ಶುಕ್ರವಾರ, ನವೆಂಬರ್ 15, 2019
21 °C

ಬಾಕ್ಸಿಂಗ್ ದಂತಕಥೆ ನಿಕೋಲಾ ಆ್ಯಡಮ್ಸ್‌ ನಿವೃತ್ತಿ

Published:
Updated:
Prajavani

ಲಂಡನ್: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್‌ನ ಮಹಿಳಾ ಬಾಕ್ಸರ್ ನಿಕೋಲಾ ಆ್ಯಡಮ್ಸ್‌ ಅವರು ಅನಾರೋಗ್ಯದ ಕಾರಣ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ.

37 ವರ್ಷದ ನಿಕೋಲಾ ಅವರು ತಮ್ಮ ವೈದ್ಯರ ಸಲಹೆ ಮೇರೆಗೆ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಕಣ್ಣಿನಲ್ಲಿ ತೊಂದರೆ ಇದ್ದು, ಬಾಕ್ಸಿಂಗ್ ಮುಂದುವರಿಸಿದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಾರ್ಕ್‌ಶೈರ್ ಇವನಿಂಗ್ ಪೋಸ್ಟ್‌ ಪತ್ರಿಕೆಯು ವರದಿ ಮಾಡಿದೆ.

2012ರಲ್ಲಿ ನಡೆದಿದ್ದ ಲಂಡನ್ ಒಲಿಂಪಿಕ್ಸ್‌ನಲ್ಲಿ  ಮತ್ತು 2016ರ ರಿಯೊ ಡಿ ಜನೈರೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ ಫ್ಲೈವೇಟ್‌ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಒಲಿಂಪಿಕ್ಸ್‌ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿದ  ಮೊದಲ ಬಾಕ್ಸರ್‌ ಎಂಬ ಹೆಗ್ಗಳಿಕೆ ಅವರದ್ದಾಗಿದೆ.

2016ರ ವಿಶ್ವ ಚಾಂಪಿಯನ್‌ಷಿಪ್‌, 2014ರ ಗ್ಲಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿಯೂ ಅವರು ಚಿನ್ನದ ಪದಕ ಗಳಿಸಿದ್ದರು. ತಮ್ಮ ನಗುಮುಖದ ಕಾರಣ ಅವರು ‘ಬೇಬಿಫೇಸ್‌’ ಎಂದೇ ಖ್ಯಾತರಾಗಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಭಾರತದ ಮೇರಿ ಕೋಮ್ ಅವರನ್ನೂ ಮಣಿಸಿದ್ದರು.

ಪ್ರತಿಕ್ರಿಯಿಸಿ (+)