ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಲ್ಲಿಯೂ ಇದ್ದಾರೆ ಭಾವಿ ಒಲಿಂಪಿಯನ್‌ಗಳು

ಸ್ಥಳೀಯವಾಗಿ ಸಿಗದ ಗುಣಮಟ್ಟದ ಕ್ರೀಡಾಸೌಲಭ್ಯ, ಹೆಚ್ಚುತ್ತಿರುವ ವಲಸೆ, ಬೇಕಿದೆ ಪ್ರೋತ್ಸಾಹದ ಬಲ
Last Updated 29 ಆಗಸ್ಟ್ 2021, 2:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಏಳು ಪದಕಗಳನ್ನು ಗೆದ್ದು ಮಾಡಿದ ಸಾಧನೆ ದೇಶದಾದ್ಯಂತ ಸಂಚಲನವನ್ನೇ ಉಂಟು ಮಾಡಿದೆ. ಅವರಂತೆ ನಾವೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ವೇದಿಕೆಯಲ್ಲಿ ಮಿಂಚಬೇಕೆಂಬ ಬಯಕೆ ಜಿಲ್ಲೆಯ ಕ್ರೀಡಾಪಟುಗಳಲ್ಲಿ ಮೂಡಿದೆ.

ಪ್ರತಿ ಒಲಿಂಪಿಕ್ಸ್‌ ಹಾಗೂ ವಿಶ್ವ ಕ್ರೀಡಾಕೂಟಗಳಲ್ಲಿ ಭಾರತ ಗಮನ ಸೆಳೆಯವ ಸಾಧನೆ ಮಾಡಿದ ಪ್ರತಿಬಾರಿಯೂಎಲ್ಲ ಕ್ರೀಡಾಪಟುಗಳಲ್ಲಿ ಇದೇ ಆಸೆ ಮೂಡುತ್ತದೆ. ಕನಸು, ಗುರಿ ಹಾಗೂ ದಾರಿ ನಿಶ್ಚಿತವಾಗಿದ್ದರೂ ಕ್ರೀಡಾ ತರಬೇತುದಾರರು, ಸೌಲಭ್ಯಗಳು ಹಾಗೂ ಹಣಕಾಸಿನ ನೆರವಿನ ಕೊರತೆ ಅವರನ್ನು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಮಾಡುತ್ತವೆ.

ಧಾರವಾಡ ಜಿಲ್ಲೆಯಲ್ಲಿ ಹಾಕಿ, ಫುಟ್‌ಬಾಲ್‌,ಕುಸ್ತಿ, ಅಥ್ಲೆಟಿಕ್ಸ್‌ ಹಾಗೂಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ಹಲವಾರು ಕ್ರೀಡಾಪಟುಗಳಿದ್ದಾರೆ.2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಜೆ.ಜೆ. ಶೋಭಾ ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಎಂಬ ಪುಟ್ಟ ಗ್ರಾಮದಿಂದ ಅರಳಿದ ಪ್ರತಿಭೆ.

ರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಟೂರ್ನಿ ಹಾಗೂ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಆಡಿರುವ ಚಿಂತಾ ಚಂದ್ರಶೇಖರ್ (ಚಿಂಟು), ಐಪಿಎಲ್‌ ಸೇರಿದಂತೆ ವಿವಿಧ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಿರುವ ಪವನ್ ದೇಶಪಾಂಡೆ, 2011ರರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನ ಹರ್ಡಲ್ಸ್‌ನಲ್ಲಿ ಚಿನ್ನ ಜಯಿಸಿದ್ದ ವೀಣಾ. ಎಚ್‌. ಅಡಗಿಮನಿ, ಶಾಲಾ ಮಟ್ಟದ ಮತ್ತುಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಚೆಸ್‌ ಆಟಗಾರ್ತಿ ತನಿಷಾ, ವಿವಿಧ ವಯೋಮಿತಿಯೊಳಗಿನ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದಿರುವಗ್ಲೋರಿಯಾ ಅಠವಾಲೆ, ಜಿಮ್ನಾಸ್ಟಿಕ್‌ನಲ್ಲಿ ಸುಧೀರ ದೇವದಾಸ್‌, ವಿಶಾಲ ಆಲೂರು, ಸಂಜಯ ಹಂಪಣ್ಣನವರ, ಪವನ ಮುರ್ತುಗುಟೆ, ಪೂರ್ಣಿಮಾ ಗೋಧಿ, ಹಾಕಿ ಆಟಗಾರರಾದವಿನಾಯಕ ಬಿಜವಾಡ, ಅಭಿಷೇಕ ಬಿಜವಾಡ, ಸೂರಜ್‌ ಬಿಜವಾಡ, ಪ್ರಜ್ವಲ್‌ ಬಿಜವಾಡ, ವಾಸು ಬಳ್ಳಾರಿ ಹೀಗೆ ಅನೇಕರು ಹೆಸರು ಮಾಡಿದ್ದಾರೆ. ಇವರೆಲ್ಲ ಇತ್ತೀಚಿನ ವರ್ಷಗಳಲ್ಲಿ ಸಾಧನೆ ಮಾಡಿದವರಾದರೆ, ದಶಕಗಳ ಹಿಂದೆ ಮಾಡಿದವರ ಪಟ್ಟಿಯೂ ದೊಡ್ಡದಿದೆ.

ಬಹುತೇಕರು ಜಿಲ್ಲಾ ಮಟ್ಟದಲ್ಲಿ ಸೌಲಭ್ಯಗಳು ದೊರೆಯದ್ದರಿಮದಾಗಿ ಬೆಂಗಳೂರು, ಮೈಸೂರು ಹಾಗೂ ಹೊರರಾಜ್ಯಗಳಿಗೆ ವಲಸೆ ಹೋಗಿ, ಕ್ರೀಡೆಯಲ್ಲಿ ಭವಿಷ್ಯ ಕಂಡುಕೊಂಡಿದ್ದಾರೆ.

ಭರವಸೆಗಷ್ಟೇಸೀಮಿತ

ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜನಪ್ರತಿನಿಧಿಗಳು ಹಲವಾರು ವರ್ಷಗಳಿಂದ ಭರವಸೆ ನೀಡುತ್ತಲೇ ಬಂದಿದ್ದಾರೆ. ಬಹುತೇಕ ಭರವಸೆಗಳು ಈಡೇರಿಲ್ಲ. ಜಿಲ್ಲೆಗೆ ಇರುವ ಏಕೈಕ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌ ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿದೆ. ಉತ್ತರ ಕರ್ನಾಟಕದ ಏಕೈಕ ಡೈವಿಂಗ್‌ ಸೌಲಭ್ಯ ಇರುವುದು ಹುಬ್ಬಳ್ಳಿಯಲ್ಲಿ. ಇದೂ ಕ್ರೀಡಾಪಟುಗಳ ಉಪಯೋಗಕ್ಕೆ ಬರುತ್ತಿಲ್ಲ.

ತಾಲ್ಲೂಕಿಗೆ ಒಂದರಂತೆ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ.ತಾಲ್ಲೂಕು ಕ್ರೀಡಾಂಗಣಗಳು ಸರ್ಕಾರಿ ಹಾಗೂ ರಾಜಕೀಯ ಕಾರ್ಯಕ್ರಮಗಳ ತಾಣಗಳಾಗುತ್ತಿವೆ. ಹುಬ್ಬಳ್ಳಿ ಹಾಗೂ ಧಾರವಾಡ ಹೊರತು ಪಡಿಸಿದರೆ ಅಥ್ಲೀಟ್‌ಗಳು ಉಳಿದೆಡೆ ಡಾಂಬಾರು ರಸ್ತೆ ಮೇಲೆ ಅಭ್ಯಾಸ ಮಾಡಬೇಕಾದ ಪರಿಸ್ಥಿತಿಯಿದೆ.

ಧಾರವಾಡದಲ್ಲಿ ಈಜುಕೊಳ, ಹಳೇ ಹು‌ಬ್ಬಳ್ಳಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಮೈದಾನ, ನೆಹರೂ ಕ್ರೀಡಾಂಗಣ ಹಾಗೂಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಿಸಲಿರುವ ಕ್ರೀಡಾ ಸಂಕೀರ್ಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ವಿವಿಧ ಕ್ರೀಡಾ ಅಕಾಡೆಮಿಗಳು ಕ್ರೀಡಾಪಟುಗಳ ಅಭ್ಯಾಸಕ್ಕಾಗಿ ಖಾಸಗಿ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯದ ಮೈದಾನಗಳ ಮೇಲೆ ಅವಲಂಬಿತವಾಗಿವೆ.

ಕ್ರೀಡಾ ಸೌಲಭ್ಯಗಳ ಕೊರತೆಯಕಾರಣದಿಂದಾಗಿ ಅನೇಕ ಕ್ರೀಡಾಪಟುಗಳ ಸಾಮರ್ಥ್ಯತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಸೀಮಿತವಾಗುತ್ತಿದೆ. ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಅದರಲ್ಲಿಯೇ ಸಾಧನೆ ಮಾಡಬಹುದು,ಕ್ರೀಡೆಯಿಂದಲೂ ಬದುಕು ಕಟ್ಟಿಕೊಳ್ಳಬಹುದು ಎನ್ನುವ ‘ಶಿಕ್ಷಣ’ವನ್ನು ಬೋಧಿಸಬೇಕಾಗಿದೆ.ಇದಕ್ಕೆ ಜಿಲ್ಲೆಯ ಕ್ರೀಡಾ ತರಬೇತುದಾರರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ತಜ್ಞರು ಕಾರ್ಯಪ್ರವೃತ್ತರಾಗಬೇಕು. ಆಗ ನಮ್ಮಲ್ಲಿರುವ ಭಾವಿ ಒಲಿಂಪಿಯನ್‌ಗಳು, ಒಲಿಂಪಿಯನ್‌ಗಳಾಗಿ ಕಂಗೊಳಿಸುವ ದಿನಗಳು ಬರಬಹುದು.

----

ತುರ್ತಾಗಿ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಿಂದ ನೂರಾರು ಮಕ್ಕಳು ಸಾಧಕ ಕ್ರೀಡಾಪಟುಗಳಾಗಿ ಹೊರಹೊಮ್ಮುತ್ತಾರೆ.
ಜೆ.ಜೆ. ಶೋಭಾ, ಒಲಿಂಪಿಯನ್‌, ಪಶುಪತಿಹಾಳ

***

ಶಾಲಾ ಹಂತದಿಂದಲೇ ಪ್ರತಿಭೆಗಳ ಗುರುತಿಸುವಿಕೆ ಆಗಬೇಕು. ಆಗ ಮಾತ್ರ ನಮ್ಮ ನಡುವೆ ಇರುವ ನೀರಜ್‌ ಚೋಪ್ರಾನಂಥ ಸಾಧಕರು ಹೊರಹೊಮ್ಮಲು ಸಾಧ್ಯ.
ಕಿರಣ ಕುಲಕರ್ಣಿ
ಕ್ರೀಡಾ ವೈದ್ಯ, ಧಾರವಾಡ

***

ಪದಕ ಗೆದ್ದ ಮೇಲೆ ಕೋಟಿ, ಕೋಟಿ ಹಣ ಕೊಡುವ ಬದಲು ಅಭ್ಯಾಸ ಆರಂಭಿಸಿದಾಗ ಅಲ್ಪಮಟ್ಟಿಗೆ ನೆರವಾದರೂ ಸಾಕು. ಅನೇಕ ಕ್ರೀಡಾಪಟುಗಳು ದೊಡ್ಡ ಸಾಧನೆ ಮಾಡುತ್ತಾರೆ.

-ವೀಣಾ ಅಡಗಿಮನಿ, ಅಥ್ಲೀಟ್‌, ಹುಬ್ಬಳ್ಳಿ

***

ಜಿಲ್ಲೆಯ ಮಕ್ಕಳಲ್ಲಿ ಸಾಮರ್ಥ್ಯವಿದ್ದರೂ ಕ್ರೀಡಾ ಸೌಲಭ್ಯಗಳು ಹಾಗೂ ಕೋಚ್‌ಗಳ ಕೊರತೆಯಿದೆ. ಅವುಗಳನ್ನು ಕಲ್ಪಿಸಿದರೆ ಎಲ್ಲರಿಗೂ ಅನುಕೂಲ.
-ಬಿ.ಎಂ. ಪಾಟೀಲ, ಕ.ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT