ಗುರುವಾರ , ಜೂನ್ 17, 2021
24 °C

ಆಂತರಿಕ ಕಲಹಕ್ಕೆ ಬಲಿಯಾದ ಭಾರತ ಕರಾಟೆ ಫೆಡರೇಷನ್ ಮಾನ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಕರಾಟೆ ಫೆಡರೇಷನ್‌ನ (ಡಬ್ಲ್ಯುಕೆಎಫ್‌) ನಿಯಮಗಳನ್ನು ಗಾಳಿಗೆ ತೂರಿ ಆಂತರಿಕ ಕಲಹದ ಮೂಲಕ ಪ್ರತಿಷ್ಠೆಗಾಗಿ ಚುನಾವಣೆ ನಡೆಸಿದ ಭಾರತ ಕರಾಟೆ ಸಂಸ್ಥೆಯ (ಕೆಎಐ) ಮಾನ್ಯತೆ ತಾತ್ಕಾಲಿಕವಾಗಿ ರದ್ದಾಗಿದೆ. ವಿಚಾರಣೆಯ ನಂತರ ಡಬ್ಲ್ಯುಕೆಎಫ್‌ ಈ ನಿರ್ಧಾರ ಕೈಗೊಂಡಿದ್ದು ‘ಶಿಕ್ಷೆ’ ತಕ್ಷಣ ಜಾರಿಗೆ ಬಂದಿದೆ. 

‘ಭಾರತ ಕರಾಟೆ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಶಿಸ್ತು ಉಲ್ಲಂಘನೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಜವಾಬ್ದಾರಿಯನ್ನು ಉನ್ನತ ಮಟ್ಟದ ಸಮಿತಿ ಸದಸ್ಯರಿಗೆ ವಹಿಸಲಾಗಿತ್ತು. ತನಿಖೆಯ ವರದಿ ಕೈಸೇರಿದ ನಂತರ ಡಬ್ಲ್ಯುಕೆಎಫ್ ಕಾರ್ಯಕಾರಿ ಸಮಿತಿಯು ಮಾನ್ಯತೆಯನ್ನು ವಾಪಸ್ ಪಡೆಯಲು ನಿರ್ಧರಿಸಿದೆ’ ಎಂದು ಕೆಎಐ ಅಧ್ಯಕ್ಷ ಹರಿಪ್ರಸಾದ್ ಪಟ್ನಾಯಕ್‌ ಅವರಿಗೆ ಬರೆದಿರುವ ಪತ್ರದಲ್ಲಿ ಡಬ್ಲ್ಯುಕೆಎಫ್ ಅಧ್ಯಕ್ಷ ಆ್ಯಂಟೊನಿಯೊ ಎಸ್ಪಿನೊಸ್ ತಿಳಿಸಿದ್ದಾರೆ.

‘ಕೆಎಐನಲ್ಲಿ ಆಂತರಿಕ ಕಲಹ ನಡೆಯುತ್ತಿರುವುದು ಬೇಸರದ ವಿಷಯ. ಈ ಸಂಘರ್ಷವು ಕಳೆದ ವರ್ಷದ ಜನವರಿಯಲ್ಲಿ ನಡೆದಿದ್ದ ಸಂಸ್ಥೆಯ ಚುನಾವಣೆಯಲ್ಲಿ ದೋಷ ತಲೆದೋರುವಂತೆ ಮಾಡಿತ್ತು. ಇದರಿಂದ ಸಂಸ್ಥೆಯು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅಕ್ರಮವಾಗಿ ನಡೆದ ಚುನಾವಣೆಯಲ್ಲಿ ಈಗಿನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ’ ಎಂದು ಲಿಖಾ ತಾರ ನೇತೃತ್ವದ ಒಂದು ಗುಂಪು ಆರೋಪಿಸಿದೆ. ‘ಕೆಲವರು ಸಂಸ್ಥೆಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದರೆ ಇನ್ನು ಕೆಲವರು ಉಪಾಧ್ಯಕ್ಷ ಭರತ್ ಶರ್ಮಾ ಅವರನ್ನು ಉಪಾಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಒತ್ತಾಯಿಸುತ್ತಿದೆ’ ಎಂದು ಅವರು ಆರೋಪಿಸಿದ್ದರು. 

‘ಸಂಸ್ಥೆಯ ಆಂತರಿಕ ಕಲಹವನ್ನು ಹೀಗೆಯೇ ಬಿಟ್ಟರೆ ಇನ್ನಷ್ಟು ಬೆಳೆಯುವ ಸಾಧ್ಯತೆ ಇದ್ದು ಹೊರಗಿನ ಶಕ್ತಿಗಳು ಅಧಿಕಾರ ಸ್ಥಾಪಿಸಲು ಪ್ರಯತ್ನಿಸುವ ಸಾಧ್ಯತೆ ಇದೆ’ ಎಂದು ಜೂನ್‌ 22ರಂದು ಬರೆದಿರುವ ಪತ್ರದಲ್ಲಿ ಡಬ್ಲ್ಯುಕೆಎಫ್‌ ಆತಂಕ ವ್ಯಕ್ತಪಡಿಸಿದೆ. ಮಾನ್ಯತೆ ರದ್ದತಿ ಪ್ರಶ್ನಿಸಿ ಶಿಸ್ತು ಮತ್ತು ನಿಯಮಗಳ ಆಯೋಗದ ಮುಂದೆ  21 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂದು ಅದು ತಿಳಿಸಿದೆ.

ನಿಯಮಾವಳಿಗಳನ್ನು ಮೀರಿ ವರ್ತಿಸಿದ್ದಕ್ಕಾಗಿ ಭಾರತ ಒಲಿಂಪಿಕ್ ಸಂಸ್ಥೆ ಕೆಎಐಯನ್ನು ಜನವರಿಯಲ್ಲಿ ಅಮಾನ್ಯಗೊಳಿಸಿತ್ತು. 2019ರ ಜನವರಿಯಲ್ಲಿ  ಭಾರತ ಒಲಿಂಪಿಕ್ ಸಂಸ್ಥೆಯ ಪ್ರತಿನಿಧಿಯ ಸಾನ್ನಿಧ್ಯವಿಲ್ಲದೇ ಚುನಾವಣೆ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು