ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ಜೊತೆ ಡ್ರಾ ಸಾಧಿಸಿದ ಭಾರತ

Last Updated 21 ಜುಲೈ 2018, 20:19 IST
ಅಕ್ಷರ ಗಾತ್ರ

ಲಂಡನ್‌ : ಅಮೋಘ ಆಟದ ಮೂಲಕ ಆತಿಥೇಯರನ್ನು ನಿಯಂತ್ರಿಸಿದ ಭಾರತದ ಮಹಿಳೆಯರು ಕೊನೆಯಲ್ಲಿ ಎಡವಟ್ಟು ಮಾಡಿದರು. ಹೀಗಾಗಿ ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿಯ ಮೊದಲ ಪಂದ್ಯ 1–1ರಿಂದ ಡ್ರಾದಲ್ಲಿ ಕೊನೆಗೊಂಡಿತು.

ಇಲ್ಲಿ ಶನಿವಾರ ನಡೆದ ’ಬಿ’ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಆರಂಭದಲ್ಲೇ ಒತ್ತಡವಿಲ್ಲದೆ ಆಡಿದರು. ಹೀಗಾಗಿ ಎದುರಾಳಿಗಳ ಮುನ್ನಡೆಯನ್ನು ತಡೆಯುವಲ್ಲಿ ಯಶಸ್ವಿಯಾದರು. 25ನೇ ನಿಮಿಷದಲ್ಲಿ ನೇಹಾ ಗೋಯೆಲ್‌ ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆ ಸಾಧಿಸಿತು. ಆದರೆ ಲಿಲ್ಲಿ ಓಸ್ಲಿ 53ನೇ ನಿಮಿಷದಲ್ಲಿ ಗಳಿಸಿದ ಗೋಲು ಭಾರತದ ಕನಸನ್ನು ನುಚ್ಚುನೂರುಗೊಳಿಸಿತು.

ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕದ ಪಂದ್ಯದಲ್ಲಿ 0–6ರಿಂದ ಇಂಗ್ಲೆಂಡ್‌ಗೆ ಮಣಿದಿತ್ತು. ಹೀಗಾಗಿ ಇಲ್ಲಿಯೂ ರಾಣಿ ರಾಂಪಾಲ್ ಬಳಗ ಆತಿಥೇಯರಿಗೆ ಸುಲಭ ತುತ್ತಾಗುವರು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಭಾರತದ ಅಪ್ರತಿಮ ಆಟಕ್ಕೆ ಬೆದರಿದ ಇಂಗ್ಲೆಂಡ್‌ ನಿರಾಸೆಗೆ ಒಳಗಾಯಿತು. ಈ ಸಂದರ್ಭದಲ್ಲಿ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಭಾರತಕ್ಕೆ ಸಾಧ್ಯ ಆಗಲಿಲ್ಲ. ಗೋಲ್‌ ಕೀಪರ್ ಸವಿತಾ ಪೂನಿಯಾ ನಿರಂತರವಾಗಿ ಮಿಂಚಿನ ಆಟವಾಡಿ ಹಾಕಿ ಪ್ರಿಯರ ಮನಸೂರೆಗೊಂಡರು.

ಇಂಗ್ಲೆಂಡ್‌ಗೆ 32ನೇ ಸೆಕೆಂಡಿನಲ್ಲಿ ಮೊದಲ ಪೆನಾಲ್ಟಿ ಅವಕಾಶ ಲಭಿಸಿತ್ತು. ಎಂಟನೇ ನಿಮಿಷದಲ್ಲಿ ಮತ್ತೊಂದು ಅವಕಾಶ ದೊರಕಿತು. ಇವುಗಳನ್ನು ರಕ್ಷಣಾ ವಿಭಾಗದವರು ತಡೆದರೆ, ಎರಡನೇ ಕ್ವಾರ್ಟರ್‌ನಲ್ಲಿ ಲಭಿಸಿದ ಎರಡು ಪೆನಾಲ್ಟಿ ಅವಕಾಶಗಳಿಗೆ ಸವಿತಾ ಪೂನಿಯಾ ತಡೆಗೋಡೆಗೋಡೆಯಾದರು.

ಎರಡನೇ ಕ್ವಾರ್ಟರ್‌ನ ಕೊನೆಯಲ್ಲಿ ಭಾರತ ಆಕ್ರಮಣಕ್ಕೂ ಒತ್ತು ನೀಡಿದರು. ಇದರ ಪರಿಣಾಮ ತಂಡಕ್ಕೆ ಗೋಲು ಕಾಣಿಕೆಯಾಗಿ ಸಿಕ್ಕಿತು.

ಮೈಮರೆತ ರಾಂಪಾಲ್ ಬಳಗ: ಕೊನೆಯ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ಗೆ ಮತ್ತೆ ಎರಡು ಪೆನಾಲ್ಟಿ ಅವಕಾಶಗಳು ಲಭಿಸಿದವು. 48ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಫಲ ಕಾಣಲು ಆಗಲಿಲ್ಲ. 53ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಕೂಡ ಭಾರತ ತಡೆದಿತ್ತು. ಆದರೆ ಚೆಂಡು ವಾಪಸ್ ಬಂದ ನಂತರ ಮೈಮರೆತತಂಡದ ಆಟಗಾರ್ತಿಯರನ್ನುವಂಚಿಸಿದ ಎದುರಾಳಿ ತಂಡದವರು ಚೆಂಡನ್ನು ಸುಲಭವಾಗಿ ಗುರಿ ಮುಟ್ಟಿಸಿದರು.

ನಮಿತಾ ಟೊ‍ಪ್ಪೊಗೆ ‘150’: ಭಾರತದ ನಮಿತಾ ಟೊಪ್ಪೊ ಶನಿವಾರ 150ನೇ ಅಂತರರಾಷ್ಟ್ರೀಯ ಪಂದ್ಯ ಆಡಿ ಗಮನ ಸೆಳೆದರು. ಒಡಿಶಾದಲ್ಲಿ ಜನಿಸಿದ, 23 ವರ್ಷದ ಟೊಪ್ಪೊ 2012ರಲ್ಲಿ ಡುಬ್ಲಿನ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಚಾಲೆಂಜ್‌–1 ಟೂರ್ನಿಯಲ್ಲಿ ಚೊಚ್ಚಲ ಪಂದ್ಯ ಆಡಿದ್ದರು.

ಟೊಪ್ಪೊ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT