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸೇಲಿಂಗ್ ಪಟುಗಳು ಗುರುವಾರ ಐತಿಹಾಸಿಕ ಸಾಧನೆ ಮಾಡಿದರು. ಒಮಾನ್‌ನಲ್ಲಿ ನಡೆದ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ ವಿಷ್ಣು ಸರವಣನ್, ಗಣಪತಿ ಕೇಳಪಂಡ ಚೆಂಗಪ್ಪ ಮತ್ತು ವರುಣ್ ಠಕ್ಕರ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.

ಬುಧವಾರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದರೊಂದಿಗೆ ತಮಿಳುನಾಡಿನ ನೇತ್ರಾ ಕುಮನನ್ ಈ ಸಾಧನೆ ಮಾಡಿದ ದೇಶದ ಮೊದಲ ಮಹಿಳಾ ಸೇಲಿಂಗ್ ಪಟು ಎಂದೆನಿಸಿಕೊಂಡಿದ್ದರು. ಭಾರತದ ನಾಲ್ವರು ಸ್ಪರ್ಧಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಮತ್ತು ಮೂರು ವಿಭಿನ್ನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

‘ಸೇಲಿಂಗ್ ವಿಭಾಗದಲ್ಲಿ ಈ ವರೆಗೆ ಭಾರತ ನಾಲ್ಕು ಸಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದೆ. ಈ ಬಾರಿ ವಿಶಿಷ್ಟ ಸಾಧನೆ ಮಾಡಲಾಗಿದೆ’ ಎಂದು ಭಾರತ ಯಾಚಿಂಗ್ ಸಂಸ್ಥೆಯ ಜಂಟಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೀಕ್ಷಿತ್ ಹೇಳಿದರು.

’ವರ್ಷಗಳ ಕಠಿಣ ಪರಿಶ್ರಮ, ಪಾಲಕರು ಮತ್ತು ಸಿಬ್ಬಂದಿಯ ಅರ್ಪಣಾ ಭಾವದಿಂದ ಈ ಸಾಧನೆ ಆಗಿದೆ’ ಎಂದು ಮುಖ್ಯ ಕೋಚ್ ಥಾಮಸ್ ಜನುಸೆವ್‌ಸ್ಕಿ ಅಭಿಪ್ರಾಯಪಟ್ಟರು.

ಗುರುವಾರ ನಡೆದ ಲೇಜರ್ ಸ್ಟ್ಯಾಂಡರ್ಡ್ ಕ್ಲಾಸ್ ವಿಭಾಗದ ಸ್ಪರ್ಧೆಯಲ್ಲಿ ಅಗ್ರ ಎರಡನೇ ಸ್ಥಾನ ಗಳಿಸಿದ ಸರವಣನ್ ಈ ವಿಭಾಗದಲ್ಲಿ ಸ್ಪರ್ಧಿಸುವ ಮೊದಲ ಕ್ರೀಡಾಪಟು ಎನಿಸಿಕೊಂಡರು. ಇದರ ಬೆನ್ನಲ್ಲೇ ಚೆಂಗಪ್ಪ ಮತ್ತು ಠಕ್ಕರ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದರು. ಈ ಜೋಡಿ 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿತ್ತು.

1984ರ ಒಲಿಂಪಿಕ್ಸ್‌ನಲ್ಲಿ ಭಾರತದ ಫಾರೂಕ್ ತಾರಾಪುರ್ ಮತ್ತು ಧ್ರುವ ಭಂಡಾರಿ 470 ಕ್ಲಾಸ್ ವಿಭಾಗದ ಸ್ಪರ್ಧಿಸಿದ್ದರು. 1988ರಲ್ಲಿ ಫಾಕೂರ್ ತಾರಾಪುರ್ ಮತ್ತು ಕೆಲಿ ರಾವ್ ಭಾಗವಹಿಸಿದ್ದರು. 1992ರಲ್ಲಿ ಕೂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಫಾರೂಕ್ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದರು. ಆ ವರ್ಷ ಸೈರಸ್ ಕಾಮಾ ಕೂಡ ಪಾಲ್ಗೊಂಡಿದ್ದರು. 2004ರ ಒಲಿಂಪಿಕ್ಸ್‌ನಲ್ಲಿ ಮಾಳವ್‌ ಶ್ರಾಫ್ ಮತ್ತು ಸುಮೀತ್ ಪಟೇಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT