ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಈಜು ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಸನ್‌ಗೆ ಮತ್ತೊಮ್ಮೆ ಮುಖಭಂಗ

Last Updated 23 ಜುಲೈ 2019, 19:38 IST
ಅಕ್ಷರ ಗಾತ್ರ

ಗ್ವಾಂಗ್ಜು, ದಕ್ಷಿಣ ಕೊರಿಯಾ: ಚೀನಾದ ಚಾಂಪಿಯನ್‌ ಈಜುಗಾರ ಸನ್‌ ಯಾಂಗ್‌, ಮಂಗಳವಾರ ವಿಶ್ವ ಈಜು ಚಾಂಪಿಯನ್‌ಷಿಪ್‌ನ 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದ ನಂತರ ಪೋಡಿಯಂನಲ್ಲಿ ಮುಖಭಂಗಕ್ಕೆ ಒಳಗಾದರು. ಈ ಸ್ಪರ್ಧೆಯಲ್ಲಿ ಮೊದಲಿಗನಾಗಿದ್ದ ಸ್ಪರ್ಧಿಯ ವಿವಾದಾತ್ಮಕ ಅನರ್ಹತೆಯ ನಂತರ ಚಿನ್ನ ಚೀನಾ ಈಜುಗಾರನ ಪಾಲಾಗಿತ್ತು.

ಸನ್‌ಗೆ ಪದಕ ಪ್ರದಾನದ ವೇಳೆ ಇರುಸುಮುರುಸು ಎದುರಾಗುತ್ತಿರುವುದು ಇದು ಎರಡನೇ ಬಾರಿ. ತುರುಸಿನ ಸ್ಪರ್ಧೆ ಕಂಡ 200 ಮೀ. ಫ್ರೀಸ್ಟೈಲ್‌ನಲ್ಲಿ ಲಿಥುವೇನಿಯಾದ ದಾನಶ್‌ ರಾಪ್ಸಿಸ್‌, ಒಲಿಂಪಿಕ್‌ ಚಾಂಪಿಯನ್‌ ಸನ್‌ ಅವರನ್ನು ಹಿಂದಕ್ಕೆ ಹಾಕಿದ್ದರು. ರಾಪ್ಸಿಸ್‌, ಸ್ಪರ್ಧೆ ಆರಂಭದ ಬ್ಲಾಕ್‌ನಲ್ಲಿ ಚಲನೆ ತೋರಿದ ಕಾರಣ ಅವರನ್ನು ಸ್ಪರ್ಧೆಯ ನಂತರ ಅನರ್ಹಗೊಳಿಸಲಾಯಿತು.

ಬ್ರಿಟನ್‌ನ ಡಂಕನ್‌ ಸ್ಕಾಟ್‌ ಮತ್ತು ರಷ್ಯಾದ ಮಾರ್ಟಿನ್‌ ಮಾಲ್ಯುಟಿನ್‌ ಅವರು ಒಂದೇ ಸಮಯ ತೆಗೆದುಕೊಂಡು ಮೂರನೇ ಸ್ಥಾನ ಹಂಚಿಕೊಂಡಿದ್ದರು. ಆದರೆ, ಯುರೋಪಿಯನ್‌ ಚಾಂಪಿಯನ್‌ ಸ್ಕಾಟ್‌, ಪೋಡಿಯಂನಲ್ಲಿ ಸನ್‌ ಅವರ ಕೈಕುಲುಕಲು ನಿರಾಕರಿಸಿ ಮುಜುಗರ ಉಂಟುಮಾಡಿದರು. ಆದರೆ, ಫಲಿತಾಂಶ ಪರಿಷ್ಕರಣೆಯ ನಂತರ ಎರಡನೇ ಸ್ಥಾನ ಪಡೆದ ಜಪಾನ್‌ನ ಕಾತ್ಸುಹಿರೊ ಮಾತ್ಸುಮೊಟೊ ಅವರಿಗೆ ಸ್ಕಾಟ್‌ ಹಸ್ತಲಾಘವ ನೀಡಿದರು. ಅಧಿಕೃತ ಫೋಟೊ ಸಮಾರಂಭಕ್ಕೂ ಸ್ಕಾಟ್‌ ಒಪ್ಪಲಿಲ್ಲ. ‘ಯೂ ಲೂಸ್‌, ಐ ವನ್‌’ ಎಂದು ಸನ್‌ ಕೋಪದಿಂದ ಉದ್ಗರಿಸಿದರು.

ಸನ್‌ 1ನಿ.44.93ಸೆ.ಗಳಲ್ಲಿ ದೂರ ಕ್ರಮಿಸಿದರೆ, ಕಾತ್ಸುಹಿರೊ ಮಾತ್ಸುಮೊಟೊ (1ನಿ.45.22 ಸೆ) ಎರಡನೇ ಸ್ಥಾನ ಪಡೆದರು. ಸ್ಕಾಟ್‌ ಮತ್ತು ರಷ್ಯಾದ ಮಾರ್ಟಿನ್‌ ಮಾಲ್ಯುಟಿನ್‌ (1ನಿ.45.63 ಸೆ.) ಮೂರನೇ ಸ್ಥಾನ ಹಂಚಿಕೊಂಡರು

11 ಬಾರಿಯ ವಿಶ್ವ ಚಾಂಪಿಯನ್‌ ಸನ್‌, ಉದ್ದೀಪನ ಮದ್ದು ಸೇವನೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಈ ಕೂಟದಲ್ಲಿ ಪಾಲ್ಗೊಳ್ಳಲು ಫಿನಾ (ವಿಶ್ವ ಈಜು ಸಂಸ್ಥೆ) ಹಸಿರು ನಿಶಾನೆ ತೋರಿಸಿದೆ. ಸನ್‌,ಕಳೆದ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ವೇಳೆ ತಮ್ಮ ರಕ್ತದ ಮಾದರಿಯಿದ್ದ ಗಾಜಿನ ಬಾಟಲಿಯನ್ನು ಸುತ್ತಿಗೆಯಿಂದ ಒಡೆದುಹಾಕಿದ್ದಾರೆಂಬ ಫಿನಾ ವರದಿ ಬಹಿರಂಗಗೊಂಡಿತ್ತು.‘ವಾಡಾ’ (ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ) ಅವರ ವಿರುದ್ಧ ಕ್ರೀಡಾ ನ್ಯಾಯಮಂಡಳಿ ಮೊರೆಹೋಗಿದೆ. ಸೆಪ್ಟೆಂಬರ್‌ನಲ್ಲಿ ಅವರ ಭವಿಷ್ಯ ನಿರ್ಧಾರವಾಗಲಿದೆ.

ಕಳೆದ ವಾರಾಂತ್ಯದಲ್ಲಿ 400 ಮೀ. ಫ್ರೀಸ್ಟೈಲ್‌ ಫೈನಲ್‌ನಲ್ಲಿ ಸನ್‌ ಅವರ ಹಿಂದೆಬಿದ್ದು ಎರಡನೇ ಸ್ಥಾನ ಪಡೆದ ಆಸ್ಟ್ರೇಲಿಯಾದ ಮ್ಯಾಕ್‌ ಹಾರ್ಟನ್‌ ಅವರು ಇದೇ ರೀತಿ ಸನ್‌ಗೆ ‘ಕೈ’ ಕೊಡದೇ ಅವಮಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT