ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ನಿರ್ಧಾರ

Last Updated 22 ಜೂನ್ 2020, 13:42 IST
ಅಕ್ಷರ ಗಾತ್ರ

ನವದೆಹಲಿ: ಗಡಿ ವಿವಾದ ಉಲ್ಬಣಿಸಿ 20 ಯೋಧರ ಜೀವ ತೆಗೆದ ಚೀನಾದ ಕ್ರೀಡಾ ಉತ್ಪನ್ನಗಳನ್ನು ಬಹಿಷ್ಕರಿಸಲು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಲ್‌ಎಫ್‌) ನಿರ್ಧರಿಸಿದೆ. ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಬರೆದಿರುವ ಪತ್ರದಲ್ಲಿ ಈ ನಿರ್ಧಾರವನ್ನು ತಿಳಿಸಿದೆ. ಕಳೆದ ವರ್ಷ ಕಳಪೆ ಉತ್ಪನ್ನಗಳನ್ನು ಆ ದೇಶ ಸರಬರಾಜು ಮಾಡಿದೆ ಎಂಬ ಆರೋಪವನ್ನೂ ಮಾಡಿದೆ.

‘ಚೀನಾದ ಕಂಪನಿ ‘ಝಡ್‌ಕೆಸಿ’ಯಿಂದಬಾರ್ಬೆಲ್ ಮತ್ತು ವೇಟ್ ಪ್ಲೇಟ್‌ಗಳ ನಾಲ್ಕು ಸೆಟ್‌ಗಳಿಗೆ ಕಳೆದ ವರ್ಷ ಆರ್ಡರ್ ಮಾಡಲಾಗಿತ್ತು. ಅವುಗಳು ಕೆಲವೇ ತಿಂಗಳಲ್ಲಿ ಹಾಳಾಗಿದ್ದು ಲಿಫ್ಟರ್‌ಗಳು ಬಳಸುವುದನ್ನೇ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಚೀನಾದ ಯಾವುದೇ ಉತ್ಪನ್ನವನ್ನು ಬಳಸದೇ ಇರಲು ನಿರ್ಧರಿಸಲಾಗಿದೆ’ ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಭಾರತದ ಕಂಪನಿಗಳು ತಯಾರಿಸಿದ ಅಥವಾ ಇತರ ಯಾವುದಾದರೂ ದೇಶದಲ್ಲಿ ತಯಾರಾದ ವಸ್ತುಗಳನ್ನು ಭವಿಷ್ಯದಲ್ಲಿ ಬಳಸಲಾಗುವುದು’ ಎಂದು ಅವರು ವಿವರಿಸಿದ್ದಾರೆ.

‘ಲಾಕ್‌ಡೌನ್ ಪರಿಣಾಮವಾಗಿ ಎರಡು ತಿಂಗಳಿಗೂ ಹೆಚ್ಚು ಕಾಲ ಅಭ್ಯಾಸ ಮಾಡದೇ ಇದ್ದ ವೇಟ್‌ಲಿಫ್ಟರ್‌ಗಳು ಚೀನಾದಿಂದ ಆಮದು ಮಾಡಲಾಗಿದ್ದ ಪ್ಲೇಟ್‌ಗಳನ್ನು ಬಳಸಿದ್ದಾರೆ. ಆಗಲೇ ಅವುಗಳ ಗುಣಮಟ್ಟ ಕಳಪೆಯಾಗಿದೆ ಎಂದು ತಿಳಿಯಿತು’ ಎಂದು ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ಹೇಳಿದ್ದಾರೆ.

‘ತರಬೇತಿ ಶಿಬಿರದಲ್ಲಿರುವ ಎಲ್ಲ ಲಿಫ್ಟರ್‌ಗಳಲ್ಲೂ ಚೀನಾ ವಿರೋಧಿ ಧೋರಣೆ ಉಂಟಾಗಿದೆ. ಚೀನಾದಲ್ಲಿ ಸಿದ್ಧವಾದ ಟಿಕ್‌ ಟಾಕ್‌ನಂಥ ಆ್ಯಪ್‌ಗಳನ್ನು ಕೂಡ ಅವರು ಮೊಬೈಲ್ ಫೋನ್‌ಗಳಿಂದ ತೆಗೆದು ಹಾಕಿದ್ದಾರೆ. ಈಗ ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಆರ್ಡರ್ ಮಾಡುವಾಗ ಅವರು ಚೀನಾ ನಿರ್ಮಿತವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ’ ಎಂದು ವಿಜಯ್ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೀನಾ ನಿರ್ಮಿತ ಸಾಮಗ್ರಿಗಳನ್ನು ಉಪಯೋಗಿಸಲಾಗುತ್ತದೆ. ಆದ್ದರಿಂದ ಚೀನಾದ ಸಾಮಗ್ರಿಗಳಲ್ಲೇ ಅಭ್ಯಾಸ ಮಾಡಿದರೆ ಒಲಿಂಪಿಕ್ಸ್‌ನಲ್ಲಿ ಅನುಕೂಲ ಆಗಲಿದೆ ಎಂಬ ಭಾವನೆಯಿಂದಬಾರ್ಬೆಲ್ ಮತ್ತು ವೇಟ್ ಪ್ಲೇಟ್‌ಗಳನ್ನು ತರಿಸಲಾಗಿತ್ತು. ಸದ್ಯ ಸ್ವೀಡನ್‌ನ ಎರಿಕ್ಕೊ ಕಂಪನಿಯ ಸಾಮಗ್ರಿಗಳನ್ನು ಬಳಸಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಡಿ ವಿವಾದದ ನಂತರ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಭಾರತ ಒಲಿಂಪಿಕ್ ಸಂಸ್ಥೆಯು ಕ್ರೀಡಾ ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡಿದೆ. ವಿವೊ ಸೇರಿದಂತೆ ವಿವಿಧ ಕಂಪನಿಗಳ ಜೊತೆಗಿನ ಒಪ್ಪಂದವನ್ನು ಮರುಪರಿಶೀಲಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT