ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಬೆಳ್ಳಿಗೆ ಕೊರಳೊಡ್ಡಿದ ಪೂಜಾ

ರೆಪೆಚೆಜ್‌ ಸುತ್ತಿಗೆ ಕರ್ನಾಟಕದ ಅರ್ಜುನ್‌
Last Updated 2 ನವೆಂಬರ್ 2019, 14:07 IST
ಅಕ್ಷರ ಗಾತ್ರ

ಬುಡಾಪೆಸ್ಟ್‌: ಭಾರತದ ಪೂಜಾ ಗೆಹ್ಲೋಟ್‌ ಅವರು 23 ವರ್ಷದೊಳಗಿನವರ ಯುಡಬ್ಲ್ಯುಡಬ್ಲ್ಯು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಶನಿವಾರ ನಡೆದ ಮಹಿಳೆಯರ 53 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಪೂಜಾ 0–2 ಪಾಯಿಂಟ್ಸ್‌ನಿಂದ ಜಪಾನ್‌ನ ಹರುನಾ ಒಕುನೊ ಎದುರು ಪರಾಭವಗೊಂಡರು.

ಪುರುಷರ 77 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸಾಜನ್‌ ಭಾನಾವಾಲಾ 4–5 ಪಾಯಿಂಟ್ಸ್‌ನಿಂದ ಜಪಾನ್‌ನ ಕೊಡಾಯ್‌ ಸಕುರಾಬಾ ಎದುರು ಸೋತರು. ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿರುವ ಸಾಜನ್‌ ಅವರು ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

ಅರ್ಹತಾ ಹಂತದಲ್ಲಿ 6–0ರಿಂದ ಜೆಸ್ಸೆ ಅಲೆಕ್ಸಾಂಡರ್‌ ಪೋರ್ಟರ್‌ ಅವರನ್ನು ಮಣಿಸಿದ್ದ ಸಾಜನ್‌, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 3–1ರಿಂದ ಅಜರ್‌ಬೈಜಾನ್‌ನ ತುಂಜಾಯ್‌ ವಜಿರ್ಜದ್‌ ಎದುರು ಗೆದ್ದಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಅವರು 6–2ರಿಂದ ಸ್ವೀಡನ್‌ನ ಅಲ್ಬಿನ್‌ ಒಲೊಫ್ಸನ್‌ ವಿರುದ್ಧ ಜಯಿಸಿದ್ದರು.

ರೆಪೆಚೆಜ್‌ ಸುತ್ತಿಗೆ ಅರ್ಜುನ್‌: ಪುರುಷರ 55 ಕೆ.ಜಿ. ವಿಭಾಗದಲ್ಲಿ ಅಕಾಡಕ್ಕೆ ಇಳಿದಿದ್ದ ಕರ್ನಾಟಕದ ಅರ್ಜುನ್‌ ಹಲಕುರ್ಕಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.

ಅರ್ಜುನ್‌ 12–14ರಿಂದ ರಷ್ಯಾದ ಎಮಿನ್‌ ನಾರಿಮನೋವಿಚ್‌ ಸೆಫೆರ್ಸೊವ್‌ ಎದುರು ಮಣಿದರು. ಎಮಿನ್‌ ಅವರು ಫೈನಲ್‌ ಪ್ರವೇಶಿಸಿದ್ದರಿಂದ ಅರ್ಜುನ್‌ಗೆ ರೆಪೆಚೆಜ್‌ ಸುತ್ತಿನಲ್ಲಿ ಸೆಣಸುವ ಅವಕಾಶ ಸಿಕ್ಕಿತು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲಿ ಕರ್ನಾಟಕದ ಪೈಲ್ವಾನ 13–9ರಲ್ಲಿ ಇಟಲಿಯ ಗಿಯೊವನಿ ಫ್ರೆನಿ ಎದುರೂ, 9–0ರಲ್ಲಿ ಸರ್ಬಿಯಾದ ಸೆಬಾಸ್ಟಿಯನ್‌ ಕೊಲೊಂಪರ್‌ ಮೇಲೂ ವಿಜಯಿಯಾಗಿದ್ದರು.

87 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸುನಿಲ್‌ ಕುಮಾರ್‌ 0–8 ಪಾಯಿಂಟ್ಸ್‌ನಿಂದ ಉಕ್ರೇನ್‌ನ ಸೆಮೆನ್‌ ನೊವಿಕೊವ್‌ ಎದುರು ಸೋತರು. ಅರ್ಹತಾ ಹಂತದಲ್ಲಿ ಅವರು 7–2ರಿಂದ ಸಿದ್‌ ಅಜಾರ ಅವರನ್ನು ಮಣಿಸಿದ್ದರು.

63 ಕೆ.ಜಿ.ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ರಜೀತ್‌ 0–8ರಲ್ಲಿ ಅಗ್ರಶ್ರೇಯಾಂಕದ ಕುಸ್ತಿಪಟು ಸ್ಲಾವಿಕ್‌ ಗಲಸ್ಟ್ಯಾನ್‌ ಎದುರು ಪರಾಭವಗೊಂಡರು.

130 ಕೆ.ಜಿ.ವಿಭಾಗದ ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ದೀಪಕ್‌ ಪೂನಿಯಾ 1–6ರಲ್ಲಿ ಅಮೆರಿಕದ ಡೇವಿಡ್‌ ಟೆಟೆ ಒರ್ನ್‌ಡಾರ್ಫ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT