ಗುರುವಾರ , ಡಿಸೆಂಬರ್ 12, 2019
26 °C
ಎಡ್ಡಿ ಒಕೆಂಡೆನ್‌ ಬಳಗಕ್ಕೆ ಸುಲಭ ತುತ್ತಾದ ಚೀನಾ

ವಿಶ್ವಕಪ್‌ ಹಾಕಿ: ಗೋಲಿನ ಮಳೆ ಸುರಿಸಿದ ಆಸ್ಟ್ರೇಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಭುವನೇಶ್ವರ: ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಶುಕ್ರವಾರ ಕಳಿಂಗ ಕ್ರೀಡಾಂಗಣದಲ್ಲಿ ಗೋಲಿನ ಮಳೆ ಸುರಿಸಿತು‌.

ಇದರೊಂದಿಗೆ ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸಿ ಸಂಭ್ರಮಿಸಿತು.

‘ಎ’ ಗುಂಪಿನ ಹಣಾಹಣಿಯಲ್ಲಿ ಎಡ್ಡಿ ಒಕೆಂಡೆನ್‌ ಬಳಗ 11–0 ಗೋಲುಗಳಿಂದ ಚೀನಾ ತಂಡವನ್ನು ಪರಾಭವಗೊಳಿಸಿತು.

ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದ ಡು ಚೆನ್‌ ಸಾರಥ್ಯದ ಚೀನಾ, ಹೀನಾಯ ಸೋಲಿನೊಂದಿಗೆ ಅಭಿಯಾನ ಮುಗಿಸಿತು.

ಟೂರ್ನಿಯಲ್ಲಿ ‘ಹ್ಯಾಟ್ರಿಕ್‌’ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ಚೀನಾದ ‘ಮಹಾ ಗೋಡೆ’ ಕೆಡವಲು ಮುಂದಾಯಿತು. 10ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಬ್ಲೇಕ್‌ ಗೋವರ್ಸ್‌ ಸದುಪಯೋಗಪಡಿಸಿಕೊಂಡರು. 15ನೇ ನಿಮಿಷದಲ್ಲಿ ಈ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭ್ಯವಾಯಿತು. ಈ ಅವಕಾಶದಲ್ಲಿ ಆ್ಯರನ್‌ ಜಲೇವ್‌ಸ್ಕಿ ಚೆಂಡನ್ನು ಗುರಿ ಮುಟ್ಟಿಸಿದರು. ಇದರ ಬೆನ್ನಲ್ಲೇ (16ನೇ ನಿ.) ಟಾಮ್‌ ಕ್ರೇಗ್‌, ಫೀಲ್ಡ್‌ ಗೋಲು ಬಾರಿಸಿ ಎಡ್ಡಿ ಪಡೆಗೆ 3–0 ಮುನ್ನಡೆ ತಂದುಕೊಟ್ಟರು.

ಇಷ್ಟಕ್ಕೆ ಆಸ್ಟ್ರೇಲಿಯಾ ತಂಡದ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. 19ನೇ ನಿಮಿಷದಲ್ಲಿ ಬ್ಲೇಕ್‌ ಗೋವರ್ಸ್‌ ಮತ್ತೊಮ್ಮೆ ಕೈಚಳಕ ತೋರಿದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮಿಂಚಿನ ಗತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ತಂಡದ ಸಂಭ್ರಮಕ್ಕೆ ಕಾರಣರಾದರು.

22ನೇ ನಿಮಿಷದಲ್ಲಿ ಜೆರೆಮಿ ಹೇವಾರ್ಡ್‌ ಮೋಡಿ ಮಾಡಿದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ತಂಡದ ಮುನ್ನಡೆಯನ್ನು 5–0ಗೆ ಹೆಚ್ಚಿಸಿದರು. 29 ನೇ ನಿಮಿಷದಲ್ಲಿ ಜೇಕ್‌ ವೆಟ್ಟನ್‌ ಫೀಲ್ಡ್ ಗೋಲು ಬಾರಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ದ್ವಿತೀಯಾರ್ಧದಲ್ಲೂ ಆಸ್ಟ್ರೇಲಿಯಾ ಆಟಗಾರರ ಅಬ್ಬರ ಮುಂದುವರಿಯಿತು. 33ನೇ ನಿಮಿಷದಲ್ಲಿ ಟಿಮ್‌ ಬ್ರಾಂಡ್‌ ಫೀಲ್ಡ್‌ ಗೋಲು ಬಾರಿಸಿದರು. ಮರು ನಿಮಿಷದಲ್ಲಿ ಬ್ಲೇಕ್‌ ಗೋವರ್ಸ್‌ ಚೆಂಡನ್ನು ಗುರಿ ತಲುಪಿಸಿದರು. ಈ ಮೂಲಕ ‘ಹ್ಯಾಟ್ರಿಕ್‌’ ಗೋಲು ದಾಖಲಿಸಿದ ಸಾಧನೆ ಮಾಡಿದರು.

38ನೇ ನಿಮಿಷದಲ್ಲಿ ಡೈಲಾನ್‌ ವಾದರ್‌ಸ್ಪೂನ್‌ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 9–0ಗೆ ಹೆಚ್ಚಿಸಿದರು. ಅಂತಿಮ ಕ್ವಾರ್ಟರ್‌ನಲ್ಲೂ ಎಡ್ಡಿ ಪಡೆ ಎದುರಾಳಿಗಳ ದುರ್ಬಲ ರಕ್ಷಣಾ ಕೋಟೆಯನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿತು. 49ನೇ ನಿಮಿಷದಲ್ಲಿ ಫ್ಲಿನ್‌ ಒಗಿಲ್‌ವೀ ಮತ್ತು 55ನೇ ನಿಮಿಷದಲ್ಲಿ ಟಿಮ್‌ ಬ್ರಾಂಡ್‌ ಅವರು ಫೀಲ್ಡ್‌ ಗೋಲು ಹೊಡೆದು ಅಭಿಮಾನಿಗಳ ಖುಷಿಗೆ ಕಾರಣರಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು