ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು: ಮಹಿಳಾ ವೇಟ್‌ಲಿಫ್ಟರ್ ಅಮಾನತು

Last Updated 1 ಏಪ್ರಿಲ್ 2021, 13:08 IST
ಅಕ್ಷರ ಗಾತ್ರ

ನವದೆಹಲಿ: ಪಟಿಯಾಲದ ರಾಷ್ಟ್ರೀಯ ಕ್ರೀಡಾಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಹಿಳಾ ವೇಟ್‌ಲಿಫ್ಟರ್ ಒಬ್ಬರನ್ನು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಕಾಮನ್ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ, ವಿವಿಧ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದ ಮತ್ತು ರಾಷ್ಟ್ರೀಯ ದಾಖಲೆ ಹೊಂದಿರುವ ಈ ವೇಟ್‌ಲಿಫ್ಟರ್ ಇದೇ ತಿಂಗಳ 16ರಿಂದ 25ರ ವರೆಗೆ ಉಜ್ಬೆಕಿಸ್ತಾನದ ತಾಷ್ಕಂಟ್‌ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ತಂಡವನ್ನು ಆಯ್ಕೆ ಮಾಡುವ ಶಿಬಿರದಲ್ಲಿ ಪಾಲ್ಗೊಂಡಿದ್ದರು. ‌

ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ತಂಡದ ಕೋಚ್ ವಿಜಯ ಶರ್ಮಾ ಮತ್ತು ಅನುಭವಿ ಲಿಫ್ಟರ್ ಮೀರಾಬಾಯಿ ಚಾನು ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ವೇಟ್ ಲಿಫ್ಟರ್ ಬಿಡುವು ಪಡೆದು ತವರೂರಿಗೆ ತೆರಳಿದ್ದರು. ವಾಪಸ್ ಬಂದ ನಂತರ ರಾಷ್ಟ್ರೀಯ ಉದ್ದೀಪನ ತಡೆ ಘಟಕದ (ನಾಡಾ) ಅಧಿಕಾರಿಗಳು ಅವರ ಮಾದರಿಯನ್ನು ಸಂಗ್ರಹಿಸಿದ್ದರು ಎಂದು ಎನ್‌ಐಎಸ್ ಮೂಲಗಳು ತಿಳಿಸಿವೆ.

ಎರಡು ವಾರಗಳ ಹಿಂದೆ ಪರೀಕ್ಷೆಯ ವರದಿ ಬಂದಿದ್ದು ಉದ್ದೀಪನ ಮದ್ದು ಸೇವಿಸಿದ್ದು ಗೊತ್ತಾಗಿತ್ತು. ಮನೆಯಲ್ಲಿದ್ದ ಸಂದರ್ಭದಲ್ಲಿ ವೇಟ್‌ಲಿ‍ಫ್ಟರ್ ಗಿಡಮೂಲಿಕೆಗಳಿಂದ ತಯಾರಿಸಿದ್ದ ಯಾವುದೋ ಔಷಧಿ ಸೇವಿಸಿದ್ದರು. ಇದರಿಂದ ಸಮಸ್ಯೆ ಆಗಿರಬೇಕು ಎಂದು ಹೇಳಲಾಗಿದೆ.

ಕ್ರೀಡಾಪಟುವಿನ ಹೆಸರನ್ನು ಗುಪ್ತವಾಗಿ ಇರಿಸಲಾಗಿದ್ದು ಉದ್ದೀಪನ ಮದ್ದು ಸೇವಿಸಿದ್ದು ‘ಬಿ‘ ಮಾದರಿ ಪರೀಕ್ಷೆಯಲ್ಲೂ ಖಾತರಿಯಾದರೆ ಕಠಿಣ ಕ್ರಮಕ್ಕೆ ಒಳಗಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT