ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮಾದಿಂದ ಎದ್ದು ‘ಪವರ್‌’ ತೋರಿದ ವಿಶ್ವನಾಥ‌ಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ

ಕ್ರೀಡಾ ವಿಭಾಗದಲ್ಲಿ ಕುಟ್ಟಪ್ಪ, ಗಾಣಿಗ, ನಂದಿತಾಗೆ ರಾಜ್ಯೋತ್ಸವ ಪ್ರಶಸ್ತಿ
Last Updated 29 ಅಕ್ಟೋಬರ್ 2019, 5:49 IST
ಅಕ್ಷರ ಗಾತ್ರ

ಕುಂದಾಪುರ: ಕಾಮನ್‌ವೆಲ್ತ್‌ ಅಥ್ಲೆಟಿಕ್ಸ್‌ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಸ್ಥಾಪಿಸಿ, ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದ ತಾಲ್ಲೂಕಿನ ದೇವಲ್ಕುಂದ ಗ್ರಾಮದ ವಿಶ್ವನಾಥ ಭಾಸ್ಕರ್‌ ಗಾಣಿಗ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಡತನದ ಬೇಗೆ ಮತ್ತು ಅಪಘಾತ ದಲ್ಲಿ ಆದ ಗಾಯದ ನೋವನ್ನೂ ಎದುರಿಸಿ ವಿಶ್ವನಾಥ ಮಾಡಿದ ಸಾಧನೆಗೆ ಪ್ರಶಸ್ತಿ ತಾನಾಗಿಯೇ ಒಲಿದುಬಂದಿದೆ. ಈ ಹಿಂದೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆರು ದಿನಗಳ ಕಾಲ ಕೋಮಾದಲ್ಲಿದ್ದರು. ಕೆಲವು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು.

ಸಂಪೂರ್ಣ ಫಿಟ್ ಆಗುವ ಮುನ್ನವೇ ಮತ್ತೆ ಪವರ್‌ ಲಿಫ್ಟಿಂಗ್‌ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಸಾಧನೆ ಮೆರೆದರು.

ವಿಶ್ವನಾಥ, ಬಾಳಿಕೆರೆ ನಿವಾಸಿ ತಂದೆ ಭಾಸ್ಕರ ಗಾಣಿಗ ಹಾಗೂ ತಾಯಿ ಪದ್ಮಾವತಿ ದಂಪತಿ ಪುತ್ರ. ಅಂತರರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಭರಿಸಬೇಕಾದ ₹1.80 ಲಕ್ಷ ಹಣಕ್ಕಾಗಿ ಸಾಲ ಮಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿ ದೇಶದ ಹೆಸರನ್ನು ವಿಶ್ವಮಟ್ಟಕ್ಕೆ ಏರಿಸಿದ್ದಾರೆ. ಭಾರತದ ಬಲಾಢ್ಯ ಪುರುಷನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಮಟ್ಟದ 19 ಹಾಗೂ ಅಂತರರಾಷ್ಟ್ರೀಯ ಮಟ್ಟದ 10 ಪದಕಗಳನ್ನು ಗಳಿಸಿದ್ದಾರೆ.

ಶಾಲೆಯ ರಜಾ ದಿನಗಳಲ್ಲಿ ಮರದ ದೊಡ್ಡ ದೊಡ್ಡ ದಿಮ್ಮಿಗಳನ್ನು ಲಾರಿಗೆ ಲೋಡ್ ಮಾಡುವ ಕೆಲಸವನ್ನು ವಿಶ್ವನಾಥ ಮಾಡುತ್ತಿದ್ದರು.

ಅದೇ ಕಾರ್ಯ ಅವರನ್ನು ಪವರ್‌ಲಿಫ್ಟಿಂಗ್ ಕ್ರೀಡಾಪಟುವನ್ನಾಗಿ ಮಾಡಿದ್ದು ಈಗ ನಾಡಿಗೆ ಕೀರ್ತಿ ತಂದಿದ್ದಾರೆ.

**

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ತನಗೆ ತುಂಬಾ ಸಂತೋಷವಾಗಿದೆ. ನನ್ನ ಪ್ರತಿಭೆಯನ್ನು ಗುರುತಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.
ವಿಶ್ವನಾಥ ಭಾಸ್ಕರ್‌ ಗಾಣಿಗ,ಪ್ರಶಸ್ತಿ ವಿಜೇತ

**
ಪರ್ವತಾರೋಹಿ ನಂದಿತಾಗೆ ರಾಜ್ಯೋತ್ಸವ ಗರಿ

ಹುಬ್ಬಳ್ಳಿ:ಏಷ್ಯಾ, ಯುರೋಪ್‌, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಖಂಡಗಳಲ್ಲಿರುವ ಅತಿ ಎತ್ತರದ ಶಿಖರಗಳ ತುತ್ತತುದಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರುವ ಹುಬ್ಬಳ್ಳಿಯ ಸಾಹಸಿ ಯುವತಿ ನಂದಿತಾ ನಾಗನಗೌಡರ (31) ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

‘ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಪ್ರಪಂಚದ ಏಳು ಖಂಡಗಳ ಪೈಕಿ ಈಗಾಗಲೇ ನಾಲ್ಕು ಖಂಡಗಳ ಅತಿ ಎತ್ತರದ ಶಿಖರಗಳನ್ನು ವೈಯಕ್ತಿಕ ಖರ್ಚಿನಲ್ಲಿ (ಮೌಂಟ್‌ ಎವರೆಸ್ಟ್‌, ಕಿಲಿಮಂಜಾರೊ, ಕಾರ್‌ಸನ್ಸ್‌ ಪಿರಾಮಿಡ್‌) ಏರಿದ್ದೇನೆ. ಸರ್ಕಾರ ಇನ್ನಷ್ಟು ನೆರವು, ಪ್ರೋತ್ಸಾಹ ನೀಡಿದರೆ ಇನ್ನುಳಿದ ಮೂರು ಖಂಡಗಳ ಶಿಖರಗಳ ಮೇಲೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿಖರಾರೋಹಣದ ಉದ್ದೇಶ ಕೇವಲ ಸಾಹಸ ಮಾತ್ರವಲ್ಲ. ಇದರ ಹಿಂದೆ ದೇಶ, ದೇಶಗಳ ನಡುವೆ ಹಾಗೂ ಖಂಡ, ಖಂಡಗಳ ನಡುವಿನ ಸೌಹಾರ್ದತೆ ಹಾಗೂ ಮಹಿಳಾ ಸಬಲೀಕರಣದ ಉದ್ದೇಶವಿದೆ’ ಎಂದು ಹೇಳಿದರು.

ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಿಂದ ಎಂಜಿನಿಯರಿಂಗ್‌ ಹಾಗೂ ಇಂಗ್ಲೆಂಡ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT