ಗುರುವಾರ , ಡಿಸೆಂಬರ್ 12, 2019
24 °C
‘ಕ್ರಾಸ್‌ ಓವರ್‌’ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದ ಬೆಲ್ಲಿ ಬೇಕರ್‌ ಬಳಗ

ವಿಶ್ವಕಪ್ ಹಾಕಿ: ಕ್ವಾರ್ಟರ್‌ನಲ್ಲಿ ಭಾರತ–ನೆದರ್ಲೆಂಡ್ಸ್‌ ಸೆಣಸು

Published:
Updated:
Deccan Herald

ಭುವನೇಶ್ವರ: ಭಾರತ ತಂಡ ಈ ಬಾರಿಯ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡದ ವಿರುದ್ಧ ಸೆಣಸಲಿದೆ. ಈ ಹೋರಾಟ ಗುರುವಾರ ನಡೆಯಲಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅಂತಿಮ ‘ಕ್ರಾಸ್‌ ಓವರ್‌’ ಪಂದ್ಯದಲ್ಲಿ ಬೆಲ್ಲಿ ಬೇಕರ್‌ ಸಾರಥ್ಯದ ನೆದರ್ಲೆಂಡ್ಸ್‌ 5–0 ಗೋಲುಗಳಿಂದ ಕೆನಡಾ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಭಾರತ ತಂಡ ‘ಸಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ವಿಶ್ವಕಪ್‌ನಲ್ಲಿ ಕೆನಡಾ ಎದುರು 3–0 ಗೆಲುವಿನ ದಾಖಲೆ ಹೊಂದಿದ್ದ ನೆದರ್ಲೆಂಡ್ಸ್‌ ತಂಡ ಮಂಗಳವಾರವೂ ಪಾರಮ್ಯ ಮೆರೆಯಿತು.

ಉಭಯ ತಂಡಗಳು ಆರಂಭದಿಂದಲೇ ತುರುಸಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲ ಕ್ವಾರ್ಟರ್‌ನ ಆಟ ಗೋಲು ರಹಿತವಾಗಿತ್ತು. ನಂತರದ ಮೂರು ಕ್ವಾರ್ಟರ್‌ಗಳಲ್ಲಿ ಬೇಕರ್ಸ್‌ ಬಳಗ ಮಿಂಚಿತು. 16 ನೇ ನಿಮಿಷದಲ್ಲಿ ಲಾರ್ಸ್‌ ಬಾಲ್ಕ್‌ ಫೀಲ್ಡ್‌ ಗೋಲು ಗಳಿಸಿ ತಂಡದ ಖಾತೆ ತೆರೆದರು. ಇದರ ಬೆನ್ನಲ್ಲೇ ರಾಬರ್ಟ್‌ ಕೆಂಪರ್‌ಮನ್‌ ಕೈಚಳಕ ತೋರಿದರು. ಫೀಲ್ಡ್‌ ಗೋಲು ಗಳಿಸಿದ ಅವರು ತಂಡದ ಸಂಭ್ರಮ ಹೆಚ್ಚಿಸಿದರು.

ಮೂರನೇ ಕ್ವಾರ್ಟರ್‌ನಲ್ಲೂ ನೆದರ್ಲೆಂಡ್ಸ್‌ ಆಟ ರಂಗೇರಿತು.  40ನೇ ನಿಮಿಷದಲ್ಲಿ ತಿಜಿಸ್‌ ವ್ಯಾನ್‌ ಡಮ್‌ ಗೋಲು ಹೊಡೆದು ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಇದರ ಬೆನ್ನಲ್ಲೇ (41ನೇ ನಿಮಿಷ) ಥಿಯೆರಿ ಬ್ರಿಂಕ್‌ಮನ್‌ ಚೆಂಡನ್ನು ಗುರಿ
ಮುಟ್ಟಿಸಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಅಂತಿಮ ಕ್ವಾರ್ಟರ್‌ನ ಶುರುವಿನಲ್ಲಿ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಕೆನಡಾ ತಂಡ ಹಿನ್ನಡೆ ತಗ್ಗಿಸಿಕೊಳ್ಳಲು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. 58ನೇ ನಿಮಿಷದಲ್ಲಿ ನೆದರ್ಲೆಂಡ್ಸ್‌ ತಂಡದ ಖಾತೆಗೆ ಮತ್ತೊಂದು ಗೋಲು ಸೇರ್ಪಡೆಯಾಯಿತು. ತಿಜಿಸ್‌ ವ್ಯಾನ್‌ ಡನ್‌ ವೈಯಕ್ತಿಕ ಎರಡನೇ ಗೋಲು ಗಳಿಸಿ ಸಂಭ್ರಮಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು