ಶನಿವಾರ, ಜುಲೈ 31, 2021
27 °C

ಫ್ಲಾಯ್ಡ್‌ ಸಾವಿಗೆ ಮಿಡಿದ ಕ್ರೀಡಾಲೋಕ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದಲ್ಲಿ ಹತ್ಯೆಯಾದ ಆಫ್ರೊ–ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಬಗ್ಗೆ ಕ್ರೀಡಾಲೋಕ ಮಿಡಿದಿದೆ.

ಗಾಲ್ಫ್‌ ತಾರೆ ಟೈಗರ್‌ ವುಡ್ಸ್, ಟೆನಿಸ್‌ ಆಟಗಾರ್ತಿ ನವೊಮಿ ಒಸಾಕಾ, ಕ್ರಿಕೆಟಿಗರಾದ ಕ್ರಿಸ್‌ ಗೇಲ್‌, ಕುಮಾರ ಸಂಗಕ್ಕಾರ, ವೃತ್ತಿಪರ ಬಾಕ್ಸರ್‌ ಫ್ಲಾಯ್ಡ್‌ ಮೇವೆದರ್‌ ಈ ಕುರಿತು ಧ್ವನಿಯೆತ್ತಿದ್ದಾರೆ.

ಮೇ 25ರಂದು ಫ್ಲಾಯ್ಡ್‌ ಸಾವು ಸಂಭವಿಸಿತ್ತು. ಅಸುನೀಗುವ ಮೊದಲು ಬಿಳಿಯ ಪೊಲೀಸನೊಬ್ಬ ಆತನ ಕುತ್ತಿಗೆಯನ್ನು ಕೆಲ ನಿಮಿಷಗಳ ಕಾಲ ತನ್ನ ಮೊಣಕಾಲಿನಿಂದ ಒತ್ತಿ ಹಿಡಿದಿಟ್ಟಿದ್ದ ದೃಶ್ಯ ವಿಡಿಯೊದಲ್ಲಿ ಪ್ರಸಾರವಾಗಿತ್ತು. ಫ್ಲಾಯ್ಡ್‌ ‘ನನಗೆ ಉಸಿರುಗಟ್ಟುತ್ತಿದೆ’ ಎಂದು ಕ್ಷೀಣವಾಗಿ ಅಂಗಲಾಚಿದ್ದರೂ ಬಿಟ್ಟಿರಲಿಲ್ಲ.

ಈ ಪ್ರಕರಣ ಖಂಡಿಸಿ ಮಿನಿಯಾಪೊಲಿಸ್‌ನಲ್ಲಿ ಆರಂಭವಾದ ಪ್ರತಿಭಟನೆ ಅಮೆರಿದ ಎಲ್ಲೆಡೆ ಹಬ್ಬಿತ್ತು.

ಸೋಮವಾರ ಟ್ವಿಟರ್‌ನಲ್ಲಿ ವುಡ್ಸ್‌ ತಮ್ಮ ನೋವನ್ನು ದಾಖಲಿಸಿದ್ದಾರೆ. ‘ನನಗೆ ಕಾನೂನು ರಕ್ಷಕರ ಬಗ್ಗೆ ಅತೀವ ಗೌರವವಿದೆ. ಯಾವಾಗ, ಹೇಗೆ ಬಲಪ್ರಯೋಗ ಮಾಡಬೇಕೆನ್ನುವುದರ ಬಗ್ಗೆ ಅವರಿಗೆ ಎಚ್ಚರಿಕೆಯಿಂದ ತರಬೇತಿ ನೀಡಲಾಗುತ್ತದೆ. ಆದರೆ ಈ ಆಘಾತಕಾರಿ ಪ್ರಕರಣದಲ್ಲಿ ಆ ರೇಖೆಯನ್ನು ದಾಟಲಾಗಿದೆ’ ಎಂದಿದ್ದಾರೆ ವುಡ್ಸ್‌.

ಒಸಾಕಾ ಬೇಸರ (ಟೋಕಿಯೊ/ ರಾಯಿಟರ್ಸ್‌ ವರದಿ): ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕಾ, ಫ್ಲಾಯ್ಡ್‌ ಸಾವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಸಾವಿಗಿಂತ ಹೆಚ್ಚಾಗಿ, ಲೂಟಿಯ ಬಗ್ಗೆ ಟ್ವೀಟ್‌ ಮಾಡುತ್ತಿರುವುದನ್ನು ಅವರು ಟೀಕಿಸಿದ್ದಾರೆ.

ಫ್ಲಾಯ್ಡ್‌ ಸಾವಿನ ಸುದ್ದಿಯ ಪೋಸ್ಟ್‌ ಜೊತೆಗೆ ‘ಮೌನವಾಗಿರುವುದು ದ್ರೋಹ’ ಎನ್ನುವ ಕಾಲವೀಗ ಬಂದಿದೆ ಎಂದು ಟ್ವಿಟರ್‌ ಖಾತೆಯಲ್ಲಿ ನವೊಮಿ ದಾಖಲಿಸಿದ್ದಾರೆ.

ತಾರತಮ್ಯ ತೊಡೆಯುವ ಸಂಸ್ಕೃತಿ ಬೇಕು: ಕುಮಾರ ಸಂಗಕ್ಕಾರ
ಕೊಲಂಬೊ (ಪಿಟಿಐ):
ಜನಾಂಗೀಯ ದ್ವೇಷ ಮತ್ತು ಅನ್ಯಾಯದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ನಾಗರಿಕ ಸಮಾಜಕ್ಕೆ ದೊಡ್ಡ ಪಾಠವಾಗಬೇಕು. ಸಹನಾಗರಿಕರ ಬಗ್ಗೆ ಉಡಾಫೆ ಮತ್ತು ಪೂರ್ವಗ್ರಹಗಳನ್ನು ತೊಡೆದುಹಾಕುವ ಸಂಸ್ಕೃತಿ ಬೆಳೆಯಬೇಕು ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕುಮಾರ ಸಂಗಕ್ಕಾರ ಹೇಳಿದ್ಧಾರೆ.

ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್‌ ಹತ್ಯೆಯನ್ನು ಖಂಡಿಸಿರುವ ಅವರು, ‘ನಾವು ಸಾಮಾನ್ಯ ನಾಗರಿಕರು. ಆದರೆ, ಅನ್ಯಾಯದ ವಿರುದ್ಧ ಒಗ್ಗಟ್ಟಾದರೆ ಅದ್ಭುತ ಬದಲಾವಣೆಯನ್ನು ತರಬಹುದು. ವಿಶ್ವ ಸಂಸ್ಕೃತಿಯನ್ನು ಹುಟ್ಟು ಹಾಕಬೇಕು’ ಎಂದಿದ್ದಾರೆ.

‘ಜನಾಂಗೀಯ ನಿಂದನೆಯಿಂದ ಕ್ರಿಕೆಟ್‌ ಹೊರತಾಗಿಲ್ಲ’
ನವದೆಹಲಿ (ಪಿಟಿಐ):
‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ವೆಸ್ಟ್‌ ಇಂಡೀಸ್‌ನ ಹಿರಿಯ ಆಟಗಾರ ಕ್ರಿಸ್‌ ಗೇಲ್‌, ತಮ್ಮ ವೃತ್ತಿಜೀವನದಲ್ಲಿ ಜನಾಂಗೀಯ ನಿಂದನೆಯ ಮಾತುಗಳನ್ನು ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್‌ ಕೂಡ ಇಂಥ ಪಿಡುಗಿನಿಂದ ಮುಕ್ತವಾಗಿಲ್ಲ ಎಂದೂ ದೂರಿದ್ದಾರೆ. ಆದರೆ ತಾವು ಅನುಭವಿಸಿದ ನಿರ್ದಿಷ್ಟ ಪ್ರಕರಣದ ಬಗ್ಗೆ ಗೇಲ್‌ ಉಲ್ಲೇಖಿಸಿಲ್ಲ. ಆದರೆ ಇದು ವಿಶ್ವದ ವಿವಿಧೆಡೆ ನಡೆಯುವ ಟಿ–20 ಲೀಗ್‌ ವೇಳೆ ಇರಬಹುದೆಂಬ ಸುಳಿವು ನೀಡಿದ್ದಾರೆ.

‘ನಾನು ಜಗತ್ತನ್ನೆಲ್ಲ ಸುತ್ತಾಡಿದ್ದೇನೆ. ನನಗೆ ಇಂಥ ನಿಂದೆಯ ಮಾತುಗಳ ಅನುಭವವಾಗಿದೆ. ಏಕೆಂದರೆ ನಾನು ಕಪ್ಪು ವರ್ಣದವನು’ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಫುಟ್‌ಬಾಲ್‌ನಲ್ಲಷ್ಟೇ ಅಲ್ಲ, ಕ್ರಿಕೆಟ್‌ನಲ್ಲೂ ಜನಾಂಗೀಯ ಭೇದವಿದೆ. ತಂಡಗಳ ಒಳಗೆ ಕೂಡ ಇಂಥದ್ದು ನಡೆಯುತ್ತದೆ. ನನ್ನ ಬಣ್ಣದ ಕಾರಣ ಇದರ ಅನುಭವವಾಗಿದೆ’ ಎಂದಿದ್ದಾರೆ.

ಫ್ಲಾಯ್ಡ್‌ ಅವರ ಸಾವಿನ ಹಿನ್ನೆಲೆಯಲ್ಲಿ ಗೇಲ್‌ ಅವರ ಹೇಳಿಕೆ ಮಹತ್ವ ಪಡೆದಿದೆ.

‘ಬೇರೆಯವರ ಜೀವಕ್ಕೆ ಇರುವಂತೆ ಕಪ್ಪು ಬಣ್ಣದವರ ಜೀವಕ್ಕೂ ಬೆಲೆಯಿದೆ’ ಎಂದೂ ಹೇಳಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಕಳೆದ ವರ್ಷವಷ್ಟೇ, ಇಂಗ್ಲೆಂಡ್‌ ವೇಗಿ ಜೋಫ್ರಾ ಅರ್ಚರ್ ಅವರನ್ನು  ನ್ಯೂಜಿಲೆಂಡ್‌ ಪ್ರೇಕ್ಷಕನೊಬ್ಬ ನಿಂದಿಸಿದ್ದ. ಇದಕ್ಕಾಗಿ ಕಿವೀಸ್‌ ಪ್ರಮುಖ ಆಟಗಾರರು ಮತ್ತು ಕ್ರಿಕೆಟ್‌ ಮಂಡಳಿಯೇ ಜೋಫ್ರಾ ಅವರ ಕ್ಷಮೆ ಯಾಚಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು