ಮಹಿಳಾ ಹಾಕಿ: ಸರಣಿ ಜಯಿಸಿದ ಭಾರತ

ಶುಕ್ರವಾರ, ಏಪ್ರಿಲ್ 26, 2019
35 °C
ಐದು ಪಂದ್ಯಗಳ ದ್ವಿಪಕ್ಷೀಯ ಮಹಿಳಾ ಹಾಕಿ: ಮಲೇಷ್ಯಾಕ್ಕೆ ನಿರಾಸೆ

ಮಹಿಳಾ ಹಾಕಿ: ಸರಣಿ ಜಯಿಸಿದ ಭಾರತ

Published:
Updated:
Prajavani

ಕ್ವಾಲಾಲಂಪುರ: ನವಜೋತ್‌ ಕೌರ್‌ ಕೈಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಗುರುವಾರದ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ 4–0ರಿಂದ ದ್ವಿಪಕ್ಷೀಯ ಸರಣಿ ಕೈವಶ ಮಾಡಿಕೊಂಡಿದೆ.

ಅಂತಿಮ ಪೈಪೋಟಿಯಲ್ಲಿ ಭಾರತ 1–0 ಗೋಲಿನಿಂದ ಆತಿಥೇಯ ಮಲೇಷ್ಯಾವನ್ನು ಮಣಿಸಿತು.

ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 3–0 ಮತ್ತು 5–0 ಗೋಲುಗಳಿಂದ ಆತಿಥೇಯರನ್ನು ಮಣಿಸಿದ್ದ ಭಾರತ, ಮೂರನೇ ಹೋರಾಟದಲ್ಲಿ 4–4 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ಪಡೆ 1–0 ಗೋಲಿನಿಂದ ಎದುರಾಳಿಗಳನ್ನು ಸೋಲಿಸಿತ್ತು.

ಹಿಂದಿನ ಗೆಲುವುಗಳಿಂದ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದ ಭಾರತಕ್ಕೆ ಅಂತಿಮ ಹಣಾಹಣಿಯ ಆರಂಭದಲ್ಲಿ ಮಲೇಷ್ಯಾ ತಂಡ ಪ್ರಬಲ ಪೈಪೋಟಿ ಒಡ್ಡಿತು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿತ್ತು.

ಆದರೆ ವಿರಾಮದ ನಂತರ ಭಾರತದ ವನಿತೆಯರು ಆಕ್ರಮಣಕಾರಿ ಆಟಕ್ಕೆ ಮುಂದಾದರು. 35ನೇ ನಿಮಿಷದಲ್ಲಿ ತಂಡಕ್ಕೆ ಯಶಸ್ಸು ಸಿಕ್ಕಿತು. ನವಜೋತ್ ಕೌರ್‌, ಫೀಲ್ಡ್‌ ಗೋಲು ಗಳಿಸಿ ಸಂಭ್ರಮಿಸಿದರು.

ನಂತರವೂ ಭಾರತ ಪರಿಣಾಮಕಾರಿ ಆಟ ಆಡಿ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ತಂಡಕ್ಕೆ ಆಗಲಿಲ್ಲ.

‘ಅಂತಿಮ ಪಂದ್ಯದಲ್ಲಿ ನಮ್ಮ ಆಟಗಾರ್ತಿಯರು ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದರು. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ಹೀಗಾಗಿ ದೊಡ್ಡ ಅಂತರದ ಗೆಲುವಿನ ಕನಸು ಸಾಕಾರವಾಗಲಿಲ್ಲ. ಸರಣಿ ಗೆದ್ದಿದ್ದು ಖುಷಿ ನೀಡಿದೆ. ಇದರಿಂದ ಆಟಗಾರ್ತಿಯರ ಮನೋಬಲವೂ ಹೆಚ್ಚಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ತಿಳಿಸಿದರು.

‘ಮಲೇಷ್ಯಾದಂತಹ ಬಲಿಷ್ಠ ತಂಡದ ಎದುರು ಹೇಗೆ ಆಡಬೇಕು ಎಂಬುದನ್ನು ಈ ಸರಣಿಯಿಂದ ಕಲಿತಿದ್ದೇವೆ. ಯುವ ಆಟಗಾರ್ತಿಯರು ಈ ಸರಣಿಯಿಂದ ಹೊಸ ವಿಷಯ‌ಗಳನ್ನು ಕಲಿತಿದ್ದಾರೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !