ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಭಾರತ ಲಗ್ಗೆ

ಮೊದಲ ಗೋಲು ಗಳಿಸಿದ ಹರ್ಮನ್‌ಪ್ರೀತ್: ಕೊನೆಯ ಕ್ವಾರ್ಟರ್‌ನಲ್ಲಿ ನಾಲ್ಕು ಗೋಲುಗಳು
Last Updated 8 ಡಿಸೆಂಬರ್ 2018, 17:13 IST
ಅಕ್ಷರ ಗಾತ್ರ

ಭುವನೇಶ್ವರ: ಕೆನಡಾ ತಂಡದ ಪ್ರಬಲ ಪೈಪೋಟಿಯನ್ನು ಮೀರಿ ನಿಂತ ಭಾರತ ವಿಶ್ವಕಪ್ ಹಾಕಿ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಈ ಮೂಲಕ ‘ಸಿ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆನಡಾವನ್ನು ಭಾರತ 5–1ರಿಂದ ಮಣಿಸಿತು.

ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳು ಸಮಬಲದಿಂದ ಕಾದಾಡಿದ್ದವು. ಕೊನೆಯ ಕ್ವಾರ್ಟರ್‌ನಲ್ಲಿ ಗಳಿಸಿದ ನಾಲ್ಕು ಗೋಲುಗಳು ಭಾರತದ ಜಯಕ್ಕೆ ಕಾರಣವಾದವು.

ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಕೆನಡಾ ಈ ಹಿಂದೆ ನಾಲ್ಕು ಬಾರಿ ಮುಖಾಮುಖಿಯಾಗಿದ್ದವು. ಉಭಯ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದವು.

ಆದರೆ 2013ರಿಂದ ಈಚೆಗೆ ನಡೆದಿದ್ದ ಒಟ್ಟು ಐದು ಪಂದ್ಯಗಳಲ್ಲಿ ಭಾರತ ಮೂರನ್ನು ಗೆದ್ದು ಪ್ರಾಬಲ್ಯ ಮೆರೆದಿತ್ತು.

ಈ ಲೆಕ್ಕಾಚಾರ ಭಾರತ ಪಾಳಯದಲ್ಲಿ ಉತ್ಸಾಹ ಮೂಡಿಸಿತ್ತು. ಹೀಗಾಗಿ ಆರಂಭದಲ್ಲೇ ಆಕ್ರಮಣಕ್ಕೆ ಮುಂದಾಯಿತು.

ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಭಾರತಕ್ಕೆ 11ನೇ ಸ್ಥಾನದಲ್ಲಿರುವ ಕೆನಡಾ ಭಾರಿ ಪ್ರತಿರೋಧ ಒಡ್ಡಿತು.

ಮೊದಲ ಕ್ವಾರ್ಟರ್‌ನಲ್ಲಿ ಒಂಬತ್ತು ಬಾರಿ ಎದುರಾಳಿಗಳ ಆವರಣಕ್ಕೆ ನುಗ್ಗಿದ ಭಾರತಕ್ಕೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದ್ದವು.

12ನೇ ನಿಮಿಷದಲ್ಲಿ ಲಭಿಸಿದ ಅವಕಾಶದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಗೋಲು ಗಳಿಸಿ ತಂಡದಲ್ಲಿ ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಪ್ರವಾಸಿ ತಂಡ ಭಾರತದ ಸವಾಲಿಗೆ ಪ್ರತಿ ಸವಾಲು ಹಾಕಿತು.

ತಿರುಗೇಟು ನೀಡಿದ ವ್ಯಾನ್ ಸೋನ್‌: ಮೂರನೇ ಕ್ವಾರ್ಟರ್‌ನಲ್ಲೂ ಸಮಬಲದ ಹೋರಾಟ ಕಂಡುಬಂತು. 39ನೇ ನಿಮಿಷದಲ್ಲಿ ಫ್ಲಾರಿಸ್ ವ್ಯಾನ್ ಸಾನ್‌ ಗಳಿಸಿದ ಗೋಲಿನ ಮೂಲಕ ಕೆನಡಾ ಸಮಬಲ ಸಾಧಿಸಿತು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ನೈಜ ಆಟವಾಡಿ ತವರಿನ ಪ್ರೇಕ್ಷಕರನ್ನು ರಂಜಿಸಿದರು. 46 ಮತ್ತು 47ನೇ ನಿಮಿಷಗಳಲ್ಲಿ ಕ್ರಮವಾಗಿ ಚಿಂಗ್ಲನ್ಸೇನಾ ಕಂಗುಜಮ್‌ ಮತ್ತು ಲಲಿತ್ ಉಪಾಧ್ಯಾಯ ಗಳಿಸಿದ ಗೋಲುಗಳ ಮೂಲಕ ಆತಿಥೇಯ ತಂಡ ಜಯದತ್ತ ಹೆಜ್ಜೆ ಹಾಕಿತು. 51ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಅಮಿತ್ ರೋಹಿದಾಸ್ ಚೆಂಡನ್ನು ಗುರಿ ಮುಟ್ಟಿಸಿ ಜಯದ ಅಂತರವನ್ನು ಹೆಚ್ಚಿಸಿದರು. ಪಂದ್ಯ ಮುಕ್ತಾಯಕ್ಕೆ ಮೂರು ನಿಮಿಷಗಳು ಬಾಕಿ ಇದ್ದಾಗ ಲಲಿತ್ ಉಪಾಧ್ಯಾಯ ತಮ್ಮ ಎರಡನೇ ಗೋಲು ಗಳಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT