ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪುರುಷ, ಮಹಿಳಾ, ಮಿಶ್ರ ತಂಡಗಳು ಕ್ವಾರ್ಟರ್‌ಫೈನಲ್‌ಗೆ

ವಿಶ್ವಕಪ್ ಮೊದಲ ಹಂತದ ಆರ್ಚರಿ ಟೂರ್ನಿ
Last Updated 21 ಏಪ್ರಿಲ್ 2021, 11:28 IST
ಅಕ್ಷರ ಗಾತ್ರ

ಗ್ವಾಟೆಮಾಲಾ ಸಿಟಿ: ಸುಮಾರು ಎರಡು ವರ್ಷಗಳ ನಂತರ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದ ಭಾರತದ ರಿಕರ್ವ್ ಆರ್ಚರಿ ಪಟುಗಳು ಅದ್ಭುತ ಸಾಮರ್ಥ್ಯ ತೋರಿದರು. ಇಲ್ಲಿ ಆರಂಭವಾದ ವಿಶ್ವಕಪ್ ಮೊದಲ ಹಂತದ ಟೂರ್ನಿಯಲ್ಲಿ ಪುರುಷ, ಮಹಿಳಾ ಹಾಗೂ ಮಿಶ್ರ ವಿಭಾಗದ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟವು.

ಅರ್ಹತಾ ಸುತ್ತಿನಲ್ಲಿ ದೀಪಿಕಾ ಕುಮಾರಿ ಹಾಗೂ ಅಂಕಿತಾ ಭಕತ್ ಅವರನ್ನೊಳಗೊಂಡ ತಂಡವು ಅಗ್ರಸ್ಥಾನವನ್ನೂ ಗಳಿಸಿತು. ಅತನು ದಾಸ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನವನ್ನು ಗಳಿಸಿ, ಪುರುಷರ ತಂಡವು ನೇರವಾಗಿ ಎಂಟರಘಟ್ಟ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಿಶ್ರ ತಂಡ ವಿಭಾಗದಲ್ಲಿ ಅತನು ಹಾಗೂ ದೀಪಿಕಾ ದಂಪತಿ ಕಣಕ್ಕಿಳಿದಿದ್ದಾರೆ.

2019ರ ಜುಲೈನಲ್ಲಿ ಬರ್ಲಿನ್‌ನಲ್ಲಿ ನಡೆದ ವಿಶ್ವಕಪ್ ನಾಲ್ಕನೇ ಹಂತದ ಟೂರ್ನಿಯಲ್ಲಿ ಭಾರತದ ಬಿಲ್ಗಾರರು ಕೊನೆಯ ಬಾರಿ ಕಣಕ್ಕಿಳಿದಿದ್ದರು.

ಅತನು ಹಾಗೂ ದೀಪಿಕಾ ಜೊತೆಗೂಡಿ ಹಲವು ಅಂತರರಾಷ್ಟ್ರೀಯ ಪದಕಗಳನ್ನು ಮುಡಿಗೇರಿಸಿಕೊಂಡಿದ್ದು, ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದ್ದಾರೆ. ಮಹಿಳಾ ತಂಡವು ಎಂಟರಘಟ್ಟದಲ್ಲಿ ಆತಿಥೇಯ ಗ್ವಾಟೆಮಾಲಾ ಎದುರು ಸೆಣಸಲಿದ್ದು, ಪುರುಷರ ತಂಡಕ್ಕೆ, ಸ್ಪೇನ್‌ ಮತ್ತು ಗ್ವಾಟೆಮಾಲಾ ತಂಡಗಳ ನಡುವಣ ಪಂದ್ಯದ ವಿಜೇತರು ಎದುರಾಗಲಿದ್ದಾರೆ.

ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಪುರುಷರ ತಂಡವು ಈ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವ ಛಲದಲ್ಲಿದೆ.

ಮಹಿಳಾ ತಂಡ ವಿಭಾಗದಲ್ಲಿ ದೀಪಿಕಾ (673 ಪಾಯಿಂಟ್ಸ್) ಹಾಗೂ ಅಂಕಿತಾ (671) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರೆ, ಕೋಮಲಿಕಾ ಬಾರಿ (659) 12ನೇ ಸ್ಥಾನ ಗಳಿಸಿದರು. ಈ ವಿಭಾಗದ ಅರ್ಹತಾ ಸುತ್ತಿನಲ್ಲಿ ಮೆಕ್ಸಿಕೊ ತಂಡ ಎರಡನೇ ಸ್ಥಾನ ಗಳಿಸಿತು.

ಪುರುಷರ ತಂಡದ ಅರ್ಹತಾ ಸುತ್ತಿನಲ್ಲಿ ಅತನು (680 ಪಾಯಿಂಟ್ಸ್) ಅವರು ಅಮೆರಿಕದ ಬ್ರಾಡಿ ಎಲಿಸನ್‌ ಅವರಿಗಿಂತ 14 ಪಾಯಿಂಟ್ಸ್ ಹಿಂದೆ ಬಿದ್ದು ಎರಡನೇ ಸ್ಥಾನ ಗಳಿಸಿದರು. ಪ್ರವೀಣ್ ಜಾಧವ್‌ (15ನೇ ಸ್ಥಾನ), ಬಿ.ಧೀರಜ್ (20ನೇ ಸ್ಥಾನ) ಹಾಗೂ ತರುಣದೀಪ್ ರಾಯ್‌ (22ನೇ ಸ್ಥಾನ) ತಂಡದಲ್ಲಿದ್ದ ಇನ್ನುಳಿದ ಬಿಲ್ಗಾರರು.

ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ಅವರಿದ್ದ ಕಾಂಪೌಂಡ್‌ ತಂಡವು ಟೂರ್ನಿಯಿಂದ ಹಿಂದೆ ಸರಿದಿದೆ. ತಂಡದ ಕೋಚ್‌ ಗೌರವ್ ಶರ್ಮಾ ಅವರಿಗೆ ಕೋವಿಡ್ ಖಚಿತಪಟ್ಟಿದ್ದರಿಂದ ರಾಷ್ಟ್ರೀಯ ಫೆಡರೇಷನ್ ಈ ತಂಡವನ್ನು ಹಿಂದೆ ಸರಿಸುವ ನಿರ್ಧಾರ ತಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT