ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬಾಕ್ಸಿಂಗ್‌: ಏಕ್ತರಿನಾ ಪಂಚ್‌ಗೆ ಕರಗಿದ ‘ಮಂಜು’

ಬೆಳ್ಳಿಗೆ ತೃಪ್ತಿಪಟ್ಟ ಭಾರತದ ಬಾಕ್ಸರ್‌
Last Updated 13 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಉಲನ್‌ ಉಡೆ, ರಷ್ಯಾ: ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಭಾರತದ ಮಂಜು ರಾಣಿ ಅವರ ಕನಸು ಭಾನುವಾರ ಕಮರಿತು.

48 ಕೆ.ಜಿ.ವಿಭಾಗದ ಫ್ಲೈವೇಟ್‌ ಸ್ಪರ್ಧೆಯ ಫೈನಲ್‌ನಲ್ಲಿ 1–4 ಪಾಯಿಂಟ್ಸ್‌ನಿಂದ ರಷ್ಯಾದ ಏಕ್ತರಿನಾ ಪಲ್ಟಸೆವ ಎದುರು ಸೋತ ಮಂಜು, ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು.

ಶನಿವಾರ 20ರ ಹರೆಯಕ್ಕೆ ಕಾಲಿಟ್ಟಿದ್ದ ಮಂಜು, ಮೊದಲ ಸುತ್ತಿನಲ್ಲಿ ಆಕ್ರಮಣಕಾರಿಯಾಗಿ ಆಡಿದರು. ಚಾಂಪಿಯನ್‌ ಷಿಪ್‌ನಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಏಕ್ತರಿನಾ ಕೂಡ ವೇಗದ ಪಂಚ್‌ಗಳ ಮೂಲಕ ಗಮನ ಸೆಳೆದರು. ಎದುರಾಳಿಯು ಎಡಗೈಯಿಂದ ಮಾಡಿದ ನಿಖರ ಹುಕ್‌ಗಳಿಗೆ ಭಾರತದ ಬಾಕ್ಸರ್‌ ನಿರುತ್ತರರಾದರು.

ಎರಡನೇ ಸುತ್ತಿನಲ್ಲಿ ಮಂಜು, ಎದುರಾಳಿಯ ಮೇಲೆ ಪ್ರಹಾರ ನಡೆಸಿದರು. ನೇರ ಮತ್ತು ರಭಸದ ಪಂಚ್‌ಗಳ ಮೂಲಕ ಏಕ್ತರಿನಾ ಅವರನ್ನು ತಬ್ಬಿಬ್ಬುಗೊಳಿಸಲು ಪ್ರಯತ್ನಿಸಿದರು.

ಕೊನೆಯ ಮೂರು ನಿಮಿಷಗಳಲ್ಲಿ ಏಕ್ತರಿನಾ ಅಬ್ಬರಿಸಿದರು. ಪಾದರಸದಂತಹ ಚಲನೆ ಮತ್ತು ಶರವೇಗದ ಪಂಚ್‌ಗಳ ಮೂಲಕ ಭಾರತದ ಬಾಕ್ಸರ್‌ನನ್ನು ಹೈರಾಣಾಗಿಸಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT