ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌: ಪ್ರಣವ್‌ ಆನಂದ್‌ಗೆ ‘ಡಬಲ್‌ ಧಮಾಕ’

ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಗ್ರ್ಯಾಂಡ್‌ಮಾಸ್ಟರ್‌ ಪಟ್ಟ
Last Updated 16 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರ್ಯಾಂಡ್‌ ಮಾಸ್ಟರ್‌ ಪಟ್ಟ ಲಭಿಸಿರುವುದರಿಂದ ಅತೀವ ಸಂತಸವಾಗಿದೆ. ಈ ಕ್ಷಣಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ. ಈಗ ನಿರಾಳನಾಗಿದ್ದೇನೆ’.

– ಭಾರತದ 76ನೇ ಹಾಗೂ ಕರ್ನಾಟಕದ ನಾಲ್ಕನೇ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡ ಯುವ ಚೆಸ್‌ ಪ್ರತಿಭೆ ಪ್ರಣವ್‌ ಆನಂದ್‌ ಅವರ ಮಾತಿದು.

ಬೆಂಗಳೂರಿನ 15 ವರ್ಷದ ಪ್ರಣವ್‌ಗೆ ಗುರುವಾರ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಲಭಿಸಿತ್ತು. ರೊಮೇನಿಯದಲ್ಲಿ ನಡೆಯುತ್ತಿರುವ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನ 10ನೇ ಸುತ್ತಿನ ಹಣಾಹಣಿಯ ಬಳಿಕ ಅವರಿಗೆ ಈ ಗೌರವ ಒಲಿದಿತ್ತು. ಜಿಎಂ ಪಟ್ಟಕ್ಕೆ ಅಗತ್ಯವಿದ್ದ 2,500 ಎಲೊ ಪಾಯಿಂಟ್ಸ್‌ ಗಡಿ ತಲುಪಲು ಯಶಸ್ವಿಯಾಗಿದ್ದರು.

ಈ ಟೂರ್ನಿ ಶುಕ್ರವಾರ ಕೊನೆಗೊಂಡಿದ್ದು, ಪ್ರಣವ್‌ 11 ಸುತ್ತುಗಳಲ್ಲಿ 9 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನ ಪಡೆದು, ಚಿನ್ನದ ಪದಕ ಗೆದ್ದುಕೊಂಡರು.

ಚೆಸ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಲಭಿಸಬೇಕಾದರೆ, ಮೂರು ಜಿಎಂ ನಾರ್ಮ್‌ಗಳನ್ನು ಪಡೆಯುವ ಜತೆಯಲ್ಲೇ 2,500 ಎಲೊ ಪಾಯಿಂಟ್ಸ್‌ ಹೊಂದಬೇಕು. ಪ್ರಣವ್‌, ಸ್ವಿಟ್ಜರ್‌ಲೆಂಡ್‌ನಲ್ಲಿ ಜುಲೈನಲ್ಲಿ ನಡೆದಿದ್ದ 55ನೇ ಬಿಯೆಲ್‌ ಚೆಸ್‌ ಫೆಸ್ಟಿವಲ್‌ನಲ್ಲಿ ಮೂರನೇ ಹಾಗೂ ಕೊನೆಯ ಜಿಎಂ ನಾರ್ಮ್‌ ಗಳಿಸಿದ್ದರು.

‘ಸ್ಲೊವೇಕಿಯದಲ್ಲಿ ಈಚೆಗೆ ನಡೆದ ಟೂರ್ನಿಯಲ್ಲೇ ಜಿಎಂ ಪಟ್ಟ ಪಡೆಯುವ ಗುರಿ ಇಟ್ಟುಕೊಂಡಿದ್ದೆ. ಆದರೆ ಅಲ್ಲಿ 2,500 ಎಲೊ ಪಾಯಿಂಟ್ಸ್‌ ಗಡಿ ತಲುಪಲು ಆಗಿರಲಿಲ್ಲ. ನನ್ನ ಕನಸು ಇಲ್ಲಿ ಈಡೇರಿದೆ. ಇಲ್ಲಿ ಚಾಂಪಿಯನ್‌ ಆಗಿರುವುದು ಸಂತಸ ಇಮ್ಮಡಿಗೊಳಿಸಿದೆ’ ಎಂದು ಪ್ರಣವ್‌, ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

‘ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡು 2,600 ಎಲೊ ಪಾಯಿಂಟ್ಸ್‌ ತಲುಪುವುದು ಮುಂದಿನ ಗುರಿ. ಆದರೆ ಅದಕ್ಕೂ ಮುನ್ನ ಕಲಿಕೆಯತ್ತ ಗಮನಹರಿಸಬೇಕಿದೆ’ ಎಂದು ಇಲ್ಲಿನ ಸರ್ಜಾಪುರ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ರುವ ಅವರು ತಿಳಿಸಿದರು.

ಪ್ರಣವ್‌ ಅವರ ತಂದೆ ಆನಂದ್‌ ಅನಂತ ನಾರಾಯಣನ್‌ ಮತ್ತು ತಾಯಿ ಅಪರ್ಣಾ ರಮೇಶ್‌ಕುಮಾರ್‌ ತಮಿಳುನಾಡು ಮೂಲದವರು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

‘ಪ್ರಣವ್‌, ಏಳನೇ ವಯಸ್ಸಿನಿಂದ ಚೆಸ್‌ ಆಡಲು ಶುರು ಮಾಡಿದ್ದ. ಬೆಂಗಳೂರಿನ ಚೆಸ್‌ ಶೂಟ್ಸ್‌ ಅಕಾಡೆಮಿಯಲ್ಲಿ ಜಯರಾಂ ರಾಮಣ್ಣ ಅವರ ಮಾರ್ಗದರ್ಶನದಲ್ಲಿ ಚೆಸ್‌ನ ಕಲೆಗಳನ್ನು ಕರಗತಮಾಡಿಕೊಂಡ. ಈಗ ಚೆನ್ನೈನ ಕೋಚ್‌ ವಿ.ಸರವಣನ್‌ ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಮಗನ ಸಾಧನೆ ಹೆಮ್ಮೆ ತಂದಿದೆ’ ಎಂದು ಆನಂದ್‌ ಅನಂತ ನಾರಾಯಣನ್‌ ಪ್ರತಿಕ್ರಿಯಿಸಿದರು.

ಕರ್ನಾಟಕದ ಅತ್ಯಂತ ಕಿರಿಯ ಜಿಎಂ ಎಂಬ ಗೌರವ ಪ್ರಣವ್‌ಗೆ (15 ವರ್ಷ, 10 ತಿಂಗಳು) ಸಂದಿದೆ. ಎಂ.ಎಸ್‌.ತೇಜಕುಮಾರ್‌, ಜಿ.ಎ.ಸ್ಟ್ಯಾನಿ ಮತ್ತು ಗಿರೀಶ್‌ ಕೌಶಿಕ್‌ ಅವರು ಜಿಎಂ ಪಟ್ಟ ಪಡೆದಿರುವ ಕರ್ನಾಟಕದ ಇತರರು.

ಕರ್ನಾಟಕದ ಅತ್ಯಂತ ಕಿರಿಯ ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಐಎಂ) ಎಂಬ ಗೌರವವೂ ಅವರಿಗೆ ಒಲಿದಿತ್ತು. 14 ವರ್ಷ 3 ತಿಂಗಳು ಆಗಿದ್ದಾಗ ಅವರಿಗೆ ಐಎಂ ಪದವಿ ದೊರೆತಿತ್ತು. 16 ವರ್ಷದೊಳಗಿನ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಣವ್ ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT