ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌: ಸಿಂಧು–ಒಕುಹರಾ ಫೈನಲ್‌ ‘ಫೈಟ್‌’

7
ಇಂಟನಾನ್‌ ಎದುರು ಗೆದ್ದ ಭಾರತದ ಆಟಗಾರ್ತಿ: ಸೆಮಿಯಲ್ಲಿ ಸಮೀರ್‌ಗೆ ಸೋಲು

ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌: ಸಿಂಧು–ಒಕುಹರಾ ಫೈನಲ್‌ ‘ಫೈಟ್‌’

Published:
Updated:
Deccan Herald

ಗುವಾಂಗ್‌ಜೌ (ಪಿಟಿಐ): ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚೊಚ್ಚಲ ಚಿನ್ನದ ಪದಕ ಜಯಿಸುವ ಮಹದಾಸೆ ಹೊಂದಿರುವ ಭಾರತದ ಪಿ.ವಿ.ಸಿಂಧು ಈ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಇಡಬೇಕಿದೆ.

ಭಾನುವಾರ ನಡೆಯುವ ಫೈನಲ್‌ನಲ್ಲಿ ಸಿಂಧು, ಜಪಾನ್‌ನ ಆಟಗಾರ್ತಿ, ವಿಶ್ವ ಕ್ರಮಾಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ನೊಜೊಮಿ ಒಕುಹರಾ ವಿರುದ್ಧ ಸೆಣಸಲಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸಿಂಧು 21–16, 25–23 ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ರಚಾನೊಕ್‌ ಇಂಟನಾನ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 54 ನಿಮಿಷ ನಡೆಯಿತು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು ಮೊದಲ ಗೇಮ್‌ನ ಆರಂಭದಲ್ಲಿ ಎದುರಾಳಿಯಿಂದ ಕಠಿಣ ಸ್ಪರ್ಧೆ ಎದುರಿಸಿದರು. ಹೀಗಾಗಿ 7–7 ಸಮಬಲ ಕಂಡುಬಂತು. ನಂತರ ಸಿಂಧು ಆಕ್ರಮಣಕಾರಿ ಆಟ ಆಡಿದರು. ಎದುರಾಳಿ ಬಾರಿಸುತ್ತಿದ್ದ ಷಟಲ್‌ ಹಿಂತಿರುಗಿಸುವಲ್ಲಿ ಚುರುಕುತನ ತೋರಿದ ಅವರು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿ 11–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲೂ ಸಿಂಧು ಮಿಂಚಿದರು. ದೀರ್ಘ ರ‍್ಯಾಲಿಗಳನ್ನು ಆಡಿದ ಅವರು ಬಲಿಷ್ಠ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದ ಭಾರತದ ಆಟಗಾರ್ತಿ ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಸಿಂಧು ಎರಡನೇ ಗೇಮ್‌ನ ಶುರುವಿನಲ್ಲೂ ದಿಟ್ಟ ಆಟ ಆಡಿದರು. ಸತತ ನಾಲ್ಕು ಪಾಯಿಂಟ್ಸ್‌ ಗಳಿಸಿ ಎದುರಾಳಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಇಂಟನಾನ್‌ ಇದರಿಂದ ವಿಚಲಿತರಾಗಲಿಲ್ಲ. ಬೇಸ್‌ಲೈನ್‌ ಹೊಡೆತಗಳ ಮೂಲಕ ಸುಲಭವಾಗಿ ಪಾಯಿಂಟ್ಸ್‌ ಗಳಿಸಿದ ಅವರು 7–7ರ ಸಮಬಲಕ್ಕೆ ಕಾರಣರಾದರು. ಈ ಹಂತದಲ್ಲಿ  ಚುರುಕಿನ ಸಾಮರ್ಥ್ಯ ತೋರಿದ ಸಿಂಧು 10–7ರ ಮುನ್ನಡೆ ಪಡೆದರು. ಬಳಿಕ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಹೀಗಾಗಿ 10–10ರ ಸಮಬಲ ಕಂಡುಬಂತು.

ದ್ವಿತೀಯಾರ್ಧದಲ್ಲಿ ಸತತ ನಾಲ್ಕು ಪಾಯಿಂಟ್ಸ್‌ ಕಲೆಹಾಕಿದ ಸಿಂಧು ಮತ್ತೆ ಮುನ್ನಡೆ ತಮ್ಮದಾಗಿಸಿಕೊಂಡರು. ಆದರೆ ಇಂಟನಾನ್‌ ಎದೆಗುಂದಲಿಲ್ಲ. ವಿಶ್ವಾಸದಿಂದ ಹೋರಾಡಿದ ಅವರು 18–18ರಲ್ಲಿ ಸಮಬಲ ಸಾಧಿಸಿದರು. ನಂತರವೂ ರೋಚಕ ಪೈಪೋಟಿ ಕಂಡುಬಂತು. ಇಬ್ಬರೂ ಪಟ್ಟುಬಿಡದೆ ಹೋರಾಡಿದರು. ನಿರ್ಣಾಯಕ ಹಂತದಲ್ಲಿ ಒತ್ತಡ ಮೀರಿ ನಿಂತು ಆಡಿದ ಸಿಂಧು ಸತತ ಎರಡು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು ಖುಷಿಯ ಕಡಲಲ್ಲಿ ತೇಲಿದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಒಕುಹರಾ 21–17, 21–14ರಲ್ಲಿ ಅಕಾನೆ ಯಮಗುಚಿ ಅವರನ್ನು ಸೋಲಿಸಿದರು.

ಸಮೀರ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಸಮೀರ್‌ ವರ್ಮಾ ಸೆಮಿಫೈನಲ್‌ನಲ್ಲಿ ಎಡವಿದರು.

ಚೀನಾದ ಶಿ ಯೂಕಿ 12–21, 22–20, 21–17ರಲ್ಲಿ ಸಮೀರ್‌ ಅವರನ್ನು ಮಣಿಸಿದರು.

ಮೊದಲ ಗೇಮ್‌ನಲ್ಲಿ ಗೆದ್ದ ಸಮೀರ್, ಎರಡನೇ ಗೇಮ್‌ನಲ್ಲೂ ಛಲದಿಂದ ಹೋರಾಡಿದರು. ನಿರ್ಣಾಯಕ ಹಂತದಲ್ಲಿ ಕೆಲ ತಪ್ಪುಗಳನ್ನು ಮಾಡಿದ್ದು ಅವರಿಗೆ ಮುಳುವಾಯಿತು. ಮೂರನೇ ಗೇಮ್‌ನ ಮೊದಲಾರ್ಧದಲ್ಲಿ ಮಿಂಚಿದ ಸಮೀರ್‌, ದ್ವಿತೀಯಾರ್ಧದಲ್ಲಿ ಮಂಕಾದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಕೆಂಟೊ ಮೊಮೊಟಾ 21–14, 21–12ರಲ್ಲಿ ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ ಅವರನ್ನು ಪರಾಭವಗೊಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !