ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪೈಲ್ವಾನ್‌ ಮೇಷ್ಟ್ರು ಪಾಟೀಲರ ‘ಕುಸ್ತಿ ಸಂಸ್ಕಾರ’

ಪ್ರಶಸ್ತಿ ಪಡೆಯೋಕೆ ಅರ್ಜಿ ಹಾಕಬೇಕೇನ್ರಿ ಎನ್ನುತ್ತಿದ್ದ ಅಪರೂಪದ ಉಸ್ತಾದ್‌
Last Updated 11 ಸೆಪ್ಟೆಂಬರ್ 2020, 5:57 IST
ಅಕ್ಷರ ಗಾತ್ರ
ADVERTISEMENT
""

ಕುಂದಾನಗರಿ ಬೆಳಗಾವಿ ಹಾಗೂ ಸುತ್ತಮುತ್ತಲಿನ ಊರುಗಳು, ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ಧಾರವಾಡ ಜಿಲ್ಲೆಯ ಕಲಘಟಗಿ, ಕುಂದಗೋಳ, ಅಳ್ನಾವರ, ನವಲಗುಂದ, ಹುಬ್ಬಳ್ಳಿಯ ಅಕ್ಕಪಕ್ಕದ ಗ್ರಾಮಗಳನ್ನು ಒಂದು ಸುತ್ತು ಹಾಕಿ ಬಂದರೆ, ಪ್ರತಿ ಊರಿನಲ್ಲಿಯೂ ಗರಡಿ ಮನೆಗಳು ಕುಸ್ತಿಯ ಇತಿಹಾಸ ಹೇಳುತ್ತವೆ. ಹಳ್ಳಿಯ ಚಾವಡಿ ಕಟ್ಟೆ ಮೇಲೆ ಎಲೆ, ಅಡಿಕೆ ಅಗೆಯುತ್ತಾ ಕುಳಿತ ಹಿರಿಯರು ಕಾಣಿಸುತ್ತಾರೆ.

ಅವರನ್ನು ಮಾತಿಗೆಳೆದು ಕುಸ್ತಿ ಬಗ್ಗೆ ಅವರ ಅನುಭವಗಳನ್ನು ದಾಖಲಿಸುತ್ತ ಹೋದರೆ ಅದು ಪುಸ್ತಕಕ್ಕೆ ಆಗುವಷ್ಟು ಸರಕು. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮ್ಯಾಟ್‌ ಕುಸ್ತಿ ಪ್ರಖ್ಯಾತಿ ಪಡೆದಿದ್ದರೂ, ಹಳ್ಳಿಗಳಲ್ಲಿ ಈಗಲೂ ಸಾಂಪ್ರದಾಯಿಕ ಮಣ್ಣಿನ ಅಖಾಡದಲ್ಲೇ ಪೈಲ್ವಾನರಿಂದ ದೂಳು ಏಳುತ್ತದೆ. ಇದಕ್ಕೆ ಇಲ್ಲಿನ ಪರಂಪರೆ ಕಾರಣ. ಈ ಭಾಗದಲ್ಲಿ ಕುಸ್ತಿ ಪರಂಪರೆಗೆ ಗಟ್ಟಿತನ ತಂದುಕೊಂಡ ಅನೇಕ ಉಸ್ತಾದ್‌ಗಳಲ್ಲಿ ಬೆಳಗಾವಿ ತಾಲ್ಲೂಕಿನ ಕಿಣಿಯೆ ಗ್ರಾಮದ ಕೆ. ಎಂ. ಪಾಟೀಲ ಪ್ರಮುಖರು. ಅವರು ಇತ್ತೀಚೆಗೆ ನಿಧನರಾದರು. ಅವರು ಕಲಿಸಿದ ’ಕುಸ್ತಿ ಸಂಸ್ಕಾರ’ರ ಕಥನಗಳು ಮಾತ್ರ ಜೀವಂತವಾಗಿವೆ.

2003ರಲ್ಲಿ ಜಮಖಂಡಿಯಲ್ಲಿ ನಡೆದ ರತನಕುಮಾರ ಮಠಪತಿ (ಟ್ರೋಫಿ ಹಿಡಿದು ಹಾರಹಾಕಿಸಿಕೊಂಡವರು) ಅವರ ಕೊನೆಯ ಕುಸ್ತಿ ಸ್ಪರ್ಧೆಯ ವೇಳೆ ಜೊತೆಗಿದ್ದ ಮಠಪತಿ ಅವರ ಕೋಚ್‌ ಕೆ.ಎಂ. ಪಾಟೀಲ (ಬಲದಿಂದ ಎರಡನೆಯವರು)

ಸಾಂಪ್ರದಾಯಿಕ ಕುಸ್ತಿ ಕೌಶಲ ಮತ್ತು ವೈಜ್ಞಾನಿಕ ಅಧ್ಯಯನದಿಂದ ಕಲಿಸುವಿಕೆ ಎರಡೂ ಕ್ರಮಗಳನ್ನು ರೂಢಿಸಿಕೊಂಡಿದ್ದ ಅಪರೂಪದ ಕುಸ್ತಿ ಕೋಚ್‌ ಪಾಟೀಲರು. 75 ವರ್ಷಗಳ ಕಾಲ ಬದುಕಿದ್ದ ಅವರು ಕೊನೆಯ ದಿನಗಳ ತನಕವೂ ಕುಸ್ತಿ ಪಟ್ಟುಗಳನ್ನು ಹೇಳಿಕೊಡುವುದನ್ನು ಬಿಟ್ಟಿರಲಿಲ್ಲ. ತಾವು ಹತ್ತು ವರ್ಷದವರಿದ್ದಾಗ ಕುಸ್ತಿ ಕಲಿಕೆ ಆರಂಭಿಸಿದ ಪಾಟೀಲರು ಕುಸ್ತಿಗಾಗಿಯೇ ಬದುಕು ಮೀಸಲಿಟ್ಟರು. ದೆಹಲಿಯಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ನಲ್ಲಿ (ಎನ್‌ಐಎಸ್‌) ತರಬೇತಿ ಪಡೆದು ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕುಸ್ತಿ ಕೋಚ್‌ ಆಗಿ ನೇಮಕವಾದರು. ಬೆಳಗಾವಿಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದರು. ನಾಲ್ಕೈದು ದಶಕಗಳ ಹಿಂದೆ ಕ್ರೀಡೆ ವೈಜ್ಞಾನಿಕ ಅಧ್ಯಯನವಾಗಿರಲಿಲ್ಲ. ಅದರಲ್ಲೂ ಸಾಂಪ್ರದಾಯಿಕ ಕುಸ್ತಿ ಆಡಲು ಮತ್ತು ಕಲಿಯಲು ಯಾವುದೇ ಕಾಲೇಜುಗಳಲ್ಲಿ ಕೋರ್ಸ್‌ಗಳು ಇರಲಿಲ್ಲ. ಆಗಿನ ದಿನಗಳಲ್ಲಿ ಕುಸ್ತಿ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿ ಎನ್‌ಐಎಸ್‌ನಲ್ಲಿ ಕೋರ್ಸ್‌ ಪೂರ್ಣಗೊಳಿಸಿದವರು ಕರ್ನಾಟಕದ ಮಟ್ಟಿಗೆ ಟಿ.ಆರ್‌. ಸ್ವಾಮಿ ಮೊದಲಿಗರು. ಅವರನ್ನು ಹೊರತುಪಡಿಸಿದರೆ ಪಾಟೀಲರದ್ದೇ ಹೆಸರು.

ಒಲಿಂಪಿಯನ್‌ ಮೋಹನ ರಾಮಚಂದ್ರ (ಎಂ.ಆರ್) ಪಾಟೀಲ, ಅಂತರರಾಷ್ಟ್ರೀಯ ಪೈಲ್ವಾನರಾದ ರತನಕುಮಾರ ಮಠಪತಿ, ಶಿವಾಜಿ ಚಿಂಗಳೆ, ಮಹೇಶ ಡುಕುರೆ, ವಿನಾಯಕ ದಳವಿ, ಜಿ.ಎಂ. ನಾಯ್ಕ ಮುಂತಾದವರು ಪಾಟೀಲರ ಗರಡಿಯಲ್ಲಿ ಪಳಗಿದ ಪೈಲ್ವಾನರು. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಮೋಹನ ರಾಮಚಂದ್ರರು ಬೆಳಗಾವಿಯವರು. ಆಗ ಅವರು 62 ಕೆ.ಜಿ. ಗ್ರಿಕೊ ರೋಮನ್‌ ವಿಭಾಗದಲ್ಲಿ ಪಾಲ್ಗೊಂಡಿದ್ದರು. 8ರಿಂದ 12ನೇ ತರಗತಿ ಓದುವಾಗ ಐದು ವರ್ಷ ಕೆ. ಎಂ. ಪಾಟೀಲರ ಗರಡಿಯಲ್ಲಿ ಪಳಗಿದ್ದರು.

ಅಂತರರಾಷ್ಟ್ರೀಯ ಕುಸ್ತಿಪಟು ವಿನಾಯಕ ದಳವಿ ಕೂಡ ಕಿಣಿಯೆ ಗ್ರಾಮದವರು. ಹುಟ್ಟೂರಿನಲ್ಲಿ ಕೆ.ಎಂ. ಪಾಟೀಲರ ಗರಡಿಯಿಂದ ದಳವಿ ಕುಸ್ತಿ ಪಯಣ ಆರಂಭಿಸಿದ್ದರು. ಗುರುವಿನ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡ ದಳವಿಯವರು ’ಶಿಸ್ತು ಪಾಟೀಲ ಸರ್‌ ಜೀವಾಳವಾಗಿತ್ತು. ಕುಸ್ತಿಯಲ್ಲಿ ಕರ್ನಾಟಕದಲ್ಲಿ ಅವರಂಥ ಕೋಚ್‌ ಯಾರೂ ಇಲ್ಲ; ಮುಂದೆ ಬರುವುದು ಕಷ್ಟ. ಆರು ವರ್ಷ ಅವರ ಬಳಿ ತರಬೇತಿ ಪಡೆದ ದಿನಗಳನ್ನು ಮರೆಯಲಾಗದು. ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಅವರು ಹೇಳಿಕೊಟ್ಟ ಪಟ್ಟುಗಳೇ ಕಾರಣ’ ಎಂದರು.

ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ಗರಡಿ ಮನೆಗಳಿವೆ. ಅನೇಕ ಪೈಲ್ವಾನರು ಹಾಗೂ ಉಸ್ತಾದರು ಇದ್ದಾರೆ. ಆದರೆ ಪಾಟೀಲ ಸರ್‌ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಅವರು ಪಟ್ಟುಗಳನ್ನಷ್ಟೇ ಹೇಳಿಕೊಡದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು, ಸಂಸ್ಕಾರಗಳನ್ನು ರೂಢಿಸಿಕೊಳ್ಳುವ ವಿಧಾನ, ಕುಸ್ತಿಯಾಚೆಗಿನ ಬದುಕು ಹೇಗಿರಬೇಕು ಎನ್ನುವುದರ ಬಗ್ಗೆ ಅರಿವು ಮೂಡಿಸುತ್ತಿದ್ದರು. ಇದಕ್ಕೂ ಮೊದಲು ಅವರು ತಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು ಎನ್ನುತ್ತಾರೆ ದಳವಿ.

ರಷ್ಯಾ ಮತ್ತು ಈಜಿಪ್ಟ್‌ನಲ್ಲಿ ಅಂತರರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಜಯಿಸಿದ್ದ ರತನಕುಮಾರ ಮಠಪತಿ ತಮ್ಮ ಗುರುವನ್ನು ನೆಚ್ಚಿಕೊಂಡು ಭಾವುಕರಾದರು.

’1984ರಲ್ಲಿ ಕೆ.ಎಂ. ಪಾಟೀಲ ಸರ್‌ ಬಳಿ ತರಬೇತಿ ಆರಂಭಿಸಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವಸತಿ ನಿಲಯದಲ್ಲಿ ನಾಲ್ಕು ವರ್ಷ ಜೊತೆಗಿದ್ದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡು ಪದಕಗಳು, ಪೊಲೀಸ್‌, ರೈಲ್ವೆ ಇಲಾಖೆಯಲ್ಲಿ ನೌಕರಿ, 11ನೇ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧೆ, ರಾಷ್ಟ್ರೀಯ ಕುಸ್ತಿಯಲ್ಲಿ ಆರು ಚಿನ್ನ, ಸಂಗೊಳ್ಳಿ ರಾಯಣ್ಣ, ಏಕಲವ್ಯ ಮತ್ತು ರಾಜ್ಯೋತ್ಸವ ಹೀಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಈ ಎಲ್ಲ ಸಾಧನೆಗಳ ಹೊಳಪಿನ ಹಿಂದೆ ಇರುವುದು ಕೆ.ಎಂ. ಪಾಟೀಲ ಸರ್‌ ನೀಡಿದ ತರಬೇತಿಯ ಬೆಳಕು’ ಎನ್ನುತ್ತಾರೆ ಮಠಪತಿಯವರು.

ಬದುಕಿನ ಮೇಷ್ಟ್ರು

ಕೆ.ಎಂ. ಪಾಟೀಲರು ಕುಸ್ತಿ ಪಟ್ಟುಗಳನ್ನು ಹೇಳಿಕೊಟ್ಟ ಬಳಿಕ ನಿತ್ಯ ಒಂದೊಂದು ವಿಷಯದ ಬಗ್ಗೆ ಚರ್ಚೆ, ಸಂವಾದ, ಮಂಥನ ನಡೆಸುತ್ತಿದ್ದರು. ಬದುಕು, ಮೌಲ್ಯಗಳು, ಸಂಸ್ಕಾರ, ಜೀವನ, ತಂದೆ, ತಾಯಿ, ಸಂಬಂಧಗಳು ಹೀಗೆ ಒಂದೊಂದು ವಿಷಯದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಆದ್ದರಿಂದ ದಳವಿ ಮತ್ತು ಮಠಪತಿ ಅವರು ’ಬದುಕಿನಲ್ಲಿ ಯಾರು ಬೇಕಾದರೂ ಕುಸ್ತಿಪಟುವಾಗಬಹುದು. ಆದರೆ, ಸಂಸ್ಕಾರ ಕಲಿತು ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕುಸ್ತಿಪಟು ಆಗಲು ಪಾಟೀಲ ಸರ್‌ ರೀತಿ ಹೇಳಿಕೊಡಬೇಕು’ ಎಂದರು.

ಉದ್ಯೋಗಕ್ಕೂ ನೆರವು

ಒಂದು ವಯಸ್ಸಿನ ತನಕ ಕುಸ್ತಿ ಆಡಿದರೂ ನೌಕರಿ ಅವಕಾಶಗಳಿಲ್ಲದ ಕಾರಣ ಅನೇಕ ಜನ ಅರ್ಧದಲ್ಲಿಯೇ ಅಖಾಡದ ಮಣ್ಣಿಗೆ ಪ್ರೀತಿಪೂರ್ವಕವಾಗಿ ನಮಸ್ಕರಿಸಿ ಕುಸ್ತಿಯಿಂದ ದೂರ ಸರಿಯುತ್ತಾರೆ. ಕುಸ್ತಿ ಮಾಡಲು ಬೇಕಾಗುವ ಹಣ ಹೊಂದಿಸಲು ಬಹುತೇಕ ಪೈಲ್ವಾನರು ಆರ್ಥಿಕವಾಗಿ ಸಮರ್ಥರಾಗಿರುವುದಿಲ್ಲ.

ಇದನ್ನು ಚೆನ್ನಾಗಿಯೇ ಅರಿತಿದ್ದ ಕೆ.ಎಂ. ಪಾಟೀಲರು ಕುಸ್ತಿಪಟುಗಳ ಸರ್ಕಾರಿ ನೌಕರಿಗೆ ನೆರವಾಗುತ್ತಿದ್ದರು. ಅವರ ಬಳಿ ತರಬೇತಿ ಪಡೆದ ಅನೇಕ ಪೈಲ್ವಾನರು ಈಗ ರೈಲ್ವೆ, ಪೊಲೀಸ್‌ ಇಲಾಖೆ, ಏರ್‌ಫೋರ್ಸ್‌ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದಾದ್ಯಂತ ದೊಡ್ಡ ಶಿಷ್ಯ ಬಳಗವೇ ಇದೆ. ಬದುಕಿನುದ್ದಕ್ಕೂ ಕುಸ್ತಿಯನ್ನೇ ಉಸಿರಾಗಿಸಿಕೊಂಡಿದ್ದ ಪಾಟೀಲರು ಅನೇಕ ಪ್ರಶಸ್ತಿಗಳನ್ನು ಪಡೆಯುವ ಅರ್ಹತೆ ಹೊಂದಿದ್ದರೂ ಎಂದೂ ಅದರ ಹಿಂದೆ ಹೋದವರಲ್ಲ. ತಲೆ ಕೆಡಿಸಿಕೊಂಡವರೂ ಅಲ್ಲ. ಕುಸ್ತಿಯಲ್ಲಿ ದ್ರೋಣಾಚಾರ್ಯರಾದರೂ ಯಾವ ಪ್ರಶಸ್ತಿಯೂ ಬಂದಿಲ್ಲ. ಪ್ರಶಸ್ತಿ ಬಗ್ಗೆ ಅವರನ್ನೊಮ್ಮೆ ಶಿಷ್ಯರು ಪ್ರಶ್ನಿಸಿದ್ದಾಗ ‘ಅರ್ಜಿ ಹಾಕಿ ಪ್ರಶಸ್ತಿ ತೊಗೊಬೇಕಿನ್ರಿ...’ ಎಂದಿದ್ದರಂತೆ!

ಚಿರಸ್ಥಾಯಿ: ಬೆಳಗಾವಿ ಅನೇಕ ಮಲ್ಲ, ಜಗಮಲ್ಲರ ತವರು. ಪ್ರಸಿದ್ಧ ಮಲ್ಲವೀರ ಮಲ್ಲಪ್ಪ ತಡಾಕೆ, ಅಹಿಂದ ಕೇಸರಿ ಗೌರವ ಪಡೆದಿದ್ದ ಚಿಕ್ಕೋಡಿಯ ಶ್ರೀಪತಿ ಕಂಚಿನಾಳೆ, ಸಾಂಬ್ರಾದ ಶಿವಾಜಿ ಚಿಂಗಳೆ, ಬೆಳಗಾವಿ ಜಿಲ್ಲೆಯ ಚಂದ್ರು ಕುರುವಿನಕೊಪ್ಪ, ಕಿತ್ತೂರು ಕೇಸರಿ ಬೈಲಹೊಂಗಲದ ಬಸಪ್ಪ ಮಲ್ಲಾಪುರ, ಅಥಣಿ ತಾಲ್ಲೂಕಿನ ಶಂಕರ ಮುರಗುಂಡಿ ಕುಂಬಾರ, ಜುಂಜರವಾಡ ಗ್ರಾಮದ ರಾಮ–ಲಕ್ಷ್ಮಣ ಸಹೋದರ ಜೋಡಿ, ಮಹದೇವ ಗಾವಡೆ, ರಾಜಸಾಬ್ ಉಗರಗೋಳ ಹೀಗೆ ಅನೇಕ ಪೈಲ್ವಾನರು ಕುಸ್ತಿಗೆ ಘನತೆ ತಂದುಕೊಟ್ಟವರು. ಇಂಥ ದೊಡ್ಡ ಇತಿಹಾಸ ಹೊಂದಿರುವ ಕುಂದಾನಗರಿಯ ಕುಸ್ತಿ ಅಖಾಡದಲ್ಲಿ ಮತ್ತು ತರಬೇತಿಯಲ್ಲಿ ಕೆ.ಎಂ. ಪಾಟೀಲ ಅವರು ಹೆಸರು ಚಿರಸ್ಥಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT