ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್‌: ತೇಜಿಂದರ್‌, ಜಿನ್ಸನ್‌ಗೆ ನಿರಾಸೆ

ಎಂಟು ಚಿನ್ನ ಗಳಿಸಿದ ಅಮೆರಿಕ ಅಗ್ರಸ್ಥಾನದಲ್ಲಿ
Last Updated 4 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ದೋಹಾ: ಭಾರತದ ಶಾಟ್‌ಪಟ್‌ ಸ್ಪರ್ಧಿ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ಮತ್ತು 1,500 ಮೀಟರ್ಸ್‌ ಓಟಗಾರ ಜಿನ್ಸನ್‌ ಜಾನ್ಸನ್‌ ಅವರು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ನಲ್ಲಿ ಗುರುವಾರ ತಮ್ಮ ತಮ್ಮ ಸ್ಪರ್ಧೆಗಳ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ಇವರಿಬ್ಬರೂ ಏಷ್ಯನ್‌ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದು ಕೊಂಡಿದ್ದರು.

24 ವರ್ಷ ವಯಸ್ಸಿನ ತೂರ್‌, ಈ ವರ್ಷದ ಉತ್ತಮ ಸಾಧನೆಯಾಗಿ ಗುಂಡನ್ನು 20.43 ಮೀಟರ್‌ ದೂರ ಎಸೆದರೂ ‘ಬಿ’ ಗುಂಪಿನ ಕ್ವಾಲಿಫಿಕೇಷನ್‌ ಹಂತದಲ್ಲಿ ಎಂಟನೇ ಸ್ಥಾನ ಪಡೆದರು. ‘ಎ’ ಗುಂಪಿನ ಎಂಟೂ ಮಂದಿ ಸ್ಪರ್ಧಿಗಳು ಅರ್ಹತಾ ಮಟ್ಟವಾದ 20.90 ಮೀ. ದೂರ ಸಾಧಿಸಿದ ಕಾರಣ ಭಾರತದ ಸ್ಪರ್ಧಿಯ ಹಾದಿ ಕಠಿಣವಾಗಿತ್ತು. ಅವರು ಅರ್ಹತಾ ಸುತ್ತಿನಲ್ಲಿದ್ದ ಒಟ್ಟಾರೆ 34 ಸ್ಪರ್ಧಿಗಳಲ್ಲಿ 18ನೇ ಸ್ಥಾನ ಪಡೆದರು. ತೂರ್‌ ಹೆಸರಿನಲ್ಲೇ ರಾಷ್ಟ್ರೀಯ ದಾಖಲೆ (20.75 ಮೀ.) ಇದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ನ್ಯೂಜಿಲೆಂಡ್‌ನ ಟೊಮಾಸ್‌ ವಾಲ್ಶ್‌ 21.92 ಮೀ. ಸಾಧನೆಯೊಡನೆ ಮೊದಲ ಸ್ಥಾನದಲ್ಲಿ ಫೈನಲ್‌ಗೆ ಮುನ್ನಡೆದರು.

28 ವರ್ಷದ ಜಿನ್ಸನ್‌ ಮೊದಲ ಸುತ್ತಿನ ಹೀಟ್ಸ್‌ನಲ್ಲಿ 3ನಿ.39.86 ಸೆ.ಗಳ ಕಾಲಾವಧಿಯೊಡನೆ 10ನೇ ಸ್ಥಾನದಲ್ಲಿ ಮುಗಿಸಿದರು. ಅವರು ಒಟ್ಟಾರೆ 43 ಓಟಗಾರರಲ್ಲಿ 34ನೇ ಸ್ಥಾನ ಪಡೆದರು. ಕಳೆದ ತಿಂಗಳಷ್ಟೇ ಜಿನ್ಸನ್‌ ಅವರು 3ನಿ.35.24 ಸೆ.ಗಳಲ್ಲಿ ಓಡಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿದ್ದರು.

ಅಮೆರಿಕ ಮುನ್ನಡೆ:ವಿಶ್ವ ಚಾಂಪಿಯ ನ್‌ಷಿಪ್‌ನ ಏಳನೇ ದಿನದ (ಗುರುವಾರ) ನಂತರ ಅಮೆರಿಕ ಎಂಟು ಚಿನ್ನ, ಎಂಟು ಬೆಳ್ಳಿ, ಎರಡು ಕಂಚಿನ ಪದಕಗಳೊಡನೆ ಅಗ್ರಸ್ಥಾನದಲ್ಲಿತ್ತು. ಚೀನಾ ಎರಡನೇ (3 ಚಿನ್ನ, 3ಬೆಳ್ಳಿ, 3 ಕಂಚು) ಸ್ಥಾನದಲ್ಲಿತ್ತು. ಜಮೈಕಾ (2–3–1) ಮೂರನೇ ಸ್ಥಾನದಲ್ಲಿದೆ.

ಹೆಪ್ಟಥ್ಲಾನ್‌: ಬ್ರಿಟನ್‌ನ ಕ್ಯಾಥರಿನಾಗೆ ಚಿನ್ನ

ಗುರುವಾರ ಮುಗಿದ ಹೆಪ್ಟಥ್ಲಾನ್‌ ಸ್ಪರ್ಧೆಯಲ್ಲಿ ಕ್ಯಾಥರಿನಾ ಜಾನ್ಸನ್‌ ಥಾಮ್ಸನ್‌ ಚಿನ್ನದ ಪದಕ ಗೆದ್ದುಕೊಂಡರು. ಇದು ಅವರಿಗೆ ವಿಶ್ವ ಮಟ್ಟದಲ್ಲಿ ಮೊದಲ ಹೊರಾಂಗಣ ಪ್ರಶಸ್ತಿ.

26 ವರ್ಷದ ಕ್ಯಾಥರಿನಾ ಚಿನ್ನದ ಹಾದಿಯಲ್ಲಿ 6,981 ಪಾಯಿಂಟ್ಸ್‌ ಸಂಗ್ರಹಿಸಿದರು. ಇದು ಬ್ರಿಟನ್‌ನ ನೂತನ ದಾಖಲೆಯೂ ಹೌದು. 2017ರ ಚಾಂಪಿಯನ್‌ ನಫಿಸಾತೌ ಥಿಯಾಮ್‌ ಅವರನ್ನು 304 ಪಾಯಿಂಟ್‌ಗಳಿಂದ ಹಿಂದಿಕ್ಕಿದರು. ಆಸ್ಟ್ರಿಯಾದ ವೆರೆನಾ ಪ್ರೀನ್‌ ಮೂರನೇ ಸ್ಥಾನ ಪಡೆದರು.

ಇದು ಬ್ರಿಟನ್‌ಗೆ ಈ ಕೂಟದಲ್ಲಿ ಮೂರನೇ ಪದಕ ಎನಿಸಿತು. ಡೀನಾ ಆಶರ್‌ ಸ್ಮಿತ್ (200 ಮೀ. ಓಟದಲ್ಲಿ ಚಿನ್ನ ಮತ್ತು 100 ಮೀ. ಓಟದಲ್ಲಿ ಬೆಳ್ಳಿ) ಬ್ರಿಟನ್‌ನ ಇನ್ನೆರಡು ಪದಕಗಳನ್ನು ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT